ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಸಚಿವ ವಿಜಯ್ ಶಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ನವದೆಹಲಿ: ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಧ್ಯ ಪ್ರದೇಶದ ಬಿಜೆಪಿ ಸಚಿವ ವಿಜಯ್ ಶಾ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಭೂಷಣ್ ರಾಮಕೃಷ್ಣ ಗವಾಯಿ (CJI BR Gavai), ಸಾಂವಿಧಾನಿಕ ಹುದ್ದೆಯಲ್ಲಿರುವ ಓರ್ವ ವ್ಯಕ್ತಿ ಈ ರೀತಿಯ ಹೇಳಿಕೆ ನೀಡಲು ಹೇಗೆ ಸಾಧ್ಯ? ಸಚಿವರಾಗಿ ಯಾವ ರೀತಿಯ ಭಾಷೆ ಬಳಕೆ ಮಾಡಿದ್ದೀರಿ? ಎಂದು ಹೇಳಿ ವಿಜಯ್ ಶಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲ್ಲ ಮತ್ತು ತಡೆ ನೀಡಲು ನ್ಯಾಯಾಲಯ ನಿರಾಕರಿಸಿತು. ಸಚಿವ ಸ್ಥಾನದಲ್ಲಿರೋದರಿಂದ ಏನು ಆಗಲ್ಲ ಎಂದು ಭಾವಿಸಿರಬಹುದು. ಜವಾಭ್ದಾರಿಯುತ ಸ್ಥಾನದಲ್ಲಿರುವವರು ಮಾತನಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಮುಖ್ಯ ನ್ಯಾಯಧೀಶರು ಸೂಚಿಸಿದರು.
ಬಾರ್ ಆಂಡ್ ಬೆಂಚ್ ವರದಿ ಪ್ರಕಾರ, ನ್ಯಾಯಾಲಯದಲ್ಲಿ ಸಚಿವ ವಿಜಯ್ ಶಾ ಪರವಾಗಿ ವಾದ ಮಂಡಿಸಿದ ವಕೀಲ ವಿಭಾ ದತ್ತಾ, ನಮ್ಮ ಕಕ್ಷಿದಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರ ಮತ್ತು ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಮಾಧ್ಯಮಗಳು ಈ ವಿಷಯವನ್ನು ವಿಜೃಂಭಣೆಯಿಂದ ತೋರಿಸಿವೆ. ಆದೇಶ ನೀಡುವ ಮುನ್ನ ಹೈಕೋರ್ಟ್ ನಮ್ಮ ಮನವಿಯನ್ನು ಆಲಿಸಿಲ್ಲ. ನಾವು ದಾಖಲಾಗಿರುವ ಎಫ್‌ಐಆರ್‌ಗೆ ತಡೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ವಾದ ಮಂಡಿಸಿದರು. ಆದ್ರೆ ನ್ಯಾಯಾಲಯ ವಿಜಯ್ ಶಾ ಎಫ್‌ಐಆರ್‌ಗೆ ತಡೆ ನೀಡಲು ನಿರಾಕರಿಸಿತು.
ಹೈಜೋರ್ಟ್ ಸೂಚನೆ ಮೇರೆಗೆ ದಾಖಲಾದ ಎಫ್‌ಐಆರ್
ಮಧ್ಯಪ್ರದೇಶ ಹೈಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ನಾಲ್ಕು ಗಂಟೆಗಳ ಒಳಗೆ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಡಿಜಿಪಿಗೆ ನಿರ್ದೇಶನ ನೀಡಿತ್ತು. ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ಬುಧವಾರ ಸಂಜೆ ವಿಜಯ್ ಶಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಮೂರು ಗಂಭೀರ ಸೆಕ್ಷನ್‌ಗಳಾದ 152, 196(1)(b) ಮತ್ತು 197(1)(c) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಎಫ್‌ಐಆರ್‌ಗೆ ತಡೆಕೋರಿ ವಿಜಯ್ ಶಾ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದ್ರೆ ಸರ್ವೋಚ್ಚ ನ್ಯಾಯಾಲಯ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ಸಚಿವ ಎಂಬ ಕಾರಣಕ್ಕೆ?
ಸಚಿವ ವಿಜಯ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಜೆಐ ಭೂಷಣ್ ರಾಮಕೃಷ್ಣ ಗವಾಯಿ, ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳಿಂದ ಇಂತಹ ಹೇಳಿಕೆ ನಿರೀಕ್ಷಿಸಲು ಸಾಧ್ಯವಿಲ್ಲ. ದೇಶವು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ನೀವು ಏನು ಹೇಳುತ್ತಿದ್ದೀರಿ ಎಂದು ನಿಮಗೆ ತಿಳಿದಿರಬೇಕು. ನೀವು ಒಬ್ಬ ಸಚಿವರಾಗಿದ್ದೀರಿ ಎಂಬ ಕಾರಣಕ್ಕೆ... ಎಂದು ಹೇಳಿ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.
ಖಾಸಗಿ ವಾಹಿನಿ ಜೊತೆ ಮಾತನಾಡಿರುವ ವಿಜಯ್ ಶಾ, ತಮ್ಮ ಹೇಳಿಕೆಗೆ ಕ್ಷಮೆ ಕೇಳಿದರು. ನಾನು ಕನಸಿನಲ್ಲಿಯೂ ಕರ್ನಲ್ ಸೋಫಿಯಾ ಖುರೇಷಿ ಅವರ ಬಗ್ಗೆ ತಪ್ಪಾಗಿ ಯೋಚಿಸಿಲ್ಲ. ಸೇನೆಗೆ ಅಪಮಾನಿಸುವ ಬಗ್ಗೆ ಎಂದಿಗೂ ಮಾತನಾಡಲ್ಲ. ಸೋಫಿಯಾ ಸೋದರಿ ಜಾತಿ, ಧರ್ಮ ಮೀರಿ ದೇಶಕ್ಕಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಉಗ್ರರಿಗೆ ಸರಿಯಾದ ತಿರುಗೇಟು ನೀಡಿರುವ ಸೋದರಿ ಸೋಫಿಯಾ ಖುರೇಷಿ ಅವರಿಗೆ ಸೆಲ್ಯೂಟ್ ಮಾಡುತ್ತೇನೆ. ನಾನು ಸಹ ಸೇನಾ ಕುಟುಂಬದಿಂದ ಬಂದವನು. ಭಯೋತ್ಪಾದಕರಿಂದ ಸಿಂದೂರ ಕಳೆದುಕೊಂಡು ಮಹಿಳೆಯರ ನೋವನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಸಚಿವ ವಿಜಯ್ ಶಾ ಹೇಳಿದ್ದೇನು?
ನಮ್ಮ ದೇಶದ ಪುತ್ರಿಯರ ಸಿಂದೂರ ಅಳಿಸಿದ ಪಾಕಿಸ್ತಾನದ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನೇ ಪ್ರಧಾನಿ ಮೋದಿಯವರು ಕಳಿಸಿದರು ಎಂದು ಹೇಳಿಕೆ ನೀಡಿದ್ದರು.


