ನವದೆಹಲಿ (ನ. 07): ಕುಸಿಯುತ್ತಿರುವ ಅರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಪ್ಯಾಕೇಜ್ ಪ್ರಕಟಿಸಿದ್ದು, ಈ ಬಾರಿ ವಸತಿ ವಲಯಕ್ಕೆ ಅನ್ವಯವಾಗುವಂತೆ 25000 ಕೋಟಿ ರು. ಮೌಲ್ಯದ ಪ್ಯಾಕೇಜ್ ಘೋಷಿಸಿದೆ.

ದೇಶಾದ್ಯಂತ ವಿವಿಧ ಕಾರಣಗಳಿಂದಾಗಿ 1600 ಕ್ಕೂ  ಹೆಚ್ಚು ವಸತಿ ಯೋಜನೆಗಳು ಸ್ಥಗಿತಗೊಂಡಿದ್ದು, ಇವುಗಳನ್ನು ಪೂರ್ಣಗೊಳಿಸಲು ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದ
ಪುನಶ್ಚೇತನಕ್ಕೆ ಮುಂದಾಗಿದೆ.

ದಿಲ್ಲಿಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 80 ರೂ; ವಾರದಲ್ಲಿ ದುಪ್ಪಟ್ಟು ದರ ಏರಿಕೆ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಪರ್ಯಾಯ ಹೂಡಿಕೆ ನಿಧಿಯಿಂದ 10 ಸಾವಿರ ಕೋಟಿ ನೀಡಲಿದೆ. ಉಳಿದ 15 ಸಾವಿರ ಕೋಟಿ ರು. ಗಳನ್ನು ಎಸ್‌ಬಿಐ ಹಾಗೂ ಎಲ್‌ಐಸಿ ನೀಡಲಿದೆ. ಇದರಿಂದ ದೇಶಾದ್ಯಂತ ಸ್ಥಗಿತಗೊಂಡಿರುವ 1600 ವಸತಿ ಯೋಜನೆಗಳ 4.58 ಲಕ್ಷ ಮನೆ ನಿರ್ಮಾಣ ಪೂರ್ಣಕ್ಕೆ ಸಹಾಯವಾಗಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ಸೌಲಭ್ಯ ಬಳಕೆಯಾಗಿ ನಿರ್ಮಾಣ ಕಾಮಗಾರಿ ಪುನರಾರಂಭಗೊಂಡರೆ ವಿವಿಧ ವಲಯಗಳಲ್ಲಿ ಬೇಡಿಕೆ ಸೃಷ್ಟಿಯಾಗಿ, ಪರೋಕ್ಷವಾಗಿ ದೇಶದ ಆರ್ಥಿಕತೆಗೆ ಚೇತರಿಕೆ ಸಿಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ.