ಕುರುಹು ಸಿಕ್ಕಿರುವ ವದಂತಿ ನಿಲ್ಲಿಸದಿದ್ದರೆ ಗ್ಯಾನವಾಪಿ ಮಸೀದಿ ಸರ್ವೇಗೆ ಬಹಿಷ್ಕಾರ: ಮುಸ್ಲಿಮರ ಬೆದರಿಕೆ
ಕಾಶಿಯ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಮಸೀದಿಯಲ್ಲಿ ಹಿಂದೂ ಧಾರ್ಮಿಕ ಚಿಹ್ನೆ ಹಾಗೂ ವಸ್ತುಗಳು ಸಿಕ್ಕಿವೆ ಎಂದು ವದಂತಿ ಹಬ್ಬಿಸುವುದನ್ನು ನಿಲ್ಲಿಸದಿದ್ದರೆ ಪುರಾತತ್ವ ಸಮೀಕ್ಷೆಯನ್ನು ಬಹಿಷ್ಕರಿಸುವುದಾಗಿ ಮುಸ್ಲಿಂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ವಾರಾಣಸಿ (ಆ.7): ಹಿಂದೂ ದೇಗುಲದ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆಯೇ ಎಂಬುದರ ಪತ್ತೆಗೆ ವಾರಾಣಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಇರುವ ಗ್ಯಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸುತ್ತಿರುವ ಸಮೀಕ್ಷೆ 3ನೇ ದಿನವಾದ ಭಾನುವಾರವೂ ಮುಂದುವರಿದಿದೆ. ಈ ನಡುವೆ, ಸಮೀಕ್ಷೆ ವೇಳೆ ಹಿಂದೂ ಧಾರ್ಮಿಕ ಚಿಹ್ನೆಗಳು ಹಾಗೂ ವಸ್ತುಗಳು ಪತ್ತೆಯಾಗಿವೆ ಎಂಬ ‘ವದಂತಿಯ’ನ್ನು ನಿಲ್ಲಿಸದೇ ಹೋದರೆ ಸಮೀಕ್ಷಾ ಕಾರ್ಯದಿಂದ ದೂರ ಉಳಿಯುವುದಾಗಿ ಮುಸ್ಲಿಮರು ಎಚ್ಚರಿಕೆ ನೀಡಿದ್ದಾರೆ.
ಮಸೀದಿಯಲ್ಲಿ ಭಾನುವಾರ ಬೆಳಗ್ಗೆ 8ಕ್ಕೆ ಆರಂಭವಾದ ಸಮೀಕ್ಷೆ ಸಂಜೆ 5ರವರೆಗೂ ನಡೆಯಿತು. ಶುಕ್ರವಾರ ಸಮೀಕ್ಷೆಯಿಂದ ದೂರ ಉಳಿದಿದ್ದ ಮುಸ್ಲಿಂ ಸಮುದಾಯದ ಪ್ರತಿನಿಧಿಗಳು ಶನಿವಾರದಂತೆ, ಭಾನುವಾರವೂ ಸಮೀಕ್ಷೆಯ ವೇಳೆ ಉಪಸ್ಥಿತರಿದ್ದರು.
ಸಮೀಕ್ಷೆಯ ಸಂದರ್ಭದಲ್ಲಿ ತಳಮಹಡಿಯಲ್ಲಿ ವಿಗ್ರಹ, ತ್ರಿಶೂಲ ಹಾಗೂ ಕಳಸ ಸಿಕ್ಕಿವೆ ಎಂದು ಕೆಲವು ಮಾಧ್ಯಮಗಳು ‘ವದಂತಿ’ ವರದಿ ಮಾಡುತ್ತಿವೆ. ಇದನ್ನು ನಿಲ್ಲಿಸುವುದಕ್ಕೆ ಕ್ರಮ ಕೈಗೊಳ್ಳದೆ ಹೋದರೆ, ಸಮೀಕ್ಷೆಯನ್ನು ಮತ್ತೆ ಬಹಿಷ್ಕರಿಸಬೇಕಾಗುತ್ತದೆ ಎಂದು ಗ್ಯಾನವಾಪಿ ಮಸೀದಿಯನ್ನು ನಿರ್ವಹಿಸುತ್ತಿರುವ ಅಂಜುಮನ್ ಇಂತೆಜಾಮಿಯಾ ಸಮಿತಿಯ ಜಂಟಿ ಕಾರ್ಯದರ್ಶಿ ಸೈಯದ್ ಮೊಹಮ್ಮದ್ ಯಾಸಿನ್ ಅವರು ಎಚ್ಚರಿಕೆ ನೀಡಿದರು.
ಜ್ಞಾನವಾಪಿ ಕ್ಯಾಂಪಸ್ ಸಮೀಕ್ಷೆ; ಈ ಪ್ರಮುಖ ವಿಷಯಗಳ ಬಗ್ಗೆ ನಿಮಗೆಷ್ಟು ಗೊತ್ತು?
ಮಸೀದೀಲಿ ವಿಗ್ರಹಗಳ ಕುರುಹು ಪತ್ತೆ:
17ನೇ ಶತಮಾನದ ಗ್ಯಾನವಾಪಿ ಮಸೀದಿಯನ್ನು ಕಾಶಿ ವಿಶ್ವನಾಥನ ಮೂಲ ಮಂದಿರ ಕೆಡವಿ ಕಟ್ಟಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ನಡೆಸಲಾಗುತ್ತಿರುವ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಶನಿವಾರವೂ ಮುಂದುವರೆಸಿದೆ. ಈ ವೇಳೆ ಹಿಂದೂ ದೇವರ ವಿಗ್ರಹಗಳ ಕುರುಹುಗಳು ಪತ್ತೆ ಆಗಿವೆ ಎಂಬ ಮಹತ್ವದ ವಿಚಾರವನ್ನು ಸಮೀಕ್ಷೆ ವೇಳೆ ಹಾಜರಿದ್ದ ಹಿಂದೂ ಸಂಘಟನೆಗಳ ಪರ ವಕೀಲರು ಹೇಳಿದ್ದಾರೆ.
ಮೊದಲ ದಿನದ ಸಮೀಕ್ಷೆ ವೇಳೆ ಮುಸ್ಲಿಂ ಪಂಗಡ ಭಾಗಿಯಾಗಿರಲಿಲ್ಲ. 2ನೇ ದಿನ 5 ಮಂದಿಯ ಮುಸ್ಲಿಂ ತಂಡ ಪಾಲ್ಗೊಂಡಿತು ಹಾಗೂ ಸಮೀಕ್ಷೆಗೆ ಸಹಕರಿಸುವ ಪತ್ರ ನೀಡಿತು. ಈ ವೇಳೆ ಮಸೀದಿಗಳ ಕೆಲವು ಪ್ರಮುಖ ಭಾಗಗಳ ಬೀಗವನ್ನೂ ಎಎಸ್‌ಐಗೆ ನೀಡಿತು. ಬೆಳಗ್ಗೆ 7ರಿಂದ ಸಂಜೆ 5ರವೆರೆಗೂ ಸಮೀಕ್ಷೆ ನಡೆಯಿತು.
ಈ ಬಗ್ಗೆ ಹೇಳಿಕೆ ನೀಡಿರುವ ಹಿಂದೂ ಪಂಗಡದ ವಕೀಲ ಸುಧೀರ್ ತ್ರಿಪಾಠಿ, ‘ಸಮೀಕ್ಷೆ ವೇಳೆ ಮಸೀದಿ ಆವರಣದಲ್ಲಿ ಹಿಂದೂ ದೇವರ ವಿಗ್ರಹಗಳ ಕುರುಹುಗಳು ಪತ್ತೆ ಆಗಿವೆ. ಮುಂದಿನ ದಿನಗಳಲ್ಲಿ ವಿಗ್ರಹಗಳು ಪತ್ತೆಯಾಗಬಹುದು ಎಂದು ನಾವು ಆಶಾಭಾವನೆ ಹೊಂದಿದ್ದೇವೆ. ಇಂತೆಜಾಮಿಯಾ ಮಸೀದಿ ಸಮಿತಿ ಸಹ ಈ ಸಮೀಕ್ಷೆಗೆ ಸಹಕಾರ ನೀಡುತ್ತಿದೆ. ಈ ಮೊದಲು ಅವರು ಕೆಲವು ಕೀಗಳನ್ನು ನಮಗೆ ಕೊಟ್ಟಿರಲಿಲ್ಲ. ಈಗ ಕೊಟ್ಟಿದ್ದಾರೆ’ ಎಂದರು. ಇನ್ನೊಬ್ಬ ಹಿಂದೂ ಪರ ವಕೀಲ ಸುಭಾಷ್ ನಂದನ್ ಮಾತನಾಡಿ, ‘ಶನಿವಾರ ಮಸೀದಿಯ ಗುಮ್ಮಟದ ಕೆಳಭಾಗದ ಸಮೀಕ್ಷೆ ನಡೆದಿದೆ’ ಎಂದರು.
Gyanvapi Mosque Survey: ಮಸೀದಿ ಸಮೀಕ್ಷೆಗೆ 5 ತಂಡ ರಚನೆ, ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ
ಸಮೀಕ್ಷೆಗಾಗಿ ಪುರಾತತ್ವ ಇಲಾಖೆ 5 ತಂಡಗಳನ್ನು ರಚನೆ ಮಾಡಿಕೊಂಡಿದ್ದು, ಒಂದು ತಂಡ ಶೃಂಗಾರ ಗೌರಿ ವಿಗ್ರಹ ಇರುವ ಪಶ್ಚಿಮದ ಗೋಡೆ, 2ನೇ ತಂಡ ಗುಮ್ಮಟ, 3ನೇ ತಂಡ ಕಂಬಗಳು, 4ನೇ ತಂಡ ಮಣ್ಣು ಪರೀಕ್ಷೆ ಮಾಡಲಿದ್ದು, 5ನೇ ತಂಡ ಇವುಗಳ ನಡುವೆ ಸಮನ್ವಯತೆ ಸಾಧಿಸಲಿದೆ ಎಂದು ತಿಳಿದುಬಂದಿದೆ. ಐಐಟಿ ಕಾನ್ಪುರದ ತಜ್ಞರ ತಂಡ ಪುರಾತತ್ವ ಇಲಾಖೆಗೆ ನೆರವಾಗುತ್ತಿದೆ.
ಸಮೀಕ್ಷೆ ವೇಳೆ ಮಸೀದಿಯ ಕಂಬ ಹಾಗೂ ಗೋಡೆಗಳನ್ನು ಜಿಪಿಆರ್ ಅಧ್ಯಯನಕ್ಕೆ ಒಳಪಡಿಸಲಾಗುತ್ತದೆ. ಇದರಿಂದ ಅವುಗಳ ನಿಖರ ಕಾಲ ಪತ್ತೆ ಮಾಡಬಹುದಾಗಿದೆ. ಇನ್ನು ಮಸೀದಿಯನ್ನು ಮಂದಿರದ ಮೇಲೆ ನಿರ್ಮಿಸಲಾಗಿದೆಯೆ ಎಂಬುದನ್ನು ಅರಿಯಲು ರಾಡಾರ್ ಸಮೀಕ್ಷೆ ನಡೆಸಲಾಗುತ್ತದೆ. ಸಮೀಕ್ಷಾ ವರದಿಯನ್ನು ವಾರಾಣಸಿ ಕೋರ್ಟ್‌ಗೆ ನೀಡಲು ಸೆ.4 ಕೊನೆಯ ದಿನ.