* ಮಹಾರಾಷ್ಟ್ರ ಬೆನ್ನಲ್ಲೇ ಗೋವಾದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ?* ಬಂಡಾಯದ ಬಿಸಿ, 7 ಕಾಂಗ್ರೆಸ್ ಶಾಸಕರು ನಾಪತ್ತೆ* ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ
ಪಣಜಿ(ಜು.10): ಬಿಜೆಪಿಯ ನೆರವಿನೊಂದಿಗೆ ಮಹಾರಾಷ್ಟ್ರದಲ್ಲಿ ಶಿವಸೇನೆ ಬಂಡಾಯಗಾರರು ಸರ್ಕಾರ ರಚಿಸಿದ ನಂತರ ಈಗ ಗೋವಾದ ಕಾಂಗ್ರೆಸ್ ಬಂಡಾಯಗಾರರೂ ಬಿಜೆಪಿ ಜೊತೆ ಕೈ ಮಿಲಾಯಿಸಲು ಸಜ್ಜಾಗಿದ್ದಾರೆ. ಗೋವಾದ ಕಾಂಗ್ರೆಸ್ ಶಾಸಕರು ಬಂಡಾಯದ ಹಾದಿ ಹಿಡಿದಿದ್ದಾರೆ. ಮೂಲಗಳ ಪ್ರಕಾರ ಕಾಂಗ್ರೆಸ್ ನ ಏಳು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಈ ಏಳು ಶಾಸಕರು ಕೂಡ ಕಾಂಗ್ರೆಸ್ ಸಭೆಯಿಂದ ನಾಪತ್ತೆಯಾಗಿದ್ದಾರೆ. ಹೀಗಿದ್ದರೂ ಈವರೆಗೆ ಈ ವಿಚಾರವಾಗಿ ಯಾರೂ ಬಹಿರಂಗವಾಗಿ ಬಾಯ್ಬಿಟ್ಟಿಲ್ಲ. ವಿಧಾನಸಭೆಯ ಎರಡು ವಾರಗಳ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಪಕ್ಷದೊಳಗೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವಿಚಾರವನ್ನು ಕಾಂಗ್ರೆಸ್ ತಳ್ಳಿ ಹಾಕಿದೆ.
ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ
ಆಡಳಿತಾರೂಢ ಬಿಜೆಪಿ ಇಂತಹ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ಹೇಳಿದ್ದಾರೆ.
ದಿಗಂಬರ ಕಾಮತ್ ಅವರ ಅಸಮಾಧಾನದ ಬಗ್ಗೆ ಮಾಹಿತಿ
ಮೂಲಗಳ ಪ್ರಕಾರ, ಈ ವರ್ಷದ ಆರಂಭದಲ್ಲಿ ನಡೆದ ಚುನಾವಣೆಯಲ್ಲಿ ದಿಗಂಬರ್ ಕಾಮತ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಹೀಗಿದ್ದರೂ ಶನಿವಾರ ನಡೆದ ಶಾಸಕರ ಸಭೆಗೆ ಹಾಜರಾಗಿರಲಿಲ್ಲ. ಪಕ್ಷದ ಮೈಕೆಲ್ ಲೋಬೋ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಕ್ಕೆ ಕಾಮತ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಪಕ್ಷ ಇಂತಹ ಆರೋಪಗಳನ್ನು ತಳ್ಳಿಹಾಕಿದೆ. ಏತನ್ಮಧ್ಯೆ, ಮಂಗಳವಾರ ನಡೆಯಬೇಕಿದ್ದ ಉಪಸಭಾಪತಿ ಸ್ಥಾನದ ಚುನಾವಣೆಯ ಅಧಿಸೂಚನೆಯನ್ನು ಗೋವಾ ವಿಧಾನಸಭೆ ಸ್ಪೀಕರ್ ರಮೇಶ್ ತಾವಡ್ಕರ್ ಭಾನುವಾರ ರದ್ದುಗೊಳಿಸಿದ್ದಾರೆ.
ಏಳು ಶಾಸಕರು ಬೇರ್ಪಟ್ಟರೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತೆ
ಗೋವಾದ 40 ಸದಸ್ಯರ ಅಸೆಂಬ್ಲಿಯಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 25 ಮತ್ತು ಪ್ರತಿಪಕ್ಷ ಕಾಂಗ್ರೆಸ್ 11 ಸದಸ್ಯರನ್ನು ಹೊಂದಿದೆ.
