ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಅಬಕಾರಿ ಸುಂಕವನ್ನು  ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಿದೆ. ಆದರೆ, ಈ ಬೆಲೆ ಏರಿಕೆ ಗ್ರಾಹಕನ ಜೇಬಿಗೆ ಹೊರೆಯಾಗೋದಿಲ್ಲ.

ನವದೆಹಲಿ (ಏ.7): ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ ಮೇಲೆ 2 ರೂಪಾಯಿ ದರ ಏರಿಕೆ ಮಾಡಿದೆ. ಏಪ್ರಿಲ್‌ ತಿಂಗಳ ಆರಂಭದಲ್ಲಿಯೇ ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 2 ರೂಪಾಯಿ ಏರಿಕೆ ಮಾಡಿತ್ತು. ಹೊಸ ಬೆಲೆಗಳು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಆದರೆ, ಕೇಂದ್ರ ಸರ್ಕಾರ ಮಾಡಿರುವ ಈ ಬೆಲೆ ಏರಿಕೆ ಗ್ರಾಹಕನ ಮೇಲೆ ಪರಿಣಾಮ ಬೀರೋದಿಲ್ಲ.

ಪ್ರಸ್ತುತ, ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.90 ರೂ. ಮತ್ತು ಡೀಸೆಲ್ ಮೇಲೆ 15.80 ರೂ. ಅಬಕಾರಿ ಸುಂಕವನ್ನು ಸಂಗ್ರಹ ಮಾಡುತ್ತಿತ್ತು. ಈ ಹೆಚ್ಚಳದ ನಂತರ, ಪೆಟ್ರೋಲ್ ಮೇಲಿನ ಸುಂಕವು ಲೀಟರ್‌ಗೆ 21.90 ರೂ. ಮತ್ತು ಡೀಸೆಲ್ ಮೇಲೆ 17.80 ರೂಪಾಯಿ ಆಗಲಿದೆ. ದೆಹಲಿಯಲ್ಲಿ, ಪ್ರಸ್ತುತ ಪೆಟ್ರೋಲ್ ಅನ್ನು ಲೀಟರ್‌ಗೆ 94 ರೂ. ಮತ್ತು ಡೀಸೆಲ್ ಅನ್ನು ಲೀಟರ್‌ಗೆ 87 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಹೆಚ್ಚಳದೊಂದಿಗೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಮತ್ತು ಸೆಸ್ ಕೂಡ ಹೆಚ್ಚಾಗುತ್ತದೆ. ಇದರ ಆಧಾರದ ಮೇಲೆ ಹೊಸ ಬೆಲೆಗಳನ್ನು ನಿರ್ಧರಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿರುವುದರಿಂದ ಹೊಸ ಅಬಕಾರಿ ಸುಂಕವನ್ನು ಇಂಧನ ಸಂಸ್ಕರಣಾ ಕಂಪನಿಗಳಿಂದ ವಸೂಲಿ ಮಾಡಲಿದೆ.

ಇಂದು ಅಬಕಾರಿ ಸುಂಕ ದರಗಳಲ್ಲಿ ಹೆಚ್ಚಳವಾದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ಪಿಎಸ್‌ಯು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಇಲಾಖೆ ಕೂಡ ಅಧಿಕೃತವಾಗಿ ತಿಳಿಸಿದೆ.

Scroll to load tweet…

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮುಖ್ಯವಾಗಿ 4 ವಿಷಯಗಳ ಮೇಲೆ ಅವಲಂಬಿತವಾಗಿದೆ. ಕಚ್ಚಾ ತೈಲ ಬೆಲೆ, ರೂಪಾಯಿ ವಿರುದ್ಧ ಯುಎಸ್ ಡಾಲರ್ ಮೌಲ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳು ಹಾಗೂ ದೇಶದಲ್ಲಿ ಇಂಧನ ಬೇಡಿಕೆ. ಇವುಗಳ ಆಧಾರದಲ್ಲಿ ಬೆಲೆ ಏರಿಕೆ ಆಗುತ್ತದೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೇಗೆ ನಿರ್ಧರಿಸಲಾಗುತ್ತದೆ: ಜೂನ್ 2010 ರವರೆಗೆ, ಸರ್ಕಾರವು ಪೆಟ್ರೋಲ್ ಬೆಲೆಯನ್ನು ನಿರ್ಧರಿಸುತ್ತಿತ್ತು ಮತ್ತು ಅದನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. 2010 ಜೂನ್ 26ರ ನಂತರ, ಸರ್ಕಾರವು ಪೆಟ್ರೋಲ್ ಬೆಲೆಗಳ ನಿರ್ಧಾರವನ್ನು ತೈಲ ಕಂಪನಿಗಳಿಗೆ ಬಿಟ್ಟಿತು. ಅದೇ ರೀತಿ, ಅಕ್ಟೋಬರ್ 2014 ರವರೆಗೆ, ಡೀಸೆಲ್ ಬೆಲೆಯನ್ನು ಸಹ ಸರ್ಕಾರ ನಿರ್ಧರಿಸುತ್ತಿತ್ತು. 2014ರ ಅಕ್ಟೋಬರ್ 19 ರಿಂದ, ಸರ್ಕಾರವು ಈ ಕಾರ್ಯವನ್ನು ತೈಲ ಕಂಪನಿಗಳಿಗೆ ಹಸ್ತಾಂತರಿಸಿತು. ಪ್ರಸ್ತುತ, ತೈಲ ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ, ವಿನಿಮಯ ದರ, ತೆರಿಗೆ, ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ವೆಚ್ಚ ಮತ್ತು ಇತರ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರ್ಧರಿಸುತ್ತವೆ.