Gyanvapi Mosque Survey: ಮಸೀದಿ ಸಮೀಕ್ಷೆಗೆ 5 ತಂಡ ರಚನೆ, ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ

ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ಬೆನ್ನಲ್ಲೇ  5 ತಂಡಗಳ ರಚನೆ ಮಾಡಲಾಗಿದ್ದು, ಒಂದೊಂದು ತಂಡಕ್ಕೆ ಒಂದೊಂದು ಜವಾಬ್ದಾರಿ ನೀಡಲಾಗಿದೆ.

Varanasi Gyanvapi mosque case  ASI created five teams and second day survey started gow

ವಾರಣಾಸಿ (ಜು.5): ಕಾಶಿ ವಿಶ್ವನಾಥ ಮಂದಿರದ ಬಳಿ ಇರುವ ಗ್ಯಾನವಾಪಿ ಮಸೀದಿಯನ್ನು ದೇಗುಲ ಒಡೆದು ನಿರ್ಮಿಸಲಾಗಿದೆಯೇ ಎಂಬುದರ ಪತ್ತೆಗೆ ನಡೆಸಲಾಗುತ್ತಿರುವ ಪುರಾತತ್ವ ಇಲಾಖೆಯ ಸಮೀಕ್ಷೆ ಶುಕ್ರವಾರದಿಂದ ಪುನಾರಂಭಗೊಂಡಿದೆ. ಶನಿವಾರ 9ಗಂಟೆಯಿಂದಲೇ ಸಮೀಕ್ಷೆ ನಡೆಯುತ್ತಿದೆ. 40 ರಿಂದ 45 ಮಂದಿಯ ತಂಡ ಈ ಕಾರ್ಯ ನಡೆಸುತ್ತಿದೆ. ಗ್ಯಾನವಾಪಿ ಮಸೀದಿ  ವಿಚಾರವಾಗಿ ಸರ್ವೇ ಕಾರ್ಯ  ನಡೆಸಲು  ಭಾರತೀಯ ಪುರಾತತ್ವ ಇಲಾಖೆ 5 ತಂಡಗಳನ್ನು ಮಾಡಿಕೊಂಡಿದೆ. ಒಂದು ತಂಡ ಪಶ್ಚಿಮ ಗೋಡೆ ಸಮೀಕ್ಷೆ ಮಾಡಲಿದೆ. ಎರಡನೇ ತಂಡ ಮಧ್ಯದ ಗುಂಬಾಜ್ ಸಮೀಕ್ಷೆ ಮಾಡಲಿದೆ.  3 ನೇ ತಂಡ ಕಂಬಗಳ ಅಧ್ಯಯನ ಮಾಡಲಿದೆ. 4ನೇ ತಂಡ ಮಣ್ಣು ಪರೀಕ್ಣೆ ನಡೆಸಲಿದೆ ಮತ್ತು 5ನೇ ತಂಡ ಎಲ್ಲಾ ತಂಡಗಳ ಜೊತೆ ಸಮನ್ವಯ ಮಾಡಲಿದೆ. ಮಸೀದಿಯ ವಕೀಲರು ಕೂಡ ಸರ್ವೇ ತಂಡದ ಜೊತೆ ಭಾಗಿಯಾಗಲಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಕೆ ಮಾಡಿ ವೈಜ್ಞಾನಿಕ ವಾಗಿ ಸಮೀಕ್ಷೆ ನಡೆಸಲಾಗುತ್ತದೆ ಎಂದು  ಪುರಾತತ್ವ ಇಲಾಖೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ತಡೆ ಅರ್ಜಿ ವಜಾಗೊಳಿಸಿದ ಸುಪ್ರೀಂ: ವಾರಣಾಸಿಯ ಕಾಶಿ ವಿಶ್ವನಾಥ ಮಂದಿರ ಬಳಿಯ ಗ್ಯಾನವಾಪಿ ಮಸೀದಿ ಸಮೀಕ್ಷೆಗೆ ತಡೆ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಚ್‌, ಮಸೀದಿ ಕಟ್ಟಡಕ್ಕೆ ಹಾನಿಯಾಗದಂತೆ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ಸೂಚನೆ ನೀಡಿದೆ. ಇದರೊಂದಿಗೆ ಸಮೀಕ್ಷೆಗೆ ಇದ್ದ ಎಲ್ಲ ಅಡೆತಡೆ ನಿವಾರಣೆ ಆಗಿದ್ದು, ಶುಕ್ರವಾರದಿಂದ ಸಮೀಕ್ಷೆ ಆರಂಭವಾಗಿದೆ.

ಅಲಹಾಬಾದ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಅಂಜುಮಾನ್‌ ಇಂತೆಜಾಮಿಯಾ ಮಸೀದಿ ಸುಪ್ರೀಂಕೋರ್ಚ್‌ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾ. ಜೆ.ಬಿ.ಪರ್ದೀವಾಲಾ ಮತ್ತು ನ್ಯಾ.ಮನೋಜ್‌ ಮಿಶ್ರಾ ಅವರಿದ್ದ ಪೀಠ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.

‘ಬಳಿಕ ಸಮೀಕ್ಷೆ ನಡೆಸುವಾಗ ಪುರಾತತ್ವ ಇಲಾಖೆ ಯಾವುದೇ ಆಕ್ರಮಣಕಾರಿ ಕ್ರಮಗಳನ್ನು ಕೈಗೊಳ್ಳಬಾರದು. ಮಸೀದಿ ಕಟ್ಟಡದ ವಿನ್ಯಾಸಕ್ಕೆ ಯಾವುದೇ ಹಾನಿ ಮಾಡಬಾರದು. ಮಸೀದಿಯ ಆವರಣದಲ್ಲಿ ಯಾವುದೇ ಉತ್ಖನನ, ಅಗೆಯುವುದನ್ನು ನಡೆಸುವುದಿಲ್ಲ ಎಂದು ಪುರಾತತ್ವ ಇಲಾಖೆ ನೀಡಿರುವ ಭರವಸೆ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಸಮೀಕ್ಷೆಯ ಬಳಿಕ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಮುಖ್ಯ ನ್ಯಾ. ಡಿ.ವೈ.ಚಂದ್ರಚೂಡ್‌ ಹೇಳಿದರು.

ಹಳೆಯ ಗಾಯ ತೆರೆದುಕೊಳ್ಳಲಿವೆ- ಮಸೀದಿ ಸಮಿತಿ: ಮಸೀದಿ ಸಮಿತಿಯ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹುಜೇಫಾ ಅಹ್ಮದಿ, ‘ಈ ಸಮೀಕ್ಷೆ ಇತಿಹಾಸವನ್ನು ಅಗೆಯಲಿದ್ದು, ಇದರಿಂದ ಪೂಜಾಸ್ಥಳಗಳ ಕಾನೂನು ಉಲ್ಲಂಘನೆಯಾಗಲಿದೆ. ಇದು ಹಳೆಯ ಗಾಯಗಳನ್ನು ಮತ್ತೆ ತೆರೆಯುವುದರಿಂದ ಭ್ರಾತೃತ್ವ ಮತ್ತು ಜಾತ್ಯತೀತತೆಗೆ ಧಕ್ಕೆಯಾಗಲಿದೆ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರತಿಯೊಂದು ಮಧ್ಯಂತರ ಆದೇಶವನ್ನು ಇದೇ ನೆಲೆಯಲ್ಲಿ ವಿರೋಧಿಸಲಾಗದು. ನೀವು ಎಲ್ಲದಕ್ಕೂ ಹೇಗೆ ಆಕ್ಷೇಪಣೆಯನ್ನು ಎತ್ತುತ್ತೀರಿ? ಇದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನ ಆದೇಶವಿದೆ. ರಚನೆಯನ್ನು ರಕ್ಷಿಸುತ್ತೇವೆ ಎಂದು ಎಎಸ್‌ಐ ಹೇಳಿದೆ. ಹೀಗಿದ್ದ ಮೇಲೆ ನಾವೇಕೆ ಮಧ್ಯ ಪ್ರವೇಶಿಸಬೇಕು? ನಿಮ್ಮ ಆಕ್ಷೇಪಣೆಗಳನ್ನು ವಿಚಾರಣೆಯ ಸಮಯದಲ್ಲಿ ನಿರ್ಧರಿಸಲಾಗುತ್ತದೆ’ ಎಂದು ಹೇಳಿತು.

ಸೆ.4ಕ್ಕೆ ಸಮೀಕ್ಷಾ ವರದಿ: ಈ ನಡುವೆ, ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷಾ ವರದಿಯನ್ನು ಸಲ್ಲಿಸಲು ಪುರಾತತ್ವ ಇಲಾಖೆಗೆ ನೀಡಲಾಗಿದ್ದ ಕಾಲಾವಧಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯ 4 ವಾರಗಳ ಕಾಲ ವಿಸ್ತರಿಸಿದೆ. ಪುರಾತತ್ವ ಇಲಾಖೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಕೆ.ವಿಶ್ವೇಶ ಅವರು, ಗಡುವನ್ನು ಆ.4ರಿಂದ ಸೆ.4ಕ್ಕೆ ವಿಸ್ತರಿಸಿದ್ದಾರೆ. ಪುರಾತತ್ವ ಇಲಾಖೆ ಕೈಗೊಂಡಿದ್ದ ಸಮೀಕ್ಷೆಗೆ ಜು.24ರಂದು ತಡೆ ನೀಡಲಾಗಿತ್ತು. ಇದೀಗ ಈ ಮುಂಚಿನ ಆದೇಶದಂತೆ ಆ.4ರೊಳಗೆ ಸಮೀಕ್ಷೆ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಅವಧಿ ವಿಸ್ತರಣೆ ಕೋರಿ ಪುರಾತತ್ವ ಇಲಾಖೆ ಅರ್ಜಿ ಸಲ್ಲಿಸಿತ್ತು.

Latest Videos
Follow Us:
Download App:
  • android
  • ios