ದೆಹಲಿ ಝೂನಲ್ಲಿ ಎರಡು ಕೊಕ್ಕರೆಗಳಲ್ಲಿ H5N1 ಬರ್ಡ್ ಫ್ಲೂ ಪತ್ತೆಯಾಗಿದೆ. ಸೋಂಕು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಝೂವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಮುಚ್ಚಲಾಗಿದೆ. ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಂಡಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ H5N1 ಬರ್ಡ್ ಫ್ಲೂ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ದೆಹಲಿ ಝೂವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಎರಡು ಹಕ್ಕಿಗಳಲ್ಲಿ H5N1 ಸೋಂಕು ದೃಢಪಟ್ಟಿದ್ದು, ಸೋಂಕಿನ ವಿಸ್ತರಣೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೆಹಲಿಯ ರಾಷ್ಟ್ರೀಯ ಪ್ರಾಣಿಸಂಗ್ರಹಾಲಯದಲ್ಲಿ (National Zoological Park) ಹಕ್ಕಿಗಳ ಆರೋಗ್ಯ ಪರೀಕ್ಷೆ ನಡೆಸುವ ವೇಳೆ, ಎರಡು ಕೊಕ್ಕರೆಗಳು ಬರ್ಡ್ ಫ್ಲೂ ವೈರಸ್ H5N1 ಸೋಂಕು ದೃಢಪಟ್ಟು ಮೃತಪಟ್ಟಿರುವುದು ದೃಢವಾಗಿದೆ. ಸೋಂಕಿನ ಭೀತಿಯಿಂದ ಮುಂದಿನ ಆದೇಶ ಹೊರಬರುವವರೆಗೂ ಝೂವನ್ನು ಸಾರ್ವಜನಿಕರಿಗೆ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯ ಎಚ್ಚರಿಕೆ

ಬರ್ಡ್ ಫ್ಲೂ ಮಾನವ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದೆಂಬ ಕಾರಣದಿಂದಾಗಿ, ಆರೋಗ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ತುರ್ತು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಝೂ ಪ್ರದೇಶದಲ್ಲಿ ತೀವ್ರ ಸ್ಯಾನಿಟೈಜೇಶನ್ ಕಾರ್ಯ ಆರಂಭವಾಗಿದ್ದು, ಸೋಂಕು ಹೆಚ್ಚುವ ಮುನ್ನ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಸಾರ್ವಜನಿಕರ ಆತಂಕ

ದೆಹಲಿಯಲ್ಲಿ ಬರ್ಡ್ ಫ್ಲೂ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಗಳು ಜನರಿಗೆ ಯಾವುದೇ ರೀತಿಯ ಗಾಬರಿಯಾಗದಂತೆ ಎಚ್ಚರಿಕೆ ನೀಡಿದ್ದು, ಸೋಂಕಿನ ಹರಡುವಿಕೆಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.

ಮುಂಜಾಗ್ರತಾ ಕ್ರಮಗಳು

  • ಝೂ ಪ್ರವೇಶವನ್ನು ತಕ್ಷಣದಿಂದಲೇ ನಿಲ್ಲಿಸಲಾಗಿದೆ.
  • ಎಲ್ಲಾ ಹಕ್ಕಿಗಳು ಮತ್ತು ಪ್ರಾಣಿಗಳ ಮೇಲೆ ವೈದ್ಯಕೀಯ ಪರಿಶೀಲನೆ ನಡೆಯುತ್ತಿದೆ.
  • ಸೋಂಕಿತ ಹಕ್ಕಿಗಳ ಸಂಪರ್ಕದಲ್ಲಿದ್ದ ಇತರ ಹಕ್ಕಿಗಳ ಮೇಲೂ ವಿಶೇಷ ಗಮನ ಹರಿಸಲಾಗಿದೆ.
  • ಜನರು ಸೋಂಕು ಹರಡುವ ಸಾಧ್ಯತೆಯಿರುವ ಹಕ್ಕಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ನೀಡಲಾಗಿದೆ.

ದೆಹಲಿ ಮೃಗಾಲಯದ ಪ್ರಕಟಣೆಯ ಪ್ರಕಾರ, ಮಾದರಿಗಳನ್ನು ಬುಧವಾರ ಭೋಪಾಲ್‌ನ ರಾಷ್ಟ್ರೀಯ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಸಂಸ್ಥೆಗೆ (NIHSAD) ತಪಾಸಣೆಗಾಗಿ ಕಳುಹಿಸಲಾಗಿತ್ತು. ಆಗಸ್ಟ್ 28 ರಂದು ಸಂಜೆ ಭೋಪಾಲ್‌ನ NIHSAD ನಿಂದ ಎರಡೂ ಮಾದರಿಗಳಲ್ಲಿ H5N1 ಏವಿಯನ್ ಇನ್‌ಫ್ಲುಯೆನ್ಸ ವೈರಸ್‌ ಇರುವುದು ಪತ್ತೆಯಾಗಿತ್ತು. ತಕ್ಷಣವೇ ಮೃಗಾಲಯ ಬಂದ್ ಮಾಡಿ ಇತರ ಪ್ರಾಣಿಗಳು, ಪಕ್ಷಿಗಳು ಮತ್ತು ಮೃಗಾಲಯದ ಸಿಬ್ಬಂದಿಗೆ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಯ್ತು. 2021 ರಲ್ಲಿ ಹಕ್ಕಿ ಜ್ವರ ಹರಡಿದ ಕಾರಣ ದೆಹಲಿ ಮೃಗಾಲಯವನ್ನು ಕೊನೆಯ ಬಾರಿಗೆ ಮುಚ್ಚಲಾಗಿತ್ತು. ಆ ವರ್ಷದ ಫೆಬ್ರವರಿಯಲ್ಲಿ ಮೃಗಾಲಯದ ಆವರಣದಿಂದ ಸಂಗ್ರಹಿಸಲಾದ ಪಕ್ಷಿ ಹಿಕ್ಕೆಗಳ ಏಳು ಮಾದರಿಗಳು ಹಕ್ಕಿ ಜ್ವರಕ್ಕೆ ಮೃತಪಟ್ಟಿರುವುದು ದೃಢವಾಗಿತ್ತು. ಇದಕ್ಕೂ ಮುನ್ನ ಅಕ್ಟೋಬರ್ 2016 ರಲ್ಲಿ ಕೂಡ ರೋಗ ಹರಡುವಿಕೆಯನ್ನು ತಡೆಗಟ್ಟಲು ಮೃಗಾಲಯ ಮುಚ್ಚಲಾಗಿತ್ತು.

ಬರ್ಡ್ ಫ್ಲೂ ಸೋಂಕಿನ ಮೂಲವನ್ನು ಪತ್ತೆಹಚ್ಚಲು ತಜ್ಞರ ತಂಡ ಕಾರ್ಯಾರಂಭಿಸಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ, ದೆಹಲಿ ಸರ್ಕಾರ ಮತ್ತು ಪಶುವೈದ್ಯಕೀಯ ಇಲಾಖೆ ನಡುವೆ ಸಂಯೋಜನೆ ಜರುಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.