ಭೂ-ಅಂತರಿಕ್ಷ ಮಾಹಿತಿ ಸಂಗ್ರಹಕ್ಕಿನ್ನು ಅನುಮತಿ ಬೇಕಿಲ್ಲ| ಜಿಯೋಸ್ಪೇಷಿಯಲ್‌ ಕ್ಷೇತ್ರದ ನಿಯಮ ಕೇಂದ್ರದಿಂದ ಸಡಿಲ| ನಕ್ಷೆ ಉದ್ಯಮಕ್ಕೆ ಖಾಸಗಿಯವರಿಗೂ ಪ್ರವೇಶ

ನವದೆಹಲಿ(ಫೆ.16): ಭೂ-ಅಂತರಿಕ್ಷ (ಜಿಯೋಸ್ಪೇಷಿಯಲ್‌) ವಲಯದಲ್ಲಿ ಹೊಸ ಆವಿಷ್ಕಾರಗಳಿಗೆ ಕಾರಣವಾಗುವ ಹಾಗೂ ಸ್ಟಾರ್ಟಪ್‌ ಉದ್ದಿಮೆಗಳಿಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ಷೇತ್ರದ ನಿಯಮಾವಳಿಗಳನ್ನು ಸರಳಗೊಳಿಸಿದೆ. ಹೊಸ ನಿಯಮದಡಿ ಭಾರತದ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು ನಕ್ಷೆ ರಚನೆ, ಭೂ-ಅಂತರಿಕ್ಷ ದತ್ತಾಂಶ ಸಂಗ್ರಹ ಹಾಗೂ ಬಳಕೆಗೆ ಸಂಬಂಧಿಸಿದಂತೆ ಇನ್ನುಮುಂದೆ ಯಾರ ಅನುಮತಿಯನ್ನೂ ಪಡೆಯಬೇಕಿಲ್ಲ.

Add Asianetnews Kannada as a Preferred SourcegooglePreferred

ಮ್ಯಾಪ್‌ ಇಂಡಿಯಾ ಜತೆ ಇಸ್ರೋ ಒಪ್ಪಂದ!

ಇದುವರೆಗಿನ ನಿಯಮಗಳ ಅನ್ವಯ ಸಮೀಕ್ಷೆ, ನಕ್ಷೆ ರಚನೆ ಮತ್ತು ಇವುಗಳಿಗೆ ಸಂಬಂಧಿಸಿದ ಅಪ್ಲಿಕೇಷನ್‌ ರಚನೆ ವೇಳೆ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿತ್ತು. ಆದರೆ ಹೊಸ ನಿಯಮಗಳ ಅನ್ವಯ ಭಾರತೀಯ ಕಂಪನಿಗಳಿಗೆ ಈ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪೂರ್ವಾನುಮತಿ, ಭದ್ರತಾ ಪರವಾನಗಿ, ಪರವಾನಗಿ, ನಕ್ಷೆ ಮತ್ತು ದತ್ತಾಂಶ ಸಂಗ್ರಹ ಖರೀದಿ, ಮಾರಾಟಕ್ಕೆ ಇದ್ದ ಎಲ್ಲಾ ನಿಯಮಗಳನ್ನು ತೆಗೆದುಹಾಕಲಾಗಿದೆ. ಇದುವರೆಗೆ ಸರ್ವೇ ಆಫ್‌ ಇಂಡಿಯಾದಿಂದ ಇದಕ್ಕೆಲ್ಲಾ ಅನುಮತಿ ಪಡೆಯಬೇಕಿತ್ತು. ಇಂಥ ಪ್ರತಿ ಅನುಮತಿಗೂ 3-6 ತಿಂಗಳ ಕಾಲಾವಕಾಶ ಬೇಕಿತ್ತು.

ಇದೇ ವೇಳೆ - ಪ್ರಾದೇಶಿಕ ಮೊಬೈಲ್‌ ಮ್ಯಾಪಿಂಗ್‌ ಸರ್ವೇ, ಸ್ಟ್ರೀಟ್‌ ವ್ಯೂ, ಪ್ರಾದೇಶಿಕ ಜಲಸಂಪನ್ಮೂಲ ಕುರಿತ ಸಮೀಕ್ಷೆ ನಡೆಸಲು ದೇಶಿ ಕಂಪನಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಲಾಭ ಏನು?

- ಸರ್ಕಾರಿ ಸಂಸ್ಥೆಗಳ ಜೊತೆಗೆ ಖಾಸಗಿ ಸಂಸ್ಥೆಗಳಿಗೂ ಈ ವಲಯದಲ್ಲಿ ಸ್ಪರ್ಧೆಯ ಸಮಾನ ಅವಕಾಶ.

- ಗುಣಮಟ್ಟದ ಸಮೀಕ್ಷೆ, ನಕ್ಷೆ ಲಭ್ಯತೆ. ಈ ಕ್ಷೇತ್ರದಲ್ಲಿ ನಾವೀನ್ಯತೆಗೆ ಅವಕಾಶ.

- ಸಮಗ್ರ, ಅತ್ಯಂತ ನಿಖರ, ಅತ್ಯಂತ ಸೂಕ್ಷ್ಮ ಮತ್ತು ಕಾಲಕಾಲಕ್ಕೆ ನವೀಕರಣಗೊಂಡಿರುವ ಮಾಹಿತಿ ಲಭ್ಯ.

- ಹೊಸ ಉದ್ಯೋಗ ಸೃಷ್ಟಿ. ಆರ್ಥಿಕತೆಗೆ ಮತ್ತಷ್ಟುಉತ್ತೇಜನ.

- ಕೃಷಿ, ಆರ್ಥಿಕ, ರಕ್ಷಣಾ ವಲಯಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ನೆರವು

ಜೂನ್‌ಗೆ ಬರಲಿದೆ 100 ಪಟ್ಟು ಹೆಚ್ಚು ನಿಖರ ಕರ್ನಾಟಕ ಮ್ಯಾಪ್: ದೇಶದ ಪ್ರತಿ ಮನೆ, ಕಚೇರಿಗಳು ಲಭ್ಯ!

ಡಿಜಿಟಲ್‌ ಇಂಡಿಯಾಕ್ಕೆ ಪೂರಕ ನಿರ್ಧಾರ: ಮೋದಿ

ಡಿಜಿಟಲ್‌ ಇಂಡಿಯಾಕ್ಕೆ ಪೂರಕವಾಗುವ ದೊಡ್ಡ ನಿರ್ಧಾರವೊಂದನ್ನು ನಮ್ಮ ಸರ್ಕಾರ ಕೈಗೊಂಡಿದೆ. ಜಿಯೋಸ್ಪೇಷಿಯಲ್‌ ಡೇಟಾ ಸಂಗ್ರಹ ಹಾಗೂ ಉತ್ಪಾದನೆಗೆ ಸಂಬಂಧಿಸಿದ ನೀತಿಗಳನ್ನು ಸರಳಗೊಳಿಸಿದ್ದೇವೆ. ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿ ಈ ಕ್ರಮ ಕೈಗೊಂಡಿದ್ದು, ದೇಶದ ಸ್ಟಾರ್ಟಪ್‌ಗಳು, ಖಾಸಗಿ ಕಂಪನಿಗಳು, ಸರ್ಕಾರಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳಿಗೆ ಇದರಿಂದ ಅನುಕೂಲವಾಗಲಿದೆ. ಈ ನಿರ್ಧಾರದಿಂದ ಉದ್ಯೋಗಾವಕಾಶಗಳು ಹೆಚ್ಚಲಿದ್ದು, ಆರ್ಥಿಕ ಪ್ರಗತಿಗೆ ವೇಗ ಸಿಗಲಿದೆ. ದೇಶದ ರೈತರಿಗೂ ಇದರಿಂದ ಪ್ರಯೋಜನವಿದ್ದು. ಕೃಷಿ ಮತ್ತು ತತ್ಸಂಬಂಧಿ ಕ್ಷೇತ್ರಗಳಿಗೆ ಹೊಸ ತಂತ್ರಜ್ಞಾನಗಳು ಮತ್ತು ವೇದಿಕೆಗಳು ಸಿಗಲಿವೆ. ಉದ್ದಿಮೆಗಳನ್ನು ಸ್ಥಾಪಿಸುವುದು ಕೂಡ ಇದರಿಂದ ಸುಲಭವಾಗಲಿದೆ.

ನರೇಂದ್ರ ಮೋದಿ, ಪ್ರಧಾನಿ