ಲಖನೌ(ಅ.13): ಉತ್ತರ ಪ್ರದೇಶ ಹಾಥ್ರಸ್‌ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಸಂತ್ರಸ್ತೆ ಕುಟುಂಬ ಸದಸ್ಯರು ಸೋಮವಾರ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ಮುಂದೆ ಹಾಜರಾದರು.

ಸಂತ್ರಸ್ತೆಯ ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಬಿಗಿ ಭದ್ರತೆಯ ಮಧ್ಯೆ ಕೋರ್ಟ್‌ಗೆ ಕರೆತರಲಾಯಿತು. ಈ ವೇಳೆ ಪ್ರಕರಣವನ್ನು ಉತ್ತರ ಪ್ರದೇಶದಿಂದ ಅನ್ಯ ರಾಜ್ಯಕ್ಕೆ ವರ್ಗಾಯಿಸಬೇಕು. ಸಿಬಿಐ ವರದಿಯನ್ನು ಗೌಪ್ಯವಾಗಿಡಬೇಕು. ಜೊತೆಗೆ, ಕೇಸ್‌ ಇತ್ಯರ್ಥವಾಗುವವರೆಗೂ ಕುಟುಂಬ ಸದಸ್ಯರಿಗೆ ಭದ್ರತೆ ನೀಡಬೇಕು ಎಂದು ಸಂತ್ರಸ್ತೆ ಪರ ವಾದ ಮಂಡಿಸುತ್ತಿರುವ ವಕೀಲೆ ಸೀಮಾ ಕುಶ್ವಾಹಾ ಅವರು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದಾರೆ.

ಈ ವೇಳೆ ಹಾಥ್ರಸ್‌ ಜಿಲ್ಲಾ ಮ್ಯಾಜಿಸ್ಪ್ರೇಟ್‌, ರಾಜ್ಯ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಡಿಜಿಪಿ ಸಹ ಕೋರ್ಟ್‌ಗೆ ಹಾಜರಾಗಿದ್ದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ರಾತ್ರೋರಾತ್ರಿ ಅಂತ್ಯಸಂಸ್ಕಾರ ನಡೆಸಲಾಗಿತ್ತು. ಇದರಲ್ಲಿ ಯಾರಿಂದಲೂ ಒತ್ತಡವಿರಲಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಪ್ರೇಟ್‌ ಮಾಹಿತಿ ನೀಡಿದರು.

ಆದರೆ, ಈ ಹೇಳಿಕೆ ಬಗ್ಗೆ ಗರಂ ಆದ ನ್ಯಾಯಾಲಯ, ಒಂದು ವೇಳೆ ಸಂತ್ರಸ್ತೆ ಶ್ರೀಮಂತ ವ್ಯಕ್ತಿಯೊಬ್ಬರ ಪುತ್ರಿ ಅಥವಾ ನಿಮ್ಮ ಮಗಳೇ ಆಗಿದ್ದರೆ ಇದೇ ರೀತಿ ಸುಟ್ಟು ಹಾಕಲಾಗುತ್ತಿತ್ತೇ? ಆಕೆಯ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದು ನಿಮಗೆ ಹೇಗೆ ಗೊತ್ತು? ಈ ಕುರಿತಾದ ತನಿಖೆ ಮುಕ್ತಾಯವಾಗಿದೆಯೇ? ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.