ಶ್ರೀನಗರದ ಹಜರತ್‌ ಬಾಲ್‌ ದರ್ಗಾದಲ್ಲಿ ನವೀಕರಣದ ನಂತರ ಅಶೋಕ ಸ್ತಂಭವನ್ನು ಅಳವಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಎನ್‌ಸಿ ಶಾಸಕರು ಧಾರ್ಮಿಕ ನಂಬಿಕೆಗಳಿಗೆ ವಿರುದ್ಧ ಎಂದು ಆಕ್ಷೇಪ ವ್ಯಕ್ತಪಡಿಸಿದರೆ, ಬಿಜೆಪಿ ನಾಯಕರು ಇದನ್ನು ರಾಜಕೀಯ ಪಿತೂರಿ ಎಂದು ಕರೆದಿದ್ದಾರೆ.

ನವದೆಹಲಿ (ಸೆ.5): ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನವೀಕರಣಗೊಂಡ ಹಜರತ್‌ ಬಾಲ್‌ ದರ್ಗಾದ ಉದ್ಘಾಟನಾ ಫಲಕದಲ್ಲಿ ರಾಷ್ಟ್ರೀಯ ಲಾಂಛನವಾದ ಅಶೋಕಸ್ತಂಭವನ್ನು ಮುದ್ರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಉದ್ಘಾಟನಾ ಫಲಕದ ಮೇಲೆ ರಾಷ್ಟ್ರೀಯ ಲಾಂಛನ ಇದ್ದಿದ್ದು ಕಾಶ್ಮೀರದಲ್ಲಿನ ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಶಾಸಕ ತನ್ವೀರ್‌ ಸಾದಿಕ್‌ ಹಾಗೂ ಬಿಜೆಪಿ ನಾಯಕ ದರಕ್ಷಣ್ ಅಂದ್ರಾಬಿ ನಡುವೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲಿಯೇ ಅಲ್ಲಿಯೇ ಇದ್ದ ಕೆಲ ವ್ಯಕ್ತಿಗಳನ್ನು ಕಲ್ಲುಗಳನ್ನು ಬಳಸಿ, ಲಾಂಛನವನ್ನು ವಿರೂಪಗೊಳಿಸಿರುವ ವಿಡಿಯೋ ವೈರಲ್‌ ಆಗಿದೆ.

ಶಾಸಕ ತನ್ವೀರ್‌ ಸಾದಿಕ್‌ ಆಕ್ಷೇಪ

ದರ್ಗಾದ ಒಳಗಡೆ ಇರುವ ಫಲಕದಲ್ಲಿ ರಾಷ್ಟ್ರೀಯ ಲಾಂಛನವನ್ನು ಇಡುವುದಕ್ಕೆ ಎನ್‌ಸಿ ಮುಖ್ಯ ವಕ್ತಾರ ಮತ್ತು ಶಾಸಕ ತನ್ವೀರ್ ಸಾದಿಕ್ ಆಕ್ಷೇಪ ವ್ಯಕ್ತಪಡಿಸಿದ ನಂತರ ವಿವಾದ ಆರಂಭವಾಯಿತು. "ನಾನು ಧಾರ್ಮಿಕ ವಿದ್ವಾಂಸನಲ್ಲ, ಆದರೆ ಇಸ್ಲಾಂನಲ್ಲಿ, ವಿಗ್ರಹಾರಾಧನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ಅತ್ಯಂತ ಗಂಭೀರ ಪಾಪ. ನಮ್ಮ ನಂಬಿಕೆಯ ಅಡಿಪಾಯ ತೌಹೀದ್. ಜರತ್‌ಬಾಲ್ ದರ್ಗಾದಲ್ಲಿ ಕೆತ್ತಿದ ಪ್ರತಿಮೆಯನ್ನು ಇಡುವುದು ಈ ನಂಬಿಕೆಗೆ ವಿರುದ್ಧವಾಗಿದೆ. ಪವಿತ್ರ ಸ್ಥಳಗಳು ತೌಹೀದ್‌ನ ಶುದ್ಧತೆಯನ್ನು ಮಾತ್ರ ಪ್ರತಿಬಿಂಬಿಸಬೇಕು, ಬೇರೇನೂ ಅಲ್ಲ," ಎಂದು ಮುಖ್ಯಮಂತ್ರಿ ಮತ್ತು ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರ ಆಪ್ತ ಸಹಾಯಕರಾಗಿರುವ ಸಾದಿಕ್, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Scroll to load tweet…

ಪುನರ್ನಿರ್ಮಾಣ ಮತ್ತು ನವೀಕರಣದ ಒಂದು ವರ್ಷದ ನಂತರ ದರ್ಗಾದ ಮುಖ್ಯ ಆವರಣವನ್ನು ತೆರೆಯಲಾಯಿತು ಮತ್ತು ವಕ್ಫ್ ಮಂಡಳಿಯ ಅಧ್ಯಕ್ಷರಾದ ಅಂದ್ರಾಬಿ ಇದನ್ನು ಉದ್ಘಾಟಿಸಿದ್ದಾರೆ. ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಈದ್-ಎ-ಮಿಲಾದ್‌ಗಾಗಿ ಇಂದು ದರ್ಗಾದಲ್ಲಿ ಹೆಚ್ಚಿನ ಸಂಖ್ಯೆಯ ಜನ ಜಮಾಯಿಸಿದ್ದರು.

ನಂತರ ಅಲ್ಲಿಯೇ ಇದ್ದ ಕೆಲ ವ್ಯಕ್ತಿಗಳು ಉದ್ಘಾಟನಾ ಫಲಕದಿಂದ ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಿ ತೆಗೆದುಹಾಕುತ್ತಿರುವ ವೀಡಿಯೊಗಳು ಮತ್ತು ಚಿತ್ರಗಳು ವೈರಲ್ ಆದವು. ವೀಡಿಯೊದಲ್ಲಿ, ಕೆಲವು ವ್ಯಕ್ತಿಗಳು ಕಲ್ಲಿನಿಂದ ಲಾಂಛನವನ್ನು ಜಜ್ಜಿ ವಿರೂಪ ಮಾಡುತ್ತಿರುವುದು ಕಂಡುಬಂದಿದೆ, ಆದರೆ ನಂತರ ಪುರುಷರು ಮತ್ತು ಮಹಿಳೆಯರು ಅವರ ಸುತ್ತಲೂ ಜಮಾಯಿಸಿ ಇಸ್ಲಾಂ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ.

ಗೂಂಡಾಗಳನ್ನು ಕಳಿಸಿದ ಶಾಸಕ

"ಇಂದು ಈ ಘಟನೆ ನಡೆದಿರುವುದು ತುಂಬಾ ದುರದೃಷ್ಟಕರ. ಈ ಘಟನೆಯನ್ನು ಚುನಾಯಿತ ಶಾಸಕರು ಪ್ರಚೋದಿಸಿದ್ದಾರೆ. ಇದು ಅವರ ಪಿತೂರಿಯಾಗಿದ್ದರೆ, ಅವರನ್ನು ನಾಯಕ ಎಂದು ಕರೆಯಬಾರದು. ಇಂದು, ಅವರು ರಾಷ್ಟ್ರೀಯ ಲಾಂಛನವನ್ನು ಪುಡಿಮಾಡಲು ತಮ್ಮ ಗೂಂಡಾಗಳನ್ನು ಕಳುಹಿಸಿದ್ದಾರೆ. ನಿನ್ನೆಯಿಂದ ಅವರು ಪಿತೂರಿ ನಡೆಸುತ್ತಿರುವುದರಿಂದ ನಾನು ಪೊಲೀಸರಿಗೆ ಇದರ ಬಗ್ಗೆ ಎಚ್ಚರಿಕೆ ನೀಡಿದ್ದೆ. ಈ ಗೂಂಡಾಗಳನ್ನು ಬಹಿರಂಗಪಡಿಸಬೇಕು ಮತ್ತು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು" ಎಂದು ಆಂದ್ರಾಬಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದಾರ.

ಆಡಳಿತ ಪಕ್ಷವು "ಯಾವಾಗಲೂ ರಾಜಕೀಯಕ್ಕಾಗಿ ದರ್ಗಾಗಳನ್ನು ದುರುಪಯೋಗಪಡಿಸಿಕೊಂಡಿದೆ" ಎಂದು ಹೇಳುವ ಮೂಲಕ ಅಂದ್ರಾಬಿ, ಎನ್‌ಸಿ ಪಕ್ಷವನ್ನು ಟೀಕಿಸಿದ್ದಾರೆ. "ನಾನು ವಕ್ಫ್ ಮಂಡಳಿಯ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ನಮ್ಮ ಪಕ್ಷ (ಬಿಜೆಪಿ) ವಕ್ಫ್ ಮೇಲೆ ಯಾವುದೇ ರಾಜಕೀಯ ಮಾಡಿಲ್ಲ. ದರ್ಗಾವನ್ನು ರಾಜಕೀಯ ವೇದಿಕೆಯಾಗಿ ಬಳಸುವುದನ್ನು ನಾನು ನಿಲ್ಲಿಸಿದ್ದೇನೆ" ಎಂದು ಅವರು ಹೇಳಿದರು.