ಒಂದು ವೈರಸ್ ಎಂಟ್ರಿ, 14 ಕೋಟಿ ರೂ ಕಳೆದುಕೊಂಡು ರ‍್ಯಾಪಿಡೋ ಚಾಲಕನಾದ ಉದ್ಯಮಿ ಕಣ್ಣೀರ ಕತೆ ಅನಾವರಣಗೊಂಡಿದೆ. ಇದೇ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ವ್ಯಕ್ತಿ ಈ ಉದ್ಯಮಿ ಕತೆ ಹೇಳಿದ್ದಾರೆ. ಕುಟುಂಬದ ಉದ್ಯಮ, ಸ್ಟಾರ್ಟ್ಅಪ್ ಎಲ್ಲವೂ ನಷ್ಟವಾಗಿದ್ದು ಹೇಗೆ?

ನೋಯ್ಡಾ(ಡಿ.23) ಹೊಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿ ಬಳಿಕ ಕುಟುಂಬ ನಡೆಸುತ್ತಿದ್ದ ಅತೀ ದೊಡ್ಡ ಉದ್ಯಮದಲ್ಲಿ ಮಹತ್ತರ ಜವಾಬ್ದಾರಿ, ಇಡೀ ಉದ್ಯಮ ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿದ, ಇದರ ಜೊತೆಗೆ ಸ್ಟಾರ್ಟ್ಅಪ್ ಉದ್ಯಮಕ್ಕೂ ಹೈಹಾಕಿ ಆರಂಭಿಕ ಯಶಸ್ಸು ಕಂಡಿದ್ದ. ಆದರೆ ಒಂದು ವೈರಸ್ ಎಂಟ್ರಿಯಿಂದ ಕುಟುಂಬ ಹಾಗೂ ತಾನು ಕಟ್ಟಿದ ಉದ್ಯಮ, ತಾನು ಆರಂಭಿಸಿದ ಸ್ಟಾರ್ಟ್ಅಪ್, ಆಸ್ತಿ ಸಂಪತ್ತು, ಐಷಾರಾಮಿ ಜೀವನ, ಕಾರು ಎಲ್ಲವೂ ಕ್ಷಣಾರ್ಧದಲ್ಲೇ ಮಾಯವಾಗಿತ್ತು.ಕೊನೆಗೆ ಉಳಿದುಕೊಂಡಿದ್ದು ಕೇವಲ ಒಂದು ಬೈಕ್ ಮಾತ್ರ. ಇದೀಗ ಅದೇ ಬೈಕ್ ಬಳಸಿ ರ‍್ಯಾಪಿಡೋ ಚಾಲಕನಾಗಿ ಬದುಕು ಸಾಗಿಸುತ್ತಿರುವ ಉದ್ಯಮಿಯ ಕಣ್ಣೀರ ಕತೆ ಅನಾವರಣಗೊಂಡಿದೆ. ಎಕ್ಸ್ ಬಳಕೆದಾರ ಚಿರಾಗ್ ಈ ಉದ್ಯಮಿಯ ಕರಾಳ ಅಧ್ಯಾಯ ಬಹಿರಂಗಪಡಿಸಿದ್ದಾರೆ.

ಉದ್ಯಮಿಯಿಂದ ರ‍್ಯಾಪಿಡೋ ಚಾಲಕನಾದ ದುರಂತ ಕತೆ

ಚಿರಾಗ್ ಕೆಲಸದ ನಿಮಿತ್ತ ತೆರಳಲು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಾರೆ. ಕೆಲವೇ ನಿಮಿಷದಲ್ಲಿ ಬೈಕ್ ಟ್ಯಾಕ್ಸಿ ಆಗಮಿಸಿದೆ. ಬೈಕ್ ಹತ್ತುವಾದ ಎಲ್ಲಿ ಬಿಡಬೇಕು, ಏನು ಎತ್ತ ಎಂಬ ಸಾಮಾನ್ಯ ಪ್ರಶ್ನೆಗಳನ್ನು ರ‍್ಯಾಪಿಡೋ ಚಾಲಕ ಕೇಳಿದ್ದಾನೆ. ಇದಕ್ಕೆ ಉತ್ತರಿಸಿ ಬೈಕ್ ಹತ್ತಿದ ಚಿರಾಗ್‌ ಬೈಕ್ ಇಳಿಯುವ ವೇಳೆ ಹೃದಯ ಭಾರವಾಗಿತ್ತು. ಬದುಕು ಕೆಲವೊಂದು ಬಾರಿ ಎಷ್ಟು ಕ್ರೂರಿ, ವಿಧಿ ಎನೆಲ್ಲಾ ಆಟವಾಡುತ್ತೆ ಎಂದು ಚಿರಾಗ್ ಹೇಳಿಕೊಂಡಿದ್ದಾರೆ. ಚಿರಾಗ್, ಈ ರ‍್ಯಾಪಿಡೋ ಚಾಲಕನ ದುರಂತ ಕತೆ ತೆರೆದಿಟ್ಟಿದ್ದಾರೆ.

ಕೆಲ ಮಾತುಕತೆಯಲ್ಲಿ ಚಾಲಕನ ಕುರಿತು ಕೇಳಿದ ಪ್ರಶ್ನೆಯಿಂದ ಆತನ ತನ್ನ ಬದುಕಿನ ಕತೆ ಹೇಳಲು ಆರಂಭಿಸಿದ್ದಾನೆ ಎಂದು ಚಿರಾಗ್ ತನ್ನ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ರ‍್ಯಾಪಿಡೋ ಚಾಲಕ, ಅಮಿಟಿಯಲ್ಲಿ ಹೊಟೆಲ್ ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿದ್ದ. ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಬಳಿಕ ಸಂಪೂರ್ಣವಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಈ ಉದ್ಯಮದಲ್ಲಿ ಮಹತ್ತರ ಜವಾಬ್ದಾರಿ, ಸಂಪತ್ತು, ಆಸ್ತಿ, ಆದಾಯ, ಹೀಗೆ ಯಾವುದರಲ್ಲೂ ಯಾವುದೇ ಕೊರತೆ ಇರಲಿಲ್ಲ. ತಿಂಗಳ ಆದಾಯ, ಖರ್ಚು ವೆಚ್ಚಕ್ಕೆ ಲೆಕ್ಕವೇ ಇರಲಿಲ್ಲ. ಕುಟುಂಬ ಜೊತೆ ಸಂತಸದ ಸಮಯ, ಔಟಿಂಗ್ ಹೀಗೆ ಎಲ್ಲವೂ ಖುಷಿಯಲ್ಲಿತ್ತು ಎಂದು ಆತ ರೈಡ್‌ನಲ್ಲಿ ಹೇಳಿಕೊಂಡಿದ್ದಾನೆ.

ವೈರಸ್ ಎಂಟ್ರಿಯಿಂದ ಉದ್ಯಮಿ ಬದುಕೇ ಸಂಕಷ್ಟ

ಹೌದು, ಇದು ಅಂತಿಂತ ವೈರಸ್ ಅಲ್ಲ, ಕೋವಿಡ್ ಮಹಾಮಾರಿ. ಜಗತ್ತನ್ನೇ ಕೆಲ ವರ್ಷಗಳ ಕಾಲ ಸ್ಥಗಿತಗೊಳಿಸಿದ ವೈರಸ್. ಈ ವೈರಸ್‌ನಿಂದ ಉದ್ಯಮಿಯ ಎಲ್ಲಾ ಉದ್ಯಮಕ್ಕೆ ಹೊಡೆತ ಬಿತ್ತು. ಇರುವ ಹಣದಲ್ಲಿ ಉದ್ಯಮ ಮುನ್ನಡೆಸುವ ಪರಿಶ್ರಮ ನಡೆಯಿತು. ಕೆಲ ದಿನಗಳ ಬಳಿಕ ಲಾಕ್‌ಡೌನ್ ಸರಿಯಾಗಲಿದೆ. ಎಲ್ಲವೂ ಸಾಮಾನ್ಯವಾಗಲಿದೆ ಎಂದುಕೊಂಡು, ಕಂಪನಿ ಆದಾಯ, ತಮ್ಮ ಆದಾಯ, ಉಳಿತಾಯ ಹಣ ಎಲ್ಲಾ ಸೇರಿಸಿ ಉದ್ಯಮ ಮುನ್ನಡೆಸುವ ಪ್ರಯತ್ನ ನಡೆಯಿತು. ಅನಿವಾರ್ಯವಾಗಿ ಉದ್ಯಮ ಮುಚ್ಚಬೇಕಾಯಿತು. ಕೋವಿಡ್ ಆರಂಭಕ್ಕೂ ಮೊದಲು ಆರಂಭಿಸಿದ ಸ್ಟಾರ್ಟ್ ಅಪ್ ಉದ್ಯಮ ಕೂಡ ಮುಚ್ಚಬೇಕಾಯಿತು. ನೌಕರ ವೇತನ, ಪರಿಹಾರ, ಕಂಪನಿ ಮೇಲಿನ ಸಾಲ ಎಲ್ಲವೂ ಒಂದೇ ಬಾರಿ 13ರಿಂದ 14 ಕೋಟಿ ರೂಪಾಯಿ ನಷ್ಟವಾಯಿತು. ಮತ್ತೆ ಉದ್ಯಮ ಕಟ್ಟಲು ನಡೆಸಿದ ಪ್ರಯತ್ನ ವಿಫಲವಾಯಿತು. ಇರುವ 5 ಲಕ್ಷ ರೂಪಾಯಿ ಹಣದಲ್ಲಿ 4 ಲಕ್ಷ ರೂಪಾಯಿ ಖರ್ಚು ಮಾಡಿ ಗೆಳೆಯನ ಜೊತೆ ಸೇರಿ ಸ್ಟಾರ್ಟ್ಅಪ್ ಉದ್ಯಮ ಆರಂಭಿಸಿದ. ಆದರೆ ಅದು ನಡೆಯಲಿಲ್ಲ. ಕಾರು, ಮನೆ, ಎಲ್ಲವೂ ಸಾಲ ತೀರಿಸಲು ಮಾರಬೇಕಾಯಿತು.ಕೆಲವು ಬ್ಯಾಂಕ್ ಹರಾಜಿನಲ್ಲಿ ಕೈತಪ್ಪಿತು. ಎಲ್ಲಾ ಸಾಲ ತೀರಿದಾಗ ಉಳಿದಿದ್ದು ಬೈಕ್ ಮಾತ್ರ ಎಂದು ರ‍್ಯಾಪಿಡೋ ಚಾಲಕ ಕಣ್ಣೀರಿಟ್ಟಿದ್ದಾನೆ. ಈ ಘಟನೆ ಕುರಿತು ಚಿರಾಗ್ ಹೇಳಿಕೊಂಡಿದ್ದಾರೆ.

ಕೊನೆಯ ಪ್ರಯತ್ನ ಮಾಡುತ್ತೇನೆ

ನಾನು ಸೋತಿದ್ದೇನೆ. ರ‍್ಯಾಪಿಡೋ ಚಾಲನೇ ಮಾಡುತ್ತಾ ಜೀವನ ಸಾಗುತ್ತಿದೆ. ಒಂದಷ್ಟು ಹಣ ಕೂಡಿಟ್ಟು, ಮತ್ತೆ ಉದ್ಯಮದ ಪ್ರಯತ್ನ ಮಾಡುತ್ತೇನೆ. ಇದು ಕೊನೆಯ ಪ್ರಯತ್ನ. ಗೆಲುವಿನ ವಿಶ್ವಾಸವಿದೆ. ಸದ್ಯ ಬದುಕು ನಿರ್ವಹಣೆ ಮಾತ್ರ ಸಾಧ್ಯವಾಗುತ್ತಿದೆ ಎಂದು ರ‍್ಯಾಪಿಡೋ ಚಾಲಕ ಹೇಳಿಕೊಂಡಿದ್ದಾನೆ.

Scroll to load tweet…