ಅಹಮದಾಬಾದ್(ಮೇ.10): ಕೊರೋನಾ ಎರಡನೇ ಅಲೆ ಸಂಕಟ ಇಡೀ ದೇಶವನ್ನು ಆವರಿಸಿದೆ. ಈ ಮಹಾಮಾರಿ ನಿಯಂತ್ರಿಸಲು ಎಲ್ಲಾ ರಾಜ್ಯಗಳಲ್ಲೂ ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಕೋವಿಡ್‌ ಕೆಂದ್ರಗಳನ್ನು ನಿರ್ಮಿಸಿ ಜನರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಗುಜರಾತ್‌ನ ಬನಾಸ್‌ಕಾಂಟಾದ ಗೋಶಾಲೆಯೊಂದು ಕೋವಿಡ್‌ ಸೆಂಟರ್‌ ಆಗಿ ಪರಿವರ್ತನೆಯಾಗಿದೆ. ಟೆಟೋಡಾ ಹೆಸರಿನ ಹಳ್ಳಿಯಲ್ಲಿರುವ ಈ ಕೊರೋನಾ ಕೇಂದ್ರದಲ್ಲಿ ರೋಗಿಗಳಿಗೆ ಅಲೋಪಥಿ ಹೊರತುಪಡಿಸಿ ಹಸುವಿನ ಹಾಲು ಹಾಗೂ ಗೋಮೂತ್ರದಿಂದ ತಯಾರಿಸಿದ ಔಷಧಿ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. 

ಉಚಿತ ಚಿಕಿತ್ಸೆ

ವೇದಲಕ್ಷಣ ಪಂಚಗವ್ಯ ಆಯುರ್ವೇದಿಕ್ ಐಸೋಲೇಷನ್ ಸೆಂಟರ್‌ ಎಂಬ ಹೆಸರಿನ ಈ ಕೇಂದ್ರದಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗೆ ಹಣ ಪಾವತಿಸುವಂತಿಲ್ಲ. ಕೇಂದ್ರದ ನಿರ್ದೇಶಕ ರಾಮರಥನ್ ಮಹಾರಾಜ್ ಚಿಕಿತ್ಸೆ ಬಗ್ಗೆ ಮಾತನಾಡುತ್ತಾ ತಾವು ಇಲ್ಲಿ ರೋಗಿಗಳಿಗೆ ಪಂಚಗವ್ಯ ಆಯುರ್ವೇದಿಕ್ ಥೆರಪಿ ನೀಡುತ್ತಿದ್ದೇವೆ ಎಂದಿದ್ದಾರೆ. ರೋಗಿಗಳಿಗೆ ಗೋಮೂತ್ರ, ತುಪ್ಪ ಹಾಗೂ ಹಾಲಿನಿಂದ ತಯಾರಿಸಿದ ಔಷಧಿ ನೀಡಲಾಗುತ್ತಿದೆ. ಜೊತೆಗೆ ಸರಗಣಿಯಲ್ಲಿ ಬೆಳೆದ ಧಾನ್ಯಗಳನ್ನೂ ನೀಡಲಾಗುತ್ತಿದೆ. 

"

ಆಕ್ಸಿಜನ್‌ಗೇನು ಮಾಡುತ್ತಾರೆ?

ಇನ್ನು ಇಲ್ಲಿನ ವಾತಾವರಣದಲ್ಲಿ ಆಕ್ಸಿಜನ್ ಲೆವೆಲ್ ಕಾಪಾಡಿಕೊಳ್ಳಲು ಹವನ ಹಾಗೂ ಪೂಜೆ ನಡೆಸುತ್ತೇವೆ. ಯಾವೆಲ್ಲಾ ರೋಗಿಗಳ ಆಕ್ಸಿಜನ್ ಲೆವೆಲ್ 80ಕ್ಕಿಂತ ಕಡಿಮೆ ಇರರುತ್ತದೋ ಅವರಿಗೆ ಇಲ್ಲಿ ಸೇರ್ಪಡೆಗೊಳ್ಳಲು ಮೊದಲ ಆದ್ಯತೆ ನೀಡಲಾಗುತ್ತದೆ. ಅಲ್ಲದೇ ಇಲ್ಲಿ ಮೆಡಿಕಲ್ ಆಕ್ಸಿಜನ್ ವ್ಯವಸ್ಥೆಯೂ ಇದೆ. ಈ ಐಸೋಲೇಷನ್ ದಸೆಂಟರ್‌ನಲ್ಲಿ ಓರ್ವ ಅಲೋಪಥಿ ಡಾಕ್ಟರ್, ಓರ್ವ ಆಯುರ್ವೇದಿಕ್ ಡಾಕ್ಟರ್ ಹಾಗೂ ಐವರು ನರ್ಸ್‌ಗಳು ರೋಗಿಗಳ ಆರೈಕೆಗಿದ್ದಾರೆ. ಅಲೋಪಥಿ ಜೊತೆ ಆಯುರ್ವೇದಿಕ್ ಚಿಕಿತ್ಸೆ ಬಹಳ ಪರಿಣಾಮಕಾರಿ ಎಂದಿರುವ ಮಹಾರಾಜ್ ಕೋಣೆಗಳು ತಂಪಾಗಿರಿಸಲು ಸುತ್ತಲೂ ಹುಲ್ಲು ಬೆಳೆಸಲಾಗಿದೆ ಎಂದಿದ್ದಾರೆ.

ಬೆಳಗ್ಗೆ ಗೋಮೂತ್ರ ಕುಡೀರಿ: ಕೊರೋನಾಗೆ ಮದ್ದು ಹೇಳಿದ BJP ಶಾಸಕ

ಗೋಶಾಲೆಯಲ್ಲಿ ಐದು ಸಾವಿರ ಹಸುಗಳು

ಗೋಶಾಲೆಯಲ್ಲಿ 5,000 ಹಸುಗಳಿವೆ. ಇವುಗಳಲ್ಲಿ 90 ಹಾಲು ನೀಡುತ್ತವೆ. ಇನ್ನು ಕೋವಿಡ್‌ ಸೆಂಟರ್‌ನಲ್ಲಿ 50 ಬೆಡ್‌ಗಳಿವೆ ಹಾಗೂ ನಲ್ವತ್ತು ರೋಗಿಗಳಿದ್ದಾರೆ. ಇನ್ನು ಈ ಕೇಂದ್ರದ ಬಗ್ಗೆ ಮಾತನಾಡಿರುವ ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸಹಾಯಕ ಅಧೀಕ್ಷಕಡಾಕ್ಟರ್ ರಾಕೇಶ್ ಜೋಶಿ ಇಂತಹ ಕೇಂದ್ರ ಲಘು ಲಕ್ಷಣಗಳಿರುವವರಿಗೆ ಬಹಳ ಉಪಯುಕ್ತ. ರೋಗಿಯ ಪರಿಸ್ಥಿತಿ ಗಂಭೀರವಾಗಿದ್ದರೆ, ಓರ್ವ ಡಾಕ್ಟರ್‌ ಮಾತ್ರ ಚಿಕಿತ್ಸೆ ನಿಡಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.  

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona