ದೇಶದ ಟೀವಿ ಚಾನೆಲ್ಸ್ ಯೂಟ್ಯೂಬ್‌ನಲ್ಲಿ ನಿಷೇಧ: ಗೂಗಲ್‌ಗೆ ರಷ್ಯಾ $20,000,000,000,000,000,000,000,000,000,000,000 ದಂಡ!
ಉಕ್ರೇನ್ ಮೇಲಿನ ಯುದ್ಧದ ಕಾರಣಕ್ಕಾಗಿ ತನ್ನ ದೇಶದ ಟೀವಿ ಚಾನೆಲ್‌ಗಳಿಗೆ ಯೂಟ್ಯೂಬ್‌ನಲ್ಲಿ ನಿಷೇಧ ಹೇರಿದ್ದಕ್ಕಾಗಿ ರಷ್ಯಾದ ನ್ಯಾಯಾಲಯವೊಂದು ಗೂಗಲ್ ಕಂಪನಿಗೆ ಕಂಡುಕೇಳರಿಯದ, ಐತಿಹಾಸಿಕ 20 ಡಿಸಿಲಿಯನ್ ಡಾಲರ್ ದಂಡ ವಿಧಿಸಿದೆ.
ಮಾಸ್ಕೋ (ನ.2): ಉಕ್ರೇನ್ ಮೇಲಿನ ಯುದ್ಧದ ಕಾರಣಕ್ಕಾಗಿ ತನ್ನ ದೇಶದ ಟೀವಿ ಚಾನೆಲ್‌ಗಳಿಗೆ ಯೂಟ್ಯೂಬ್‌ನಲ್ಲಿ ನಿಷೇಧ ಹೇರಿದ್ದಕ್ಕಾಗಿ ರಷ್ಯಾದ ನ್ಯಾಯಾಲಯವೊಂದು ಗೂಗಲ್ ಕಂಪನಿಗೆ ಕಂಡುಕೇಳರಿಯದ, ಐತಿಹಾಸಿಕ 20 ಡಿಸಿಲಿಯನ್ ಡಾಲರ್ ದಂಡ ವಿಧಿಸಿದೆ.
1ರ ಮುಂದೆ 33 ಸೊನ್ನೆಗಳನ್ನು ಸೇರಿಸಿದರೆ 1 ಡಿಸಿಲಿಯನ್ ಆಗುತ್ತದೆ. ರಷ್ಯಾದ ನ್ಯಾಯಾಲಯ ಗೂಗಲ್ ಕಂಪನಿಗೆ ವಿಧಿಸಿರುವುದು 20 ಡಿಸಿಲಿಯನ್ ಡಾಲರ್. ಅಂದರೆ 2ರ ಮುಂದೆ 34 ಸೊನ್ನೆಗಳನ್ನು ಸೇರಿಸಬೇಕು. ಜಗತ್ತಿನ ಇತಿಹಾಸದಲ್ಲೇ ಇಷ್ಟೊಂದು ದಂಡವನ್ನು ಯಾವುದೇ ದೇಶದಲ್ಲೂ ಯಾರಿಗೂ ಹೇರಿಲ್ಲ.
ಗೂಗಲ್ ಕಂಪನಿಯ ಒಟ್ಟಾರೆ ಮಾರುಕಟ್ಟೆ ಮೌಲ್ಯವೇ 2 ಟ್ರಿಲಿಯನ್ ಡಾಲರ್. 2ರ ಮುಂದೆ 12 ಸೊನ್ನೆ ಸೇರಿಸಿದರೆ 2 ಟ್ರಿಲಿಯನ್ ಡಾಲರ್ ಆಗುತ್ತದೆ (168 ಲಕ್ಷ ಕೋಟಿ ರು.). ಇನ್ನು ಇಡೀ ಜಗತ್ತಿನ ಜಿಡಿಪಿಯ ಗಾತ್ರ 110 ಟ್ರಿಲಿಯನ್ ಡಾಲರ್. ಅಂದರೆ, 110ರ ಮುಂದೆ 13 ಸೊನ್ನೆಗಳನ್ನು ಸೇರಿಸಬೇಕು (9247 ಲಕ್ಷ ಕೋಟಿ). ಇದರರ್ಥ ಜಗತ್ತಿನ ಆರ್ಥಿಕತೆಯಲ್ಲಿರುವ ಅಷ್ಟೂ ಹಣವನ್ನು ತಂದರೂ ರಷ್ಯಾ ವಿಧಿಸಿರುವ ದಂಡದ ಅರ್ಧ ಮೊತ್ತಕ್ಕೂ ಸಾಕಾಗುವುದಿಲ್ಲ!
ಕೋರ್ಟ್ ಹೇಳಿದ್ದೇನು?:
ರಷ್ಯಾ ಸರ್ಕಾರದ ಟೀವಿ ವಾಹಿನಿಗಳನ್ನು ಯೂಟ್ಯೂಬ್‌ನಲ್ಲಿ ನಿಷೇಧಿಸುವ ಮೂಲಕ ಗೂಗಲ್ ಕಂಪನಿಯು ರಾಷ್ಟ್ರೀಯ ಪ್ರಸಾರ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ಹೀಗಾಗಿ ದಂಡ ವಿಧಿಸಲಾಗುತ್ತಿದೆ. ಈ ದಂಡ ಪಾವತಿ ಮಾಡುವುದರ ಜತೆಗೆ ರಷ್ಯಾದ ಚಾನೆಲ್‌ಗಳ ಪ್ರಸಾರವನ್ನು ಯೂಟ್ಯೂಬ್‌ನಲ್ಲಿ ಪುನಾರಂಭಿಸಬೇಕು. ಒಂದು ವೇಳೆ ತನ್ನ ಆದೇಶವನ್ನು 9 ತಿಂಗಳ ಒಳಗಾಗಿ ಪಾಲನೆ ಮಾಡದೇ ಇದ್ದರೆ ಪ್ರತಿ ದಿನವೂ ದಂಡ ದುಪ್ಪಟ್ಟಾಗುತ್ತಾ ಹೋಗುತ್ತದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
2022ರಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಹಿನ್ನೆಲೆಯಲ್ಲಿ ಹಿಂಸಾರೂಪದ ಘಟನೆಗಳನ್ನು ಕಡಿಮೆ ತೋರಿಸುವ ಕಾರಣದಿಂದ ರಷ್ಯಾದ ಆರ್‌ಟಿ ಹಾಗೂ ಸ್ಪುಟ್ನಿಕ್ ಚಾನಲ್‌ಗಳನ್ನು ಯೂಟ್ಯೂಬ್‌ನಿಂದ ಗೂಗಲ್ ತೆಗೆದು ಹಾಕಿತ್ತು. ಇದಲ್ಲದೆ ರಷ್ಯಾದ ಪರ ಬೆಂಬಲವಾಗಿ ನಿಂತ 1000 ಚಾನೆಲ್ ಹಾಗೂ 15 ಸಾವಿರಕ್ಕೂ ಅಧಿಕ ವಿಡಿಯೋಗಳನ್ನು ಜಾಗತಿಕವಾಗಿ ಯೂಟ್ಯೂಬ್‌ನಿಂದ ಕೈಬಿಟ್ಟಿತ್ತು.