ವೃದ್ಧ ದಂಪತಿಯ ಆರೈಕೆದಾರನಾಗಿದ್ದ ಯುವಕ, ಲಕ್ಷಾಂತರ ರೂ. ಮೌಲ್ಯದ ಆಭರಣ ಕದ್ದು ಮದುವೆಯಾಗಲು ಉತ್ತರ ಪ್ರದೇಶಕ್ಕೆ ಹೋಗಿದ್ದ. ಕದ್ದ ಆಭರಣವನ್ನು ವಧುವಿಗೆ ತೊಡಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದರು. ವರ ಕಳ್ಳ ಎಂದು ತಿಳಿದ ವಧು ಮದುವೆ ನಿರಾಕರಿಸಿದಳು. ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಆರೋಪಿ ಉತ್ತರ ಪ್ರದೇಶದವನು.

ಇಲ್ಲೊಬ್ಬ ಯುವಕ ತಾನು ಶ್ರೀಮಂತರ ಮನೆಯಲ್ಲಿ ವೃದ್ಧ ದಂಪತಿಯ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದನು. ಆದರೆ, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ನೋಡಿಕೊಂಡು ಬಂಗಾರದ ಆಭರಣವನ್ನು ಕದ್ದಿದ್ದಾನೆ. ಎಷ್ಟೇ ಹುಡುಕಿದರೂ ಆಭರಣದ ಸಿಗದ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮೇಲೆ ಅನುಮಾನ ಬಂದು ಅವರ ಮದುವೆ ಮಂಟಪಕ್ಕೆ ಹೋದಾಗ ಅಲ್ಲಿ ವಧುವಿಗೆ ಆಭರಣ ಕೊಟ್ಟು ಮದುವೆ ಮಾಡಿಕೊಳ್ಳುತ್ತಿದ್ದುದು ಕಂಡುಬಂದಿದೆ. ಕದ್ದ ಮಾಲ್‌ನ ಸಮೇತವಾಗಿ ಸಿಕ್ಕಿಬಿದ್ದ ಕಳ್ಳ ಯುವಕನನ್ನು ಮದುವೆ ಮಂಟಪದಲ್ಲಿಯೇ ಬಂಧಿಸಿ ಕರೆದೊಯ್ದಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನ ರಾಜ್ಯದ ಜೈಪುರದ ಗಾಂಧಿನಗರ ಠಾಣೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಮದುವೆ ಮಂಟಪದಲ್ಲಿ ತಾನು ಮದುವೆ ಮಾಡಿಕೊಳ್ಳುತ್ತಿದ್ದ ವಧುವಿನ ಕೊರಳಿಗೆ ತಾಳಿ ಕಟ್ಟುವ ಕೆಲವೇ ಗಂಟೆಯ ಮೊದಲು ಆತನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಸಂದೀಪ್ ವರ್ಮಾ ಎಂದು ಹೇಳಲಾಗಿದೆ. ಈತ ಉತ್ತರ ಪ್ರದೇಶದವನಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಕಳ್ಳತನದ ಆರೋಪ ಎದುರಿಸುತ್ತಿದ್ದಾನೆ. ದೂರು ದಾಖಲಾದ ನಂತರ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ರಾಜಸ್ಥಾನ ವಿಶ್ವವಿದ್ಯಾಲಯದ ಎದುರು ವಾಸ:
ರಾಜಸ್ಥಾನ ವಿಶ್ವವಿದ್ಯಾಲಯದ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ವೃದ್ಧ ದಂಪತಿಗಳ ಆರೈಕೆಗಾಗಿ ಸಂದೀಪ್ ವರ್ಮಾ ನನ್ನು ನೇಮಿಸಲಾಗಿತ್ತು. ವೃದ್ಧ ದಂಪತಿಯ ಸೊಸೆ, ಸಂದೀಪ್‌ಗೆ ತಿಂಗಳಿಗೆ ₹15,000 ಸಂಬಳ ನೀಡುತ್ತಿದ್ದರು. ಆದರೆ, ಕಡಿಮೆ ಸಂಬಳದಲ್ಲಿ ಐಷಾರಾಮಿ ಜೀವನ ನಡೆಸಲಾಗುವುದಿಲ್ಲ, ಜೊತೆಗೆ ಮದುವೆ ಖರ್ಚಿಗಾಗಿ ಹಣದ ಅವಶ್ಯಕತೆ ಇರುವುದರಿಂದ ತಾನು ಕೆಲಸ ಮಾಡುವ ಮನೆಯಲ್ಲಿಯೇ ಸಂದೀಪ್ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಕದ್ದಿದ್ದಾನೆ. ಏಪ್ರಿಲ್ 12 ರಂದು ಗಾಂಧಿನಗರ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕದ್ದ ಆಭರಣಗಳನ್ನು ವಧುವಿಗೆ ತೊಡಿಸಲು ಬಂದಿದ್ದ ವರ:
ಇನ್ನು ಪೊಲೀಸರು ಪ್ರಕರಣ ದಾಖಲಾದ ನಂತರ, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆಭರಣ ನಾಪತ್ತೆಯಾದ ಹಾದಿಯನ್ನು ಹಿಡಿದುಕೊಂಡು ಹೋದಾಗ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದೀಪನ ಮೇಲೂ ಅನುಮಾನ ಬಂದಿದೆ. ಆತನ ಬಗ್ಗೆ ವಿಚಾರಿಸಿದಾಗ ಸಂದೀಪ್ ಉತ್ತರ ಪ್ರದೇಶದವನೆಂದು ತಿಳಿದುಬಂದಿದೆ. ಆತನೊಂದಿಗೆ ಕೆಲಸ ಮಾಡುತ್ತಿದ್ದ ಇತರರಿಂದ ಆತನ ಕುಟುಂಬ ಮತ್ತು ಮನೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಯಿತು. 

ನಂತರ, ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದಾಗ, ಸಂದೀಪ್ ಮದುವೆಯಾಗುತ್ತಿದ್ದಾನೆ ಮತ್ತು ಕದ್ದ ಆಭರಣಗಳನ್ನು ತನ್ನ ಹೆಂಡತಿಗೆ ನೀಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಮೇ 20 ರಂದು, ಮದುವೆ ಮಂಟಪಕ್ಕೆ ಪೊಲೀಸರು ದಾಳಿ ನಡೆಸಿ ಸಂದೀಪ್‌ನನ್ನು ಬಂಧಿಸಿದ್ದಾರೆ. ಆತನನ್ನು ಜೈಪುರಕ್ಕೆ ಕರೆತರಲಾಗಿದ್ದು, ಆಭರಣಗಳು ಮತ್ತು ಹಣದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.

ಮದುವೆ ಮುರಿದುಕೊಂಡ ವಧು:
ಇನ್ನು ತಾನು ಮದುವೆ ಮಾಡಿಕೊಳ್ಳುತ್ತಿರುವ ವರ ಕಳ್ಳ ಎಂಬುದು ಮದುವೆಗೆ ಮೊದಲೇ ಬಹಿರಂಗವಾಗಿದೆ. ಮದುವೆ ಮಂಟಪದಲ್ಲಿಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆದರೆ, ಆರೋಪಿ ಇಂದು ತನ್ನ ಮದುವೆ ಇದ್ದು ತಾಳಿ ಕಟ್ಟಿ ಮದುವೆ ಮಾಡಿಕೊಂಡು ನಂತರ ಪೊಲೀಸ್ ಠಾಣೆಗೆ ಸರೆಂಡರ್ ಆಗುವುದಾಗಿ ತಿಳಿಸಿದ್ದಾನೆ. ಆಗ ಮದುವೆ ಮಾಡಿಕೊಳ್ಳುವ ಯುವತಿ ತಾನು ಈ ಮದುವೆಗೆ ಒಪ್ಪಿಕೊಳ್ಳುವುದಿಲ್ಲ. ನೀನು ಕಳ್ಳತನ ಮಾಡಿದ ಆಭರಣ ತಂದುಕೊಟ್ಟು ಮದುವೆ ಮಾಡಿಕೊಳ್ಳಲು ಬಂದಿದ್ದೀಯ, ಸ್ವಂತವಾಗಿ ದುಡಿಮೆ ಬಿಟ್ಟು ಕಳ್ಳತನ ಮಾಡಿದ ನಿನ್ನ ಮೇಲೆ ನಂಬಿಕೆ ಇಲ್ಲ ಎಂದು ಮದುವೆಯನ್ನೇ ಮುರಿದುಕೊಂಡಿದ್ದಾಳೆ.