* ಪೂಜಾ ಸ್ಥಳದ ಮೂಲರೂಪ ತಿಳಿಯಲು 1991ರ ಕಾಯ್ದೆ ಅಡ್ಡಿ ಆಗಲ್ಲ* ಗ್ಯಾನವಾಪಿ ವಿಚಾರಣೆ ತಡೆಗೆ ನಕಾರ* ಸಿವಿಲ್ ಬದಲು ಅನುಭವಿ ಜಿಲ್ಲಾ ಜಡ್ಜ್ ವಿಚಾರಣೆಗೆ ಸುಪ್ರೀಂ ಸೂಚನೆ
ನವದೆಹಲಿ(ಮೇ.21): ಮಹತ್ವದ ವಿದ್ಯಮಾನವೊಂದರಲ್ಲಿ ವಾರಾಣಸಿಯ ಗ್ಯಾನವಾಪಿ ಮಸೀದಿ ಪ್ರಕರಣದ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟು ನಿರಾಕರಿಸಿದ್ದು, ವಿಚಾರಣೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಈವರೆಗೆ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಇನ್ನು ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಲಿದೆ.
‘ಪ್ರಕರಣದ ಸಂಕೀರ್ಣತೆ ಮತ್ತು ಸೂಕ್ಷ್ಮತೆ ಗಮನಿಸಿದಾಗ ಈ ಅರ್ಜಿಯನ್ನು ಅತ್ಯಂತ ಅನುಭವಿ ಮತ್ತು ಹಿರಿಯ ನ್ಯಾಯಾಧೀಶರು ನಡೆಸುವ ಅವಶ್ಯಕತೆಯನ್ನು ನಾವು ಮನಗಂಡಿದ್ದೇವೆ. ಹೀಗಾಗಿ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸುತ್ತಿದ್ದೇವೆ ಎಂದು ಹೇಳಿತು. ಜೊತೆಗೆ ‘1991ರ ಪೂಜಾ ಸ್ಥಳ ಕಾಯ್ದೆಯನ್ವಯ 1947ಕ್ಕಿಂತ ಮೊದಲು ನಿರ್ಮಾಣವಾಗಿರುವ ಯಾವುದೇ ಪೂಜಾ ಸ್ಥಳದ ಮೂಲಸ್ವರೂಪ ಬದಲಿಸಬಾರದು. ಹೀಗಾಗಿ ಹಿಂದೂ ಮಹಿಳೆಯರ ಅರ್ಜಿ ವಜಾ ಮಾಡಬೇಕು’ ಎಂಬ ಅಂಜುಮನ್ ಮಸೀದಿ ಸಮಿತಿಯ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ಆದ್ಯತೆಯ ಮೇಲೆ ವಿಚಾರಣೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
India Gate: ಮತ್ತೊಂದು ಅಯೋಧ್ಯೆ ಆಗಲಿದೆಯೇ ಕಾಶಿಯ ಗ್ಯಾನ್‌ವಾಪಿ ಮಸೀದಿಯ ವಿವಾದ?
ಆದರೆ ಇದೇ ವೇಳೆ ‘1991ರ ಪೂಜಾ ಕಾಯ್ದೆಯು, ಯಾವುದೇ ಪ್ರಾರ್ಥನಾ ಸ್ಥಳದ ಮೂಲಸ್ವರೂಪವನ್ನು ತಿಳಿಯುವ ಪ್ರಕ್ರಿಯೆಗೆ ಅಡ್ಡಿಪಡಿಸುವುದಿಲ್ಲ ಎನ್ನುವ ಮಹತ್ವವಾದ ಅಭಿಪ್ರಾಯವನ್ನೂ ವ್ಯಕ್ತಪಡಿಸುವ ಮೂಲಕ, ಗ್ಯಾನವಾಪಿ ಮಸೀದಿಯೊಳಗೆ ಸಮೀಕ್ಷೆಗೆ ಆದೇಶಿಸಿದ ಸಿವಿಲ್ ನ್ಯಾಯಾಲಯ ನಿರ್ಧಾರ ತಪ್ಪಲ್ಲ ಎಂದು ಪರೋಕ್ಷವಾಗಿ ಹೇಳಿತು.
ಅರ್ಜಿ ವರ್ಗ:
ಕಾಶಿ ವಿಶ್ವನಾಥ ಮಂದಿರದ ಭಾಗವನ್ನು ಬೀಳಿಸಿ ಮೊಘಲ್ ದೊರೆ ಔರಂಗಜೇಬ್ ಗ್ಯಾನವಾಪಿ ಮಸೀದಿ ಕಟ್ಟಿಸಿದ್ದ ಎನ್ನಲಾಗಿದೆ ಹಾಗೂ ಈ ಮಸೀದಿಯಲ್ಲಿ ಶೃಂಗಾರಗೌರಿ, ಶಿವಲಿಂಗ ಸೇರಿ ಹಲವು ದೇವರ ವಿಗ್ರಹಗಳಿವೆ ಎಂದು ಹೇಳಲಾಗಿದೆ. ಹೀಗಾಗಿ, ‘ಈ ವಿಗ್ರಹಗಳ ಪೂಜೆ, ಹಾಗೂ ಮಸೀದಿ ಸಮೀಕ್ಷೆಗೆ ಕೋರಿ ಸಲ್ಲಿಸಲಾಗಿದ್ದ ಕೆಲವು ಹಿಂದೂ ಮಹಿಳೆಯರ ಅರ್ಜಿಯು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ. ಆದ್ದರಿಂದ ಅತ್ಯಂತ ಅನುಭವಿ ಹಾಗೂ ಹಿರಿಯ ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟನ್ಯಾ
ಡಿ.ವೈ. ಚಂದ್ರಚೂಡ ಅವರ ನೇತೃತ್ವದ ತ್ರಿಸದಸ್ಯ ಪೀಠ, ವಾರಾಣಸಿ ಜಿಲ್ಲಾ ಕೋರ್ಚ್‌ಗೆ ವಿಚಾರಣೆಗೆ ಸೂಚಿಸಿದೆ. ‘ಆದರೆ ಹಾಗಂತ ವಾರಾಣಸಿ ಸಿವಿಲ್ ನ್ಯಾಯಾಧೀಶರು ಸರಿಯಾಗಿ ವಿಚಾರಣೆ ನಡೆಸುತ್ತಿಲ್ಲ ಎಂಬುದು ನಮ್ಮ ಆದೇಶದ ಅರ್ಥವಲ್ಲ’ ಎಂದು ಪೀಠ ಸ್ಪಷ್ಟಪಡಿಸಿದೆ.
‘ಶಿವಲಿಂಗ’ ಸ್ಥಳ ಸೀಲ್:
ಇದೇ ವೇಳೆ, ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನುವ ಸ್ಥಳದಲ್ಲಿ ಯಥಾಸ್ಥಿತಿ ಮುಂದುವರಿಸಲು ಸೂಚಿಸಿದೆ. ಆದರೆ, ಮುಸ್ಲಿಂ ಭಕ್ತಾದಿಗಳಿಗೆ ನಮಾಜ್ ಮಾಡಲು ಅಡ್ಡಿಪಡಿಸಬಾರದು ಎಂದು ತಾಕೀತು ಮಾಡಿದೆ. ಜೊತೆಗೆ ಶಿವಲಿಂಗ ಪತ್ತೆಯಾಗಿದೆ ಎನ್ನಲಾದ ‘ವಝ’ (ಕೊಳ) ಪ್ರದೇಶಲ್ಲಿ ಮುಸ್ಲಿಮರು ಬಂದು ಪ್ರಾರ್ಥನೆ ಸಲ್ಲಿಸಲು ಸಕಲ ಏರ್ಪಾಟುಗಳನ್ನು ಮಾಡಬೇಕು ಎಂದು ವಾರಾಣಸಿ ಜಿಲ್ಲಾಡಳಿತಕ್ಕೆ ಕೋರ್ಚ್ ತಾಕೀತು ಮಾಡಿದೆ.
ಜಿಲ್ಲಾ ನ್ಯಾಯಾಲಯ ಈ ವಿಷಯ ಇತ್ಯರ್ಥಪಡಿಸುವವರೆಗೆ ಈ ಆದೇಶ ಅನ್ವಯವಾಗಲಿದೆ. ಇತ್ಯರ್ಥವಾದ 8 ವಾರದ ಒಳಗೆ ಸಂಬಂಧಿಸಿದ ಪಕ್ಷಗಾರರು, ಆದೇಶ ಪ್ರಶ್ನಿಸಿ ಹೈಕೋರ್ಚ್ ಮೊರೆ ಹೋಗಬಹುದು ಎಂದು ಹೇಳಿದೆ.
India Gate: ಮತ್ತೊಂದು ಅಯೋಧ್ಯೆ ಆಗಲಿದೆಯೇ ಕಾಶಿಯ ಗ್ಯಾನ್‌ವಾಪಿ ಮಸೀದಿಯ ವಿವಾದ?
ಏನಿದು 1991ರ ಕಾಯ್ದೆ?
1947ಕ್ಕೂ ಮುನ್ನ ನಿರ್ಮಾಣ ಆದ ಯಾವುದೇ ಪೂಜಾ ಸ್ಥಳದ ಮೂಲ ಸ್ವರೂಪ ಬದಲಿಸಬಾರದು ಎಂದು 1991ರ ಪೂಜಾ ಸ್ಥಳ ಕಾಯ್ದೆಯಲ್ಲಿದೆ. ಹಾಗಾಗಿ, ಗ್ಯಾನವಾಪಿ ಮಸೀದಿ ಸಮೀಕ್ಷೆ ಕುರಿತ ಹಿಂದೂ ಮಹಿಳೆಯರ ಅರ್ಜಿ ವಜಾ ಮಾಡಬೇಕು ಎಂಬುದು ಅಂಜುಮನ್ ಮಸೀದಿ ಸಮಿತಿಯ ವಾದ.
