ಇತ್ತೀಚಿನ ದಿನಗಳಲ್ಲಿ ದೈನಂದಿನ ಕೊರೋನಾ ಕೇಸುಗಳ ಇಳಿಕೆ ಪ್ರಮಾಣ ಇಳಿಮುಖ ನಿತ್ಯದ ಪ್ರಕರಣಗಳು 30-40 ಸಾವಿರಕ್ಕಿಂತ ಕೆಳಗೆ ಇಳಿಯದೇ ಅದೇ ಅಂಕಿಯಯಲ್ಲೇ ಹೊಯ್ದಾಡುತ್ತಿವೆ 3ನೇ ಅಲೆಯ ಆರಂಭದ ಸಂಕೇತದಂತಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ

 ನವದೆಹಲಿ (ಜು.17): ಕೊರೋನಾ 2ನೇ ಅಲೆ ಇಳಿಕೆ ಆದಂತೆ ಭಾಸವಾಗುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ದೈನಂದಿನ ಕೊರೋನಾ ಕೇಸುಗಳ ಇಳಿಕೆ ಪ್ರಮಾಣ ಇಳಿಮುಖವಾಗುತ್ತಿದೆ. ಅಂದರೆ ನಿತ್ಯದ ಪ್ರಕರಣಗಳು 30-40 ಸಾವಿರಕ್ಕಿಂತ ಕೆಳಗೆ ಇಳಿಯದೇ ಅದೇ ಅಂಕಿಯಯಲ್ಲೇ ಹೊಯ್ದಾಡುತ್ತಿವೆ. ಇದು 3ನೇ ಅಲೆಯ ಆರಂಭದ ಸಂಕೇತದಂತಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಇನ್ನೂ 3-4 ತಿಂಗಳ ಕಾಲ ಕೊರೋನಾ ವಿರುದ್ಧದ ಹೋರಾಟವು ಹೆಚ್ಚು ಮಹತ್ವದ್ದಾಗಿದೆ ಎಂದು ಅದು ಒತ್ತಿ ಹೇಳಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌, ‘ಕೊರೋನಾ ಮಾರ್ಗಸೂಚಿಗಳ ಪಾಲನೆ ಮತ್ತು ದೇಶದಲ್ಲಿ ಎಷ್ಟುಜನರಿಗೆ ಲಸಿಕೆ ನೀಡಲಾಗಿದೆ ಎಂಬುದರ ಮೇಲೆ 3ನೇ ಅಲೆ ಆಗಮನದ ನಿರ್ಧಾರವಾಗಲಿದೆ’ ಎಂದರು.

ಕೇರಳ, ಮಹಾರಾಷ್ಟ್ರದಲ್ಲೇ 3ನೇ ಅಲೆಯೂ ಆರಂಭ!

ಮಾಸ್ಕ್‌ ಧಾರಣೆ ಕುಸಿತ: ‘2ನೇ ಅಲೆ ಆವರಿಸಿದ ಮಾರ್ಚ್, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಜನರು ಮಾಸ್ಕ್‌ ಧಾರಣೆ, ದೈಹಿಕ ಅಂತರ ಪಾಲನೆ ಸೇರಿ ಇನ್ನಿತರ ಮಾರ್ಗಸೂಚಿಗಳನ್ನು ಜನ ಕಟ್ಟುನಿಟ್ಟಾಗಿ ಪಾಲಿಸಿದರು. ಆದರೆ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಿನ ಜನ ಮಾಸ್ಕ್‌ ಹಾಕಿಕೊಳ್ಳುತ್ತಿಲ್ಲ. ಜೊತೆಗೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ವೇಳೆಗೆ ಮತ್ತಷ್ಟುಮಂದಿ ಮಾಸ್ಕ್‌ ಹಾಕಿಕೊಳ್ಳುವುದನ್ನು ಬಿಡಲಿದ್ದಾರೆ. ಆದರೆ ಇದು ಕೊರೋನಾ ಹೆಚ್ಚಳಕ್ಕೆ ಕಾರಣವಾಗಲಿದೆ’ ಎಂದು ಅಗರ್‌ವಾಲ್‌ ಎಚ್ಚರಿಸಿದರು.

ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ.ಕೆ. ಪೌಲ್‌ ಮಾತನಾಡಿ, ‘ನಮ್ಮ ಲಸಿಕೆಗಳು ಸುರಕ್ಷಿತ. ಆದರೆ, ಲಸಿಕೆಗಳ ಮೇಲೆಯೇ ಅವಲಂಬನೆ ಸಾಧ್ಯವಿಲ್ಲ. ಮಾಸ್ಕ್‌ ಧರಿಸಲೇಬೇಕು’ ಎಂದು ಮನವಿ ಮಾಡಿದರು.

‘ಜು.15ರವರೆಗೆ ದೇಶದ 12 ರಾಜ್ಯಗಳ 47 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಕೊರೋನಾ ಪಾಸಿಟಿವಿಟಿ ವರದಿ ಆಗುತ್ತಿದೆ. ಹೀಗಾಗಿ ಕೊರೋನಾ ಅಂತ್ಯವಾಗುವ ಕಾಲ ಇನ್ನೂ ದೂರವಿದೆ. ದೇಶದಲ್ಲಿ ಇನ್ನೂ 2ನೇ ಅಲೆಯ ಅಂತ್ಯವಾಗಿಲ್ಲ’ ಎಂದೂ ಅವರು ನುಡಿದರು.

ಗಿರಿಧಾಮ ಜನಜಂಗುಳಿ ಬಗ್ಗೆ ಎಚ್ಚರಿಕೆ: ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಪ್ರತ್ಯೇಕ ಪ್ರಕಟಣೆ ಹೊರಡಿಸಿ ನೀಡಿ, ‘ಪ್ರವಾಸಿ ತಾಣಗಳು ಹಾಗೂ ಗಿರಿಧಾಮಗಳಲ್ಲಿ ವ್ಯಾಪಕವಾಗಿ ಕೊರೋನಾ ನಿಯಮ ಉಲ್ಲಂಘನೆ ಆಗುತ್ತಿದೆ. ಈ ಬಗ್ಗೆ ರಾಜ್ಯಗಳು ಗಮನ ಹರಿಸಬೇಕು ಹಾಗೂ ಆರೋಗ್ಯ ಮೂಲಸೌಕರ‍್ಯ ಸುಧಾರಣೆಯತ್ತ ಗಮನ ಹರಿಸಬೇಕು’ ಎಂದು ರಾಜ್ಯಗಳಿಗೆ ಸೂಚಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona