ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದ ಉತ್ಪಾಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಉತ್ಪಾಲ್ ಸ್ಪರ್ಧೆ ಚುನಾವಣೆಗೂ ಮೊದಲೇ ಬಿಜೆಪಿಗೆ ಗೋವಾ ಚಿಂತೆ ಉಲ್ಬಣ  

ಗೋವಾ(ಜ.21): ಗೋವಾ ಚುನಾವಣೆ(Goa Election 2022) ಇದೀಗ ರಂಗೇರಿದೆ. ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ(BJP) ಮತ್ತೊಂದು ಶಾಕ್ ಎದುರಾಗಿದೆ. ಗೋವಾ ಚುನಾವಣೆಗೆ ಸ್ಪರ್ಧಿಸುವ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಇದೀಗ ಪರಿಕ್ಕರ್ ಕುಟುಂಬದ ತಲೆನೋವು ಎದುರಿಸುತ್ತಿದೆ. ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಅಸಮಾಧಾನ ತೋಡಿಕೊಂಡ ಗೋವಾ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಉತ್ಪಾಲ್ ಪರಿಕ್ಕರ್(Utpal Parrikar) ಇದೀಗ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಇಷ್ಟೇ ಅಲ್ಲ ಸ್ವತಂತ್ರ್ಯ ಅಭ್ಯರ್ಥಿಯಾಗಿ(Independent) ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಗೋವಾ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಪಣಜಿ(Panaji) ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಉತ್ಪಾಲ್ ಪರಿಕ್ಕರ್ ಘೋಷಿಸಿದ್ದಾರೆ. ಮನೋಹರ್ ಪರಿಕ್ಕರ್(Manohar parrikar) ನಿಧನದ ಬಳಿಕ ಉತ್ಪಾಲ್ ಪರಿಕ್ಕರ್ ಗೋವಾ ಬಿಜೆಪಿಯಲ್ಲಿ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಲು ಯತ್ನಿಸಿದ್ದರು. ಇದೇ ವೇಳೆ ಪರಿಕ್ಕರ್ ಕುಟುಂಬ ಹಾಗೂ ಬಿಜೆಪಿ ನಡುವೆ ತಿಕ್ಕಾಟ ನಡೆಯುತ್ತಲೇ ಬಂದಿತ್ತು. ಇದೀಗ ಸ್ಫೋಟಗೊಂಡಿದೆ.

Goa Elections: ಬಿಜೆಪಿ ಪಟ್ಟಿಯಿಂದ ಪರಿಕ್ಕರ್ ಪುತ್ರನ ಹೆಸರು ಔಟ್, ಲಾಭ ಪಡೆಯಲು ಕೇಜ್ರಿ ಯತ್ನ!

ಬಿಜೆಪಿ ಹೈಕಮಾಂಡ್ ಗೋವಾ(Goa Bjp) ಚುನಾವಣೆ ಅಖಾಡಕ್ಕೆ 34 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಉತ್ಪಾಲ್ ಪರಿಕ್ಕರ್ ಹೆಸರು ಕೈಬಿಡಲಾಗಿತ್ತು. ಇದು ಉತ್ಪಾಲ್ ಪರಿಕ್ಕರ್ ಅಸಮಾಧಾನಕ್ಕೆ ಕಾರಣವಾಗಿತ್ತು. ಬಹಿರಂಗವಾಗಿ ಅಸಮಾಧಾನ ತೋಡಿಕೊಂಡ ಉತ್ಪಾಲ್ ಪರಿಕ್ಕರ್ ಟಿಕೆಟ್‌ಗಾಗಿ ಪ್ರತಿಭಟನೆ ಆರಂಭಿಸಿದ್ದರು.

ಅನಾರೋಗ್ಯದಿಂದ ನಿಧನರಾಗಿರುವ ಮನೋಹರ್ ಪರಿಕ್ಕರ್ 25 ವರ್ಷಗಳಿಂದ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ತಂದೆಯ ಅನುಕಂಪ ಕಾರಣ ಪಣಜಿ ಕ್ಷೇತ್ರದಿಂದ ಗೆಲುವು ಸುಲಭ ಅನ್ನೋದು ಉತ್ಪಾಲ್ ಪರಿಕ್ಕರ್ ಲೆಕ್ಕಾಚಾರವಾಗಿತ್ತು. ಆದರೆ ಮನೋಹರ್ ಪರಿಕ್ಕರ್ ನಿಧನದ ಬಳಿಕ ಪಣಜಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಅಟಾನಾಸಿಯೋ ಮೊನ್ಸೆರೇಟ್‌ಗೆ ಟಿಕೆಟ್ ನೀಡಲಾಗಿದೆ. ಈ ಬಾರಿ ಈ ಟಿಕೆಟ್ ತನಗೆ ಬೇಕು ಎಂದು ಉತ್ಪಾಲ್ ಪರಿಕ್ಕರ್ ಪಟ್ಟು ಹಿಡಿದಿದ್ದರು.

Assembly Elections: ಗೋವಾದಲ್ಲೂ ಬಿಜೆಪಿಗೆ ಶಾಕ್? ಚಿಂತೆಗೆ ಕಾರಣವಾಯ್ತು ಪರಿಕ್ಕರ್ ಪುತ್ರನ ನಡೆ!

ಪರಿಕ್ಕರ್ ಕುಟುಂಬ ಬಿಜೆಪಿ ಕುಟುಂಬವಾಗಿದೆ. ಗೋವಾ ಹಾಗೂ ಕೇಂದ್ರದಲ್ಲಿ ಮನೋಹರ್ ಪರಿಕ್ಕರ್ ಕೊಡುಗೆಯನ್ನು ಬಿಜೆಪಿ ಸದಾ ಸ್ಮರಿಸಲಿದೆ. ಹೀಗಾಗಿ ಪರಿಕ್ಕರ್ ಕುಟುಂಬವನ್ನು ಬಿಜೆಪಿ ಅತ್ಯಂತ ಗೌರವದಿಂದ ಕಾಣುತ್ತದೆ. ಉತ್ಪಾಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಹಾಲಿ ಎಂಎಲ್ಎ ಈಗಾಗಲೇ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವುದರಿಂದ ಅವರನ್ನು ಕೈಬಿಟ್ಟು ಉತ್ಪಾಲ್‌ಗೆ ಟಿಕೆಟ್ ನೀಡುವುದು ಸರಿಯಲ್ಲ. ಉತ್ಪಾಲ್‌ಗೆ ಬೇರೆ ಎರಡು ಕ್ಷೇತ್ರ ಸೂಚಿಸಲಾಗಿದೆ. ಆದರೆ ಉತ್ಪಾಲ್ ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಇವರ ಜೊತೆಗೆ ಚರ್ಚಿಸುತ್ತೇವೆ ಎಂದು ಗೋವಾ ಚುನಾವಣೆ ಬಿಜೆಪಿ ಉಸ್ತುವಾರಿ ನಾಯಕ ದೇವೇಂದ್ರ ಫಡ್ನವಿಸ್(Devendra Fadnavis) ಹೇಳಿದ್ದಾರೆ.

Goa Election Politics: ತಾವು ಮಾತ್ರ ಹಿಂದೂಗಳು ಎಂದು ಬಿಜೆಪಿ ಭಾವಿಸಿದೆ: ಮಮತಾ ಬ್ಯಾನರ್ಜಿ

ಇದರ ನಡುವೆ ಉತ್ಪಾಲ್ ಪರಿಕ್ಕರ್ ಅಸಮಾಧಾನವನ್ನು ಆಮ್ ಆದ್ಮಿ ಪಕ್ಷ ಹಾಗೂ ಶಿವಸೇನೆ ಲಾಭ ಪಡೆಯಲು ಯತ್ನಿಸಿದೆ. ಪಣಜಿ ಕ್ಷೇತ್ರದಿಂದ ಉತ್ಪಾಲ್ ಪರಿಕ್ಕರ್‌ಗೆ ಆಮ್ ಆದ್ಮಿ ಪಾರ್ಟಿ ಟಿಕೆಟ್ ನೀಡುವುದಾಗಿ ಸ್ವತಃ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇದು ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಶಿವಸೇನೆ ಪಕ್ಷ ಕೂಡ ಪಣಜಿ ಕ್ಷೇತ್ರದಿಂದಲೇ ಉತ್ಪಾಲ್‌ ಪರಿಕ್ಕರ್‌ಗೆ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಇತರ ಪಕ್ಷಗಳಿಂದ ಭಾರಿ ಬೆಂಬಲ ಪಡೆದಿರುವ ಉತ್ಪಾಲ್ ಪರಿಕ್ಕರ್ ಇದೀಗ ಎಲ್ಲಾ ಉಹೆಗಳನ್ನು ತಲೆಕೆಳಗಾಗಿ ಮಾಡಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದೀಗ ಶಾಂತವಾಗಿದ್ದ ಗೋವಾದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಪಣಜಿ ಕ್ಷೇತ್ರ ಮಾತ್ರವಲ್ಲ ಸಂಪೂರ್ಣ ಗೋವಾದಲ್ಲಿ ಬಿಜೆಪಿ ಪ್ರಬಲ ಪೈಪೋಟಿ ಎದುರಿಸಲಿದೆ.