17 ವರ್ಷದ ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರ ಮಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗೆ ಕೋರ್ಟ್ ರಾಜಿಯಾಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಿತ್ತು. ಆದರೆ, 23 ವರ್ಷದ ಆರೋಪಿ, ನನಗೆ ಈಗಾಗಲೇ ಮದುವೆಯಾಗಿದ್ದು ಪತ್ನಿ ಗರ್ಭಿಣಿ ಎಂದು ಹೇಳಿದ್ದಾನೆ.
ನವದೆಹಲಿ (ಜೂ.17): ಅಪ್ರಾಪ್ತ ಹುಡುಗಿಯ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗೆ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಸಮೀರ್ ದಾವೆ 'ರಾಜಿಯಾಗಲು ಸಾಧ್ಯವೇ' ಎಂದು ಪ್ರಶ್ನೆ ಮಾಡಿದ್ದರು. ಈ ಕುರಿತಾಗಿ ಆತನಿಗೆ ಜೈಲಿನಲ್ಲಿಯೇ ಸಮನ್ಸ್ ಜಾರಿ ಮಾಡಲಾಗಿತ್ತು. 17 ವರ್ಷದ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ ಮಾಡುವ ಬದಲು ರಾಜಿಯಾಗಲು ಸಾಧ್ಯವೇ ಕೇಳಲಾಗಿತ್ತು. ಇದಕ್ಕೆ ಶುಕ್ರವಾರ ಉತ್ತರ ನೀಡಿರುವ 23 ವರ್ಷದ ಆರೋಪಿ ನನಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ಗರ್ಭಿಣಿಯೂ ಆಗಿದ್ದಾಳೆ ಎಂದಿದ್ದಾನೆ. ಆ ನಂತರ ನ್ಯಾಯಮೂರ್ತಿ ದಾವೆ ಅವರು ಆರೋಪಿಯ ವೈವಾಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜಿ ಮಾಡಿಕೊಳ್ಳುವ ಆಯ್ಕೆಯನ್ನು ತಳ್ಳಿಹಾಕಿದರು. ಇನ್ನು ಮುಂದೆ ವೈದ್ಯಕೀಯ ಗರ್ಭಪಾತ ಕೂಡ ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. ನ್ಯಾಯಮೂರ್ತಿ ದಾವೆ ಶುಕ್ರವಾರ ತಮ್ಮ ಕೊಠಡಿಯಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಕೋರ್ಟ್‌ನಲ್ಲಿದ್ದ ಅಪ್ರಾಪ್ತೆಯ ತಂದೆಗೂ ಕೂಡ ನ್ಯಾಯಮೂರ್ತಿಗಳ ಚೇಂಬರ್‌ಗೆ ಬರುವಂತೆ ತಿಳಿಸಲಾಗಿತ್ತು. ಈ ವೇಳೆ, ಬಾಲಕಿಯು ತನ್ನ ಗರ್ಭಾವಸ್ಥೆಯ ಉಳಿದ ಸಮಯವನ್ನು ಆಸ್ಪತ್ರೆಯಲ್ಲಿ ಅಥವಾ ಆಕೆಯ ನಿವಾಸದಲ್ಲಿ ಕೈಗೊಳ್ಳುವ ಅವಕಾಶವನ್ನೂ ನೀಡಲಾಯಿತು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ಅರ್ಜಿದಾರರ ಪರ ವಕೀಲರ ಪ್ರಕಾರ, ತಂದೆ ಮಗಳ ಅಭಿಪ್ರಾಯ ಪಡೆಯಲು ಕಾಲಾವಕಾಶ ಕೋರಿದ್ದಾರೆ ಎನ್ನಲಾಗಿದೆ. 23 ವರ್ಷದ ಆರೋಪಿ ಸದ್ಯ ಮೊರ್ಬಿ ಜೈಲಿನಲ್ಲಿ ಕಾಲ ಕಳೆಯುತ್ತಿದ್ದು, ಫೋಕ್ಸೋ ಕೇಸ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಇನ್ನೊಂದೆಡೆ ಅಪ್ರಾಪ್ತ ಬಾಲಕಿ ತನಗೆ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಳು. ಜೂನ್ 8 ರಂದು ನ್ಯಾಯಾಲಯವು ವೈದ್ಯಕೀಯ ಮೌಲ್ಯಮಾಪನಕ್ಕೆ ಆದೇಶ ನೀಡಿತು ಮತ್ತು ವೈದ್ಯಕೀಯ ವರದಿಗಳು ಅಪ್ರಾಪ್ತ ವಯಸ್ಕ ಮತ್ತು ಭ್ರೂಣವು ಆರೋಗ್ಯವಾಗಿವೆ ಎಂದು ಪರಿಗಣಿಸಿದರೆ ಮೌಖಿಕವಾಗಿ ಅಭಿಪ್ರಾಯ ತಿಳಿಸುವಂತೆ ಹೇಳಿತ್ತು. ವರದಿ ಬಂದ ಬಳಿಕ ನ್ಯಾಯಾಲಯವು ಗರ್ಭಪಾತಕ್ಕೆ ಆದೇಶ ನೀಡಲು ಒಲವು ತೋರಲಿಲ್ಲ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿದೆ.
ಹಿಂದಿನ ಕಾಲದಲ್ಲಿ 14 ವಯಸ್ಸಲ್ಲಿ ಹುಡುಗಿಯರಿಗೆ ಮದುವೆ, 17ಕ್ಕೆ ಹೆರಿಗೆ, ಮನುಸ್ಮೃತಿ ಓದಿ: ಗುಜರಾತ್ ಹೈಕೋರ್ಟ್
ಇದಕ್ಕೂ ಹಿಂದಿನ ವಿಚಾರಣೆಯ ವೇಳೆ ಕೋರ್ಟ್ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು. ಹಿಂದೆಲ್ಲ ಯುವತಿಯರು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗುತ್ತಿದ್ದರು ಹಾಗೂ 17ನೇ ವಯಸ್ಸಿನ ವೇಳೆಗೆ ಮಗುವನ್ನೂ ಹೆರುತ್ತಿದ್ದರು. ಹಾಗೇನಾದರೂ ಮಗು ಹಾಗೂ ತಾಯಿಯ ಆರೋಗ್ಯ ಉತ್ತಮವಾಗಿದ್ದಲ್ಲಿ ಯಾವುದೇ ಕಾರಣಕ್ಕೂ ಗರ್ಭಪಾತಕ್ಕೆ ಅವಕಾಶ ನೀಡೋದಿಲ್ಲ ಎಂದಿತ್ತು.
ಸೌಜನ್ಯ ರೇಪ್ & ಮರ್ಡರ್: ಸಂತೋಷ್ ರಾವ್ ನಿರ್ದೋಷಿ, ಸಿಬಿಐ ಕೋರ್ಟ್ ತೀರ್ಪು
'ಮಗು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಲ್ಲಿ ಖಂಡಿತವಾಗಿಯೂ ಗರ್ಭಪಾತಕ್ಕೆ ಅನುಮತಿ ನೀಡೋದಿಲ್ಲ. ಭ್ರೂಣದ ಆರೋಗ್ಯ ಉತ್ತಮವಾಗಿದೆ. ಮಗುವಿಗೆ ಆಕೆ ಜನ್ಮ ನೀಡಿ, ಮಗು ಕೂಡ ಬದುಕಿದರೆ ನೀವೇನು ಮಾಡುತ್ತೀರಿ? ಆ ಮಗುವನ್ನು ಯಾರು ಸಾಕುತ್ತಾರೆ? ಇಂಥ ಮಗುವಿನ ಆರೈಕೆಗೆ ಯಾವುದಾದರೂ ಸರ್ಕಾರಿ ಯೋಜನೆಗಳಿವೆಯೇ ಎಂದು ಪರಿಶೀಲನೆ ಮಾಡೋಣ. ಅಥವಾ ನೀವೇ ಯಾರದರೂ ಮಗುವನ್ನು ದತ್ತು ಪಡೆದುಕೊಳ್ಳುವವರಿದ್ದರೆ ತಿಳಿಸಿ' ಎಂದು ನ್ಯಾಯಮೂರ್ತಿ ತಿಳಿಸಿದ್ದರು.
