Asianet Suvarna News Asianet Suvarna News

ಮಹಿಳಾ ಪೊಲೀಸ್‌ಗೆ ‘Get Out’ ಎಂದ ಹರ್ಯಾಣ ಮಹಿಳಾ ಆಯೋಗದ ಅಧ್ಯಕ್ಷೆ: ಕ್ಯಾಮೆರಾದಲ್ಲಿ ಸೆರೆ..!

ಮಹಿಳಾ ಆಯೋಗದ ಅಧ್ಯಕ್ಷೆ ಸಭೆಯೊಂದರಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರ ಜತೆ ವಾಗ್ವಾದ ನಡೆಸಿದ್ದು, ಅಲ್ಲದೆ, ಈ ವೇಳೆ ಸಿಟ್ಟಿಗೆದ್ದ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ, ಪೊಲೀಸ್‌ ಅಧಿಕಾರಿಗೆ ಹೊರಕ್ಕೆ ಹೋಗು ಎಂದು ಕೈ ತೋರಿಸಿ ಕೂಗಾಡಿದ್ದಾರೆ. 

haryana women panel chief vs woman cop on viral video ash
Author
First Published Sep 10, 2022, 12:57 PM IST

ಹರ್ಯಾಣ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಮಹಿಳಾ ಪೊಲೀಸ್ ಅಧಿಕಾರಿಯ ನಡುವೆ  ತೀವ್ರ ವಾಗ್ವಾದ ನಡೆದ ಘಟನೆ ಹರ್ಯಾಣದ ಕೈತಾಲ್‌ನಲ್ಲಿ ನಡೆದಿದೆ. ಕ್ಯಾಮೆರಾಗಳ ಎದುರೇ ಇವರಿಬ್ಬರೂ ವಾಗ್ವಾದ ನಡೆಸಿದ್ದು, ನಂತರ ಈ ಜಗಳ ತಾರಕಕ್ಕೇರಿ ಒರಟು ಭಾಷೆಗೆ ತಿರುಗಿತು ಎಂದು ತಿಳಿದುಬಂದಿದೆ. ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಚರ್ಚೆಯನ್ನು ಒಳಗೊಂಡಿದ್ದ ಸಭೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರು ಪೊಲೀಸ್ ಅಧಿಕಾರಿಯ ಮೇಲೆ ಕೂಗಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಸ್ಥಳೀಯ ಪತ್ರಕರ್ತರೊಬ್ಬರು ರೆಕಾರ್ಡ್ ಮಾಡಿದ ವೀಡಿಯೋದಲ್ಲಿ, "ನೀವು ಅವರನ್ನು ಕಪಾಳಮೋಕ್ಷ ಮಾಡಬಹುದಿತ್ತೇ..? ಹುಡುಗಿಯನ್ನು 3 ಬಾರಿ ಪರೀಕ್ಷೆ ಮಾಡಲಾಗಿದೆಯೇ.. ಹೊರಹೋಗಿ..! ನಾನು ಏನನ್ನೂ ಕೇಳಲು ಬಯಸುವುದಿಲ್ಲ" ಎಂದು ರೇಣು ಭಾಟಿಯಾ ಅವರು ಹೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಅಲ್ಲದೆ, ಪೊಲೀಸ್ ಅಧಿಕಾರಿ ಇದನ್ನು ಪ್ರತಿಭಟಿಸಿದ್ದಕ್ಕೆ, "ಎಸ್‌ಎಚ್‌ಒ ಅವಳನ್ನು ಹೊರಗೆ ಕರೆದುಕೊಂಡು ಹೋಗು. ನೀನು ಇಲಾಖಾ ವಿಚಾರಣೆಯನ್ನು ಎದುರಿಸಲಿದ್ದೀಯ" ಎಂದು ಕೈ ತೋರಿಸಿ ಸಭೆಯಿಂದ ಆಚೆ ಹೋಗುವಂತೆ ಹೇಳಿದರು. ಶುಕ್ರವಾರ ನಡೆದ ಸಭೆಯ ವೇಳೆ ಈ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.

ನಂತರ, ಪೊಲೀಸ್ ಅಧಿಕಾರಿಯನ್ನು ಸಹೋದ್ಯೋಗಿಯೊಬ್ಬರು ಕೊಠಡಿಯಿಂದ ಭೌತಿಕವಾಗಿ ಹೊರಹಾಕುವವರೆಗೂ ಕಟುವಾದ ವಾಗ್ವಾದ ಮುಂದುವರೆಯಿತು ಎಂದು ತಿಳಿದುಬಂದಿದೆ. ಅಲ್ಲದೆ, "ನಾವು ಅವಮಾನಿಸಲು ಇಲ್ಲಿಗೆ ಬರುವುದಿಲ್ಲ," ಎಂದು ಮಹಿಳಾ ಅಧಿಕಾರಿಯು ಕೊನೆಯಲ್ಲಿ ಹೇಳುವುದನ್ನು ಕೇಳಲಾಗುತ್ತದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ರೇಣು ಭಾಟಿಯಾ "ಹಾಗಾದರೆ ನೀವು ಹುಡುಗಿಯನ್ನು ಅವಮಾನಿಸಲು ಇಲ್ಲಿಗೆ ಬಂದಿದ್ದೀರಾ?" ಎಂದು ಹೇಳಿದ್ದಾರೆ. ಪತಿ-ಪತ್ನಿಯರ ನಡುವಿನ ವಿವಾದವನ್ನು ಪೊಲೀಸ್ ಅಧಿಕಾರಿ ನಿಭಾಯಿಸಿದ ಬಗೆಯನ್ನು ಮಹಿಳಾ ಆಯೋಗ ಪ್ರಶ್ನಿಸಿದ್ದು, ಈ ವೇಳೆ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನು ಓದಿ: Viral Video: ಮದ್ಯದಂಗಡಿ ಗೋಡೆ ಕೊರೆದು ಒಳ ನುಗ್ಗಿದ ಕಳ್ಳರು: ಕಂಠಪೂರ್ತಿ ಕುಡಿದು ಸಿಕ್ಕಿಬಿದ್ದರು

"ನಮಗೆ ಪತಿ ಮತ್ತು ಹೆಂಡತಿಯನ್ನು ಒಳಗೊಂಡ ಪ್ರಕರಣ ಸಿಕ್ಕಿತು. ಪತಿ ಆಯೋಗದ ಸದಸ್ಯರು ಮತ್ತು ಪೊಲೀಸರೊಂದಿಗೂ ಹಲವಾರು ಬಾರಿ ಅನುಚಿತವಾಗಿ ವರ್ತಿಸಿದರು. ಪತಿಯ ಪ್ರಕಾರ, ತನ್ನ ಹೆಂಡತಿ ದೈಹಿಕವಾಗಿ ಫಿಟ್‌ ಆಗಿರಲಿಲ್ಲ. ಈ ಹಿನ್ನೆಲೆ, ಆತ ಹೆಂಡತಿಗೆ ವಿಚ್ಛೇದನ ನೀಡಲು ಬಯಸಿದ್ದಾನೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ, ತನ್ನ ಹಾಗೂ ಮಹಿಳಾ ಪೊಲೀಸ್‌ ಅಧಿಕಾರಿಯ ವಾಗ್ವಾದದ ನಂತರ ಮಾಧ್ಯಮಗಳಿಗೆ ತಿಳಿಸಿದರು.

"ಆದ್ದರಿಂದ, ನಾವು ಇಬ್ಬರಿಗೂ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿದ್ದೇವೆ. ಮತ್ತು ಮಹಿಳೆಯನ್ನು 3 ಬಾರಿ ಪರೀಕ್ಷಿಸಿದಾಗಲೂ, ಆ ವ್ಯಕ್ತಿ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ್ದರು. ತನಿಖಾಧಿಕಾರಿಯೂ ಪರೀಕ್ಷೆ ಮಾಡಿಸಲು ವಿಫಲರಾಗಿದ್ದಾರೆ. ಆದ್ದರಿಂದ ನಾವು ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದೇವೆ" ಎಂದೂ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದರು. ಆದರೆ, ತನ್ನ ಮೇಲಿನ ಆರೋಪದ ಬಗ್ಗೆ ಪೊಲೀಸ್ ಅಧಿಕಾರಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಸಾವಿನಿಂದ ಕೂದಲೆಳೆ ಅಂತರದಿಂದ ಪಾರಾದ ಪಾದಾಚಾರಿ ಮಹಿಳೆ: ಭಯಾನಕ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು ಹಾಗೂ ಮಾಧ್ಯಮಗಳು ಅಪ್ಲೋಡ್ ಮಾಡಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. 

Follow Us:
Download App:
  • android
  • ios