ದೇಗುಲದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ವಾದದ ಹಿನ್ನೆಲೆ ಗ್ಯಾನವಾಪಿ ಮಸೀದಿ ಸಮೀಕ್ಷೆ ಆರಂಭವಾಗಿದ್ದು, ಸುಮಾರು 40 ಜನರ ತಂಡ ಈ ಸಮೀಕ್ಷೆಯಲ್ಲಿದೆ. ಮಸೀದಿ ಸುತ್ತಲೂ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.
ವಾರಾಣಸಿ (ಜು.24): ದೇಗುಲದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ಹಿಂದೂ ಭಕ್ತರ ವಾದ ಸತ್ಯಾಸತ್ಯ ಪರೀಕ್ಷಿಸುವ ಸಲುವಾಗಿ ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಗ್ಯಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (Archaeological Survey of India ) ಸಮೀಕ್ಷೆ ನಡೆಸುತ್ತಿದೆ. ಅಧಿಕಾರಿಗಳು ಪ್ರವೇಶಿಸುತ್ತಿದ್ದಂತೆಯೇ ಯುಪಿ ಪೊಲೀಸ್ ತಂಡವು ಗ್ಯಾನವಾಪಿ ಮಸೀದಿ ಸುತ್ತ ಬಿಗಿ ಭದ್ರತೆ ಕೈಗೊಂಡಿದೆ.
ಇಂದು ಮುಂಜಾನೆ 7 ಗಂಟೆಗೆ ಗ್ಯಾನವಾಪಿ ಮಸೀದಿಯನ್ನು ತಲುಪಿದ ಪುರಾತತ್ವ ಇಲಾಖೆಯ ತಂಡ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ವಾರಾಣಸಿ ಕಮಿಷನರ್ ಅವರನ್ನು ಭೇಟಿ ಮಾಡಿ ಪುರಾತತ್ವ ಇಲಾಖೆ ಮಾತುಕತೆ ನಡೆಸಿತ್ತು. ಸಮೀಕ್ಷೆ ಹಿನ್ನೆಲೆಯಲ್ಲಿ ಮಸೀದಿಗೆ ಹಾಗೂ ಮಸೀದಿ ಸುತ್ತಮುತ್ತ ಭಾರಿ ಭದ್ರತೆಯನ್ನು ಒದಗಿಸಲಾಗಿದೆ.
ಜ್ಞಾನವಾಪಿ ಸಂಕೀರ್ಣದಲ್ಲಿ ಸರ್ವೆಗೆ ಅವಕಾಶ ನೀಡಿದ ವಾರಣಾಸಿ ಕೋರ್ಟ್
ASI ಅಧಿಕಾರಿಗಳು, ನಾಲ್ವರು ಹಿಂದೂ ಮಹಿಳಾ ಫಿರ್ಯಾದಿಗಳು ಮತ್ತು ಅವರ ವಕೀಲರು ಮತ್ತು ಗ್ಯಾನವಾಪಿ ಮಸೀದಿ ಆಡಳಿತ ಸಮಿತಿಗೆ ಕೌನ್ಸಿಲ್‌ಗಳು ಸೇರಿದಂತೆ ಸುಮಾರು 40 ಸದಸ್ಯರ ತಂಡ ಪರಿಶೀಲನೆ ನಡೆಸುತ್ತಿದೆ. ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ ಈ ಸಮೀಕ್ಷೆಯಲ್ಲಿ ಭಾಗವಹಿಸುತ್ತಿಲ್ಲ. ಸಮಿತಿಯ ಜಂಟಿ ಕಾರ್ಯದರ್ಶಿ ಎಸ್‌ಎಂ ಯಾಸಿನ್, ನಾವು ಎಎಸ್‌ಐ ಸಮೀಕ್ಷೆಯನ್ನು ಬಹಿಷ್ಕರಿಸಿದ್ದೇವೆ. ASI ಸಮೀಕ್ಷೆಯ ಸಮಯದಲ್ಲಿ ನಾವು ಅಥವಾ ನಮ್ಮ ವಕೀಲರು ಗ್ಯಾನವಾಪಿ ಮಸೀದಿಯಲ್ಲಿ ಇರುವುದಿಲ್ಲ. ನಾವು ಅದರಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು, ದೇಗುಲದ ಸಂಕೀರ್ಣದೊಳಗಿನ ಶೃಂಗಾರ್ ಗೌರಿ ಸ್ಥಾಲ್ ನಲ್ಲಿ ಪ್ರಾರ್ಥನೆ ಮಾಡಲು ಅನುಮತಿ ಕೋರಿದ್ದರು. ಕಳೆದ ವರ್ಷ ಮೇ 16 ರಂದು ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯ ಸಮೀಕ್ಷೆಯ ಸಂದರ್ಭದಲ್ಲಿ ಹಿಂದೂಗಳ ಕಡೆಯಿಂದ "ಶಿವಲಿಂಗ" ಮತ್ತು ಮುಸಲ್ಮಾನರ ಕಡೆಯಿಂದ "ಕಾರಂಜಿ" ಎಂದು ವಾದಿಸಲಾಗುತ್ತಿರುವ ರಚನೆಯು ಕಂಡುಬಂದಿದೆ.
'ನನಗೆ ಕಿರುಕುಳ ನೀಡ್ತಿದ್ದಾರೆ..' ಜ್ಞಾನವಾಪಿ ಪ್ರಕರಣದಿಂದ ಹಿಂದೆ ಸರಿಯಲು ಮುಂದಾದ ಹಿಂದೂ ಅರ್ಜಿದಾರರು!
ಹಿಂದೂ ಸಮುದಾಯ ಮತ್ತು ಕೋಟ್ಯಂತರ ಹಿಂದೂಗಳಿಗೆ ಅತ್ಯಂತ ಅದ್ಭುತವಾದ ಕ್ಷಣವಾಗಿದೆ. ಈ ಗ್ಯಾನವಾಪಿ ಸಮಸ್ಯೆಗೆ ಸಮೀಕ್ಷೆಯೊಂದೇ ಸಾಧ್ಯ ಪರಿಹಾರವಾಗಿದೆ ಎಂದು ಗ್ಯಾನವಾಪಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಸೋಹನ್ ಲಾಲ್ ಆರ್ಯ ಹೇಳಿದ್ದಾರೆ.
ಗ್ಯಾನವಾಪಿ ಮಸೀದಿಯ ಜಿಪಿಆರ್ (ಗ್ರೌಂಡ್ ಪೆನೆಟೆರೇಟಿಂಗ್ ರಾಡಾರ್) ಸರ್ವೇ ನಡೆಸಲು ಜು.21ರಂದು ವಾರಾಣಾಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿತ್ತು. ಈ ಸಮೀಕ್ಷೆಯ ಮೂಲಕ ಈ ಮೊದಲು ಇದರ ನಿರ್ಮಾಣ ವಿನ್ಯಾಸ ಏನಿತ್ತು. ಅದನ್ನು ಮರು ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಆದರೆ ಈ ಸಮೀಕ್ಷೆಯಲ್ಲಿ ಹಿಂದೂಗಳು ಶಿವಲಿಂಗ ಎಂದು ವಾದಿಸುತ್ತಿರುವ ಪ್ರದೇಶವನ್ನು ಕೈಬಿಡುವಂತೆಯೂ ಕೋರ್ಟ್ ಸೂಚಿಸಿದೆ. ಈ ಸಮೀಕ್ಷಾ ವರದಿಯನ್ನು ಆ.4ರಂದು ಅಧಿಕಾರಿಗಳು ವಾರಾಣಸಿ ಕೋರ್ಚ್‌ಗೆ ಸಲ್ಲಿಸಲಿದ್ದಾರೆ.
