ಮಾನನಷ್ಟ ಕೇಸ್: ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ, ಜಾಮೀನು ಪಡೆದ ರಾಗಾ!
2019ರಲ್ಲಿ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಕೇಸ್‌ನಲ್ಲಿ ಗುಜರಾತ್‌ನ ಸೂರತ್ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸಿದ್ದು, ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದೆ.
ಅಹಮದಾಬಾದ್ (ಮಾ.23): ಮೋದಿ ಸರ್‌ನೇಮ್ ವಿಚಾರದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ಎದುರಿಸುತ್ತಿದ್ದ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. 2019ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭಾ ಚುನಾವಣಾ ಸಮಾವೇಶದಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಾಗತ್ತು. ಸೂಕ್ತ ವಿಚಾರಣೆ ನಡೆಸಿದ ಸೂರತ್ ಕೋರ್ಟ್, ರಾಹುಲ್ ಗಾಂಧಿಯನ್ನು ತಪ್ಪಿತಸ್ಥ ಎಂದು ಹೇಳಿದೆ. 2019ರ ಸಮಾವೇಶವೊಂದರಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಕಳ್ಳರಿಗೆಲ್ಲಾ ಮೋದಿ ಎನ್ನುವ ಸರ್‌ನೇಮ್ ಯಾಕಿರುತ್ತದೆ ಎಂದು ಪ್ರಶ್ನೆ ಮಾಡಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಯ ಕುರಿತಾಗಿ ಬಿಜೆಪಿ ಶಾಸಕ ಹಾಗೂ ಅಂದಿನ ಸಚಿವ ಪೂರ್ಣೆಶ್ ಮೋದಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.ಕೋರ್ಟ್ ರಾಹುಲ್ ಗಾಂಧಿಯನ್ನು ತಪ್ಪಿತಸ್ಥ ಎನ್ನುವ ಮೂಲಕ ಎರಡು ವರ್ಷ ಶಿಕ್ಷೆ ಘೋಷಣೆ ಮಾಡಿತ್ತು. ಕೋರ್ಟ್ ಶಿಕ್ಷೆ ಪ್ರಕಟ ಮಾಡಿದ ಬೆನ್ನಲ್ಲಿಯೇ ಜಾಮೀನು ಪಡೆದುಕೊಂಡ ರಾಹುಲ್ ಗಾಂಧಿ ತಕ್ಷಣವೇ ಸೂರತ್ ಏರ್ಪೋರ್ಟ್‌ನತ್ತ ಮುಖ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: ಮೋದಿ ವಿರುದ್ಧದ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಸೂರತ್ ನ್ಯಾಯಲಯಾಲಯದ ಮುಂದೆ ರಾಹುಲ್ ಗಾಂಧಿ ಹಾಜರಾಗಿದ್ದರು. 2019ರಲ್ಲಿ ಮೋದಿ ಉಪನಾಮದ ಕುರಿತು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಕಳ್ಳರೆಲ್ಲರೂ ಏಕೆ ಮೋದಿ ಎಂಬ ಉಪನಾಮವನ್ನೇ ಇಟ್ಟುಕೊಂಡಿದ್ದಾರೆ ಎಂದು ರಾಗಾ ಪ್ರಶ್ನೆ ಮಾಡಿದ್ದರು. ಕರ್ನಾಟಕದ ಕೋಲಾರದಲ್ಲಿ 2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಮೋದಿ ಉಪನಾಮದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಸೂರತ್ ನ್ಯಾಯಾಲಯದ ಮುಂದೆ ರಾಹುಲ್ ಗಾಂಧಿ ಹಾಜರಾಗಿದ್ದರು. ಮೋದಿ ಉಪನಾಮದ ಬಗ್ಗೆ ಕಾಮೆಂಟ್ ಮಾಡಿದ್ದಕ್ಕಾಗಿ ರಾಹುಲ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗಿತ್ತು. ಗುಜರಾತ್ ಗೆ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಅಮಿತ್ ಚಾವ್ಡಾ, ಎಐಸಿಸಿ ಗುಜರಾತ್ ಉಸ್ತುವಾರಿ ರಘು ಶರ್ಮಾ ಮತ್ತು ಶಾಸಕರು ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಸೂರತ್‌ನಲ್ಲಿದ್ದಾರೆ.
ರಾಹುಲ್ ಗಾಂಧಿ ಆಡಿದ್ದ ಮಾತುಗಳ ವಿಡಿಯೋ ಸಾಕ್ಷಿಯನ್ನು ಕೋರ್ಟ್‌ಗೆ ನೀಡಲಾಗಿತ್ತು. ಕೋಲಾರದ ಜಿಲ್ಲಾಧಿಕಾರಿ ಹಾಗೂ ಕೋಲಾರ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಕೂಡ ರಾಹುಲ್ ಗಾಂಧಿ ಅಡಿರುವ ಮಾತುಗಳು ಸತ್ಯವಾಗಿತ್ತು. ವಿಡಿಯೋದಲ್ಲಿರುವುದು ನಿಜ ಎಂದು ಕೋರ್ಟ್‌ನಲ್ಲಿ ಸಾಕ್ಷಿ ಹೇಳಿದ್ದರು.
ಸತತ 4ನೇ ದಿನವೂ ಸಂಸತ್ ಕಲಾಪ ಬಲಿ, ಆರೋಪಗಳಿಗೆ ಸಂಸತ್ತಿನಲ್ಲೇ ಉತ್ತರ: ರಾಹುಲ್
ಈ ವರ್ಷದ ಫೆಬ್ರವರಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಮೇಲೆ ಹೇರಲಾಗಿದ್ದ ತಡೆಯಾಜ್ಞೆಯನ್ನು ಗುಜರಾತ್ ಹೈಕೋರ್ಟ್ ತೆರವು ಮಾಡಿತ್ತು. ಇದರಿಂದಾಗಿ ವಿಚಾರಣೆ ನಡೆಸಿದ ಸೂರತ್ ಕೋರ್ಟ್ ಕಳೆದ ವಾರವಷ್ಟೇ ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಈ ಪ್ರಕರಣದ ಬಹುತೇಕ ಎಲ್ಲಾ ವಿಚಾರಣೆಯ ಸಂದರ್ಭದಲ್ಲೂ ರಾಹುಲ್ ಗಾಂಧಿ ಖುದ್ದು ತಾವೇ ಹಾಜರಿದ್ದರು.
ಚುನಾವಣೆ ಹೊತ್ತಿನಲ್ಲಿ ರಾಹುಲ್ ಗಾಂಧಿ ಮೊದಲ ರಾಜ್ಯ ಪ್ರವಾಸ!
ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಹೆಚ್.ಹೆಚ್ ವರ್ಮಾ ನ್ಯಾಯಾಲಯವು ಅವರಿಗೆ ಐಪಿಸಿ ಸೆಕ್ಷನ್ 499 (ಮಾನನಷ್ಟ), 500 (ಮಾನಹಾನಿಗಾಗಿ ಶಿಕ್ಷೆ) ಅಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 15,000 ರೂಪಾಯಿ ದಂಡ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಜಾಮೀನು ಕೂಡ ಪಡೆದಿದ್ದಾರೆ. ರಾಹುಲ್ ಗಾಂಧಿಯವರ ಮನವಿಯ ಮೇರೆಗೆ, ಅವರ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ, ಅವರಿಗೆ 30 ದಿನಗಳೊಳಗೆ ಕೋರ್ಟ್ ತನ್ನನ್ನು ಅಪರಾಧಿ ಎಂದು ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.