ವಿದೇಶಿ ವಿನಿಮಯ ಉಳಿಸಲು ಕೇಂದ್ರ ಸರ್ಕಾರವು ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮೇಲಿನ ಆಮದು ಸುಂಕವನ್ನು ಶೇ.15ಕ್ಕೆ ಹೆಚ್ಚಿಸಿದೆ. ಈ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಲಿದ್ದು, ದುಬೈನಿಂದ ಆಮದು ಹೆಚ್ಚುವ ಮತ್ತು ಕಳ್ಳಸಾಗಣೆಗೂ ದಾರಿಯಾಗುವ ಸಾಧ್ಯತೆಯಿದೆ.

  • - ವಿದೇಶಿ ವಿನಿಮಯ ಬಚಾವೋ-
  • - ಆಮದು ಸುಂಕ ಶೇ.15ಕ್ಕೆ ಏರಿಕೆ
  • - ಶೇ.6 ಇದ್ದಿದ್ದು ಇನ್ಮುಂದೆ ಡಬಲ್‌--
  • ಏಕೆ ಆಮದು ಸುಂಕ ದುಬಾರಿ?

ನವದೆಹಲಿ (ಮೇ.14): ಅನಗತ್ಯ ಚಿನ್ನ ಖರೀದಿ ಒಂದು ವರ್ಷ ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಕರೆ ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿ ಆಮದು ಸುಂಕವನ್ನು ಶೇ.6ರಿಂದ ಶೇ.15ಕ್ಕೆ ಹೆಚ್ಚಿಸಿದೆ. ಜೊತೆಗೆ ಪ್ಲಾಟಿನಂನ ಸುಂಕ ಶೇ. 6.4ರಿಂದ ಶೇ.15.4ಕ್ಕೆ ಹೆಚ್ಚಿಸಲಾಗಿದೆ.

Add Asianetnews Kannada as a Preferred SourcegooglePreferred

ಅಗತ್ಯವಲ್ಲದ ಖರೀದಿಗೆ ಕಡಿವಾಣ ಮತ್ತು ವಿದೇಶ ವಿನಿಮಯ ಸಂಗ್ರಹ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಪರಿಷ್ಕೃತ ಸುಂಕ ಬುಧವಾರದಿಂದಲೇ ಅನುಷ್ಠಾನಕ್ಕೆ ಬರಲಿದೆ.

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಳಿಕ ಭಾರೀ ಪ್ರಮಾಣದಲ್ಲಿ ಹೆಚ್ಚಿರುವ ತೈಲ ಖರೀದಿ ಮತ್ತು ರಸಗೊಬ್ಬರ ಖರೀದಿಗೆ ಭಾರೀ ಪ್ರಮಾಣದ ವಿದೇಶಿ ವಿನಿಮಯ ಸಂಗ್ರಹ ಬಳಕೆಯಾಗುತ್ತಿದ್ದು ಅದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಿದೆ. ಹೀಗಾಗಿ ಆ ಸಂಕಷ್ಟವನ್ನು ನೀಗುವ ಯೋಜನೆಯ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಆಮದು ಕಡಿಮೆ ಆಗಲ್ಲ:

ಸರ್ಕಾರದ ಕ್ರಮದಿಂದ ಚಿನ್ನ, ಬೆಳ್ಳಿ ಬೆಲೆ ಏರಿಕೆ ಆಗುತ್ತದೆ. ಆದರೆ ಆಮದು ಇಳಿಕೆ ಆಗಲ್ಲ ಎಂದು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ ಹೇಳಿದೆ. ಅಲ್ಲದೆ ಇದರಿಂದ ಚಿನ್ನ, ಬೆಳ್ಳಿ ಕಳ್ಳಸಾಗಣೆ ಹೆಚ್ಚಾಗಬಹುದು. ಜೊತೆಗೆ ಆಭರಣ ರಫ್ತಿನ ವೆಚ್ಚ ಹೆಚ್ಚಾಗಲಿದೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.

ದುಬೈ ಚಿನ್ನ ಆಮದು ಹೆಚ್ಚಳ:

ಚಿನ್ನದ ಆಮದು ಸುಂಕ ಹೆಚ್ಚಳದ ಬಳಿಕ, ಜನರು ದುಬೈನಿಂದ ಚಿನ್ನ ತರುವ ಪ್ರಮಾಣ ಹೆಚ್ಚಬಹುದು. ಕಾರಣ, ದುಬೈ ಜೊತೆಗೆ ಭಾರತ ಮುಕ್ತ ವ್ಯಾಪಾರ ಒಪ್ಪಂದ ಹೊಂದಿದೆ. ಹೀಗಾಗಿ ಇತರೆ ದೇಶಗಳಿಂದ ಶೇ.1ರಷ್ಟು ಕಡಿಮೆ ಶುಲ್ಕದಲ್ಲಿ ಅಲ್ಲಿಂದ ಚಿನ್ನ ತರಬಹುದು. ಅಂದರೆ ಶೇ.14ರ ತೆರಿಗೆ ದರದಲ್ಲಿ ತರಬಹುದು ಎಂದು ಚಿಂತಕರ ಚಾವಡಿಯಾದ ಜಿಟಿಆರ್‌ಐ ಅಂದಾಜಿಸಿದೆ. ದುಬೈನಿಂದ ಕಡಿಮೆ ತೆರಿಗೆಯಲ್ಲಿ ವಾರ್ಷಿಕ 200 ಟನ್‌ ಚಿನ್ನ ಆಮದಿಗೆ ಭಾರತ ಈಗಾಗಲೇ ಸಮ್ಮತಿ ಸೂಚಿಸಿದೆ.

ಚಿನ್ನ ಖರೀದಿ ನಂ.2:

ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನ ಬಳಕೆದಾರ ದೇಶವಾಗಿದೆ. ಕಳೆದ 2 ವರ್ಷದಿಂದ ದರ ಗಗನಕ್ಕೇರಿದ್ದರೂ ಚಿನ್ನದ ಬೇಡಿಕೆ ಕಡಿಮೆ ಆಗಿಲ್ಲ. ಕಳೆದ ವರ್ಷ ಭಾರತ ಅಂದಾಜು 7 ಲಕ್ಷ ಕೋಟಿ ರು. ಮೌಲ್ಯದ 720 ಟನ್‌ ಚಿನ್ನ ಆಮದು ಮಾಡಿಕೊಂಡಿತ್ತು. ಇದು ವಿದೇಶಿ ವಿನಿಮಯ ಸಂಗ್ರಹಕ್ಕೆ ಹೊಡೆತ ನೀಡಿದೆ. ಜೊತೆಗೆ ರುಪಾಯಿ ಮೌಲ್ಯ ಕುಸಿತ, ಚಾಲ್ತಿ ಖಾತೆ ಕೊರತೆಗೂ ಕಾರಣವಾಗಿದೆ. ಹೀಗಾಗಿ ಸರ್ಕಾರ ಈ ಸುಂಕ ಏರಿಕೆ ಕ್ರಮ ಕೈಗೊಂಡಿದೆ.

ಜನರ ಬಳಿ 30000 ಟನ್‌ ಚಿನ್ನ ಸಂಗ್ರಹ:

ಆರ್‌ಬಿಐ ಬಳಿ 880 ಟನ್‌ ಸಂಗ್ರಹವಿದ್ದರೆ, ಜನಸಾಮಾನ್ಯ ಬಳಿ ಅಂದಾಜು 30000 ಟನ್‌ ಚಿನ್ನ ಸಂಗ್ರಹವಿದೆ. ಇದು ವಿಶ್ವದ ಯಾವುದೇ ದೇಶದ ಜನರ ಬಳಿ ಇರುವ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ಜನರ ಬಳಿ ಇರುವ ಚಿನ್ನದ ಮೊತ್ತ ಅಂದಾಜು 475 ಲಕ್ಷ ಕೋಟಿ ರುಪಾಯಿ.

ಚಿನ್ನ, ಬೆಳ್ಳಿ ಬೆಲೆ ಭಾರಿ ಹೆಚ್ಚಳ, ಬೇಡಿಕೆ ಕುಸಿತ

ಆಮದು ಸುಂಕ ಹೆಚ್ಚಳದಿಂದ ಚಿನ್ನ ಮತ್ತು ಬೆಳ್ಳಿ ಆಮದು ದುಬಾರಿಯಾಗಲಿದೆ. ಇದರಿಂದ ದೇಶದಲ್ಲಿ ಚಿನ್ನದ ದರ ಏರಿಕೆಯಾಗಲಿದ್ದು, ಆಭರಣಗಳ ಬೇಡಿಕೆ ಕಡಿಮೆಯಾಗುವ ನಿರೀಕ್ಷೆ ಇದೆ. ಬುಧವಾರ 10 ಗ್ರಾಂ ಚಿನ್ನದ ದರ 8550 ರು. ಏರಿಕೆ ಕಂಡು 1,65,350 ರು.ಗೆ ಹಾಗೂ ಬೆಳ್ಳಿ ಕೇಜಿಗೆ 20,500 ರು. ಏರಿ 2,97,500 ರು.ಗೆ ತಲುಪಿದೆ.