ಉಪರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಷ್ಟ್ರಪತಿಗಳನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. .
ನವದೆಹಲಿ (ಜು.22): ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಆರೋಗ್ಯ ಕಾರಣಗಳಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ 24 ಗಂಟೆಗಳ ಒಳಗೆ, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು. ಈ ಭೇಟಿಯನ್ನು ರಾಜಕೀಯ ವಲಯದಲ್ಲಿ ಮಹತ್ವದ್ದೆಂದು ಪರಿಗಣಿಸಲಾಗಿದ್ದು, ಹರಿವಂಶ್ ಅವರಿಗೆ ಉಪರಾಷ್ಟ್ರಪತಿ ಸ್ಥಾನದ ಜವಾಬ್ದಾರಿ ಸಿಗುವ ಸಾಧ್ಯತೆ ಕುರಿತು ಊಹಾಪೋಹಗಳು ತೀವ್ರಗೊಂಡಿವೆ.
ಜಗದೀಪ್ ಧನಕರ್ ಅವರು ಸೋಮವಾರ (ಜುಲೈ 21, 2025) ಸಂಜೆ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದರು, ಇದನ್ನು ರಾಷ್ಟ್ರಪತಿಗಳು ಜುಲೈ 22ರಂದು ಅಂಗೀಕರಿಸಿದರು. ರಾಜೀನಾಮೆಯಲ್ಲಿ ಆರೋಗ್ಯಕ್ಕೆ ಆದ್ಯತೆ ನೀಡುವ ಉದ್ದೇಶ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸುವ ಅಗತ್ಯವನ್ನು ಧನಕರ್ ಉಲ್ಲೇಖಿಸಿದ್ದರು. ಈ ದಿಢೀರ್ ರಾಜೀನಾಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹರಿವಂಶ್ ನಾರಾಯಣ್‌ಗೆ ಉಪರಾಷ್ಟ್ರಪತಿ ಸ್ಥಾನ?
ಸಂವಿಧಾನದ 67ನೇ ವಿಧಿಯ ಪ್ರಕಾರ, ರಾಜ್ಯಸಭಾ ಅಧ್ಯಕ್ಷ ಸ್ಥಾನ ಖಾಲಿಯಾದ ನಂತರ, ಹರಿವಂಶ್ ನಾರಾಯಣ್ ಅವರು ಹಂಗಾಮಿ ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರನ್ನು ಉಪಾಧ್ಯಕ್ಷರನ್ನಾಗಿ ಮಾಡುವ ಊಹಾಪೋಹಗಳು ಕೂಡ ತೀವ್ರಗೊಂಡಿವೆ. ಜಗದೀಪ್ ಧನಕರ್ ಅವರ ರಾಜೀನಾಮೆಯ ನಂತರ , ದೇಶಾದ್ಯಂತ ಮುಂದಿನ ಉಪಾಧ್ಯಕ್ಷ ಸ್ಥಾನಕ್ಕೆ ಸಂಭಾವ್ಯ ಮುಖಗಳ ಕುರಿತು ಚರ್ಚೆಗಳು ಪ್ರಾರಂಭವಾಗಿವೆ. ಹರಿವಂಶ್ ನಾರಾಯಣ್ ಅವರನ್ನು ಈಗ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ.
ಧನಕರ್ ರಾಜೀನಾಮೆಗೆ ವಿರೋಧ ಪಕ್ಷಗಳು ಅಚ್ಚರಿ:
ಧನಕರ್ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಆಶ್ಚರ್ಯ ವ್ಯಕ್ತಪಡಿಸಿವೆ. ಕಾಂಗ್ರೆಸ್‌ನ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, 'ಉಪರಾಷ್ಟ್ರಪತಿಯ ರಾಜೀನಾಮೆಯ ಕಾರಣವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದು, ಅಲ್ಲದೇ ಧನಕರ್ ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ, ಆದರೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕನಿಷ್ಠ ಅವರಿಗೆ ಧನ್ಯವಾದವಾದರೂ ಹೇಳಬೇಕಿತ್ತು, ಎಂದು ಸಂಸತ್ತಿನ ಆವರಣದಲ್ಲಿ ಕೇಂದ್ರದ ನಡೆ ಟೀಕಿಸಿದ್ದಾರೆ.
ಧನಕರ್ ರಾಜೀನಾಮೆ ಆಘಾತಕಾರಿ: ಜೈರಾಮ್ ರಮೇಶ್:
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಜಗದೀಪ್ ಧನಕರ್ ಅವರ ರಾಜೀನಾಮೆ ಆಘಾತಕಾರಿಯಾಗಿದೆ. ಅವರು ಆರೋಗ್ಯ ಕಾರಣವನ್ನು ಉಲ್ಲೇಖಿಸಿದ್ದಾರೆ, ಆದರೆ ಇದರ ಹಿಂದೆ ಬೇರೆ ಕಾರಣಗಳಿವೆಯೇ ಎಂದು ಶಂಕೆಯಿದೆ' ಎಂದು Xನಲ್ಲಿ ಬರೆದಿದ್ದಾರೆ. ರಾಜೀನಾಮೆಯ ಹಿಂದಿನ ನಿಜವಾದ ಕಾರಣಗಳ ಕುರಿತು ಸರ್ಕಾರದಿಂದ ಸ್ಪಷ್ಟನೆ ಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
ಜಗದೀಪ್ ಧನಕರ್ ಹಿನ್ನೆಲೆ ಮತ್ತು ಭವಿಷ್ಯದ ಚರ್ಚೆ
ಜಗದೀಪ್ ಧನಕರ್ ಅವರು 2022ರ ಆಗಸ್ಟ್ 11ರಂದು 14ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಈಗ ರಾಜೀನಾಮೆಯಿಂದ ಉಂಟಾದ ಖಾಲಿ ಸ್ಥಾನಕ್ಕೆ ಹೊಸ ಉಪರಾಷ್ಟ್ರಪತಿಯ ಆಯ್ಕೆಯಾಗುವವರೆಗೆ, ಹರಿವಂಶ್ ನಾರಾಯಣ್ ಸಿಂಗ್ ಗೆ ಹೊಸ ಜವಾಬ್ದಾರಿ ನಿರ್ವಹಿಸಲಿದ್ದಾರೆ. ದೇಶಾದ್ಯಂತ ಮುಂದಿನ ಉಪರಾಷ್ಟ್ರಪತಿ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚೆಗಳು ಆರಂಭವಾಗಿದ್ದು, ಹರಿವಂಶ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ರಾಜಕೀಯ ವಿಶ್ಲೇಷಕರು ಪ್ರಕಾರ,ಹರಿವಂಶ್ ನಾರಾಯಣ್ ಸಿಂಗ್ ಅವರ ರಾಷ್ಟ್ರಪತಿ ಭೇಟಿಯು ಕೇವಲ ಔಪಚಾರಿಕವಾಗಿರಬಹುದು, ಆದರೆ ಇದು ಉಪರಾಷ್ಟ್ರಪತಿ ಸ್ಥಾನದ ಜವಾಬ್ದಾರಿಗೆ ಸಂಬಂಧಿಸಿದ ಚರ್ಚೆಗಳಿಗೆ ರಾಜಕೀಯ ಮಹತ್ವವನ್ನು ಸೃಷ್ಟಿಸಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಈ ಬೆಳವಣಿಗೆಯಿಂದ ರಾಜಕೀಯ ವಲಯದಲ್ಲಿ ಹೊಸ ತಿರುವುಗಳು ಉಂಟಾಗುವ ಸಾಧ್ಯತೆಯಿದೆ.
