ಶಾಲೆಗಳಲ್ಲಿ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಕುರಿತು ತಿಳಿ ಹೇಳಲಾಗುತ್ತದೆ.  ಹೀಗೆ ತರಗತಿಯಲ್ಲಿ ಕಿರುಕುಳದ ಕುರಿತು ಜಾಗೃತಿ ಮೂಡಿಸುತ್ತಿರುವಾಗ 10ರ ಹರೆಯದ ಬಾಲಕಿ ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಆಕೆಯನ್ನು ಸಮಾಧಾನಿಸಿ ಮಾತನಾಡಿಸಿದಾಗ ಕರಾಳ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ.

ಹೈದರಾಬಾದ್ (ಜೂ.26) ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಡ್ ಟಚ್ ಬ್ಯಾಡ್ ಟಚ್ ಕುರಿತು ಶಿಕ್ಷಣ ನೀಡಲು ಆಯಾ ರಾಜ್ಯದಲ್ಲಿ ಹಲವು ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಪೈಕಿ ಶಿ (SHE) ತಂಡ ತೆಲಂಗಾಣದ ಆದಿಲ್‌ಬಾದ್ ಶಾಲೆಗೆ ಬೇಟಿ ನೀಡಿ ಕಿರುಕಳು, ಅಸಭ್ಯ ವರ್ತನೆ ಸೇರಿದಂತೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ತಿಳಿ ಹೇಳುವ, ಜಾಗೃತಿ ಮೂಡಿಸಲು ತರಗತಿಗಳನ್ನು ತೆಗೆದುಕೊಂಡಿದೆ. ಈ ತರಗತಿ ಬಳಿಕ 10ರ ಹರೆಯದ 5ನೇ ತರಗತಿ ವಿದ್ಯಾರ್ಥಿನಿ ಶಿ ತಂಡದ ಬಳಿಕ ತನಗಾಗಿರುವ ಕರಾಳ ಘಟನೆ ಬಿಚ್ಚಿಟ್ಟಿದ್ದಾಳೆ. ವಿದ್ಯಾರ್ಥಿನಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡ ತಂಡದ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಆರೋಪಿಯನ್ನು ಆರೆಸ್ಟ್ ಮಾಡಿದ್ದಾರೆ.

ಧೈರ್ಯ ತುಂಬಿ ಮಾಹಿತಿ ಪಡೆದ ತಂಡ

ಗುಡ್ ಆ್ಯಂಡ್ ಬ್ಯಾಡ್ ಟಚ್ ತರಗತಿಯಲ್ಲಿ ಪಾಠ ಕೇಳಿದ ಈ ವಿದ್ಯಾರ್ಥಿನಿಗೆ ತನ್ನ ಮೇಲೆ ನಿರಂತರವಾಗಿ ಲೈಂಗಿಕ ಕಿರುಕುಳ ನಡೆಯುತ್ತಿದೆ ಅನ್ನೋದು ಅರಿವಾಗಿದೆ. ಇದರಿಂದ ವಿದ್ಯಾರ್ಥಿನಿ ಕಣ್ಣುಗಳು ತುಂಬಿದೆ. ವಿದ್ಯಾರ್ಥಿನಿಯನ್ನು ಗಮನಿಸಿದ ತಂಡ, ಆಕೆಯನ್ನು ತರಗತಿಯಿಂದ ಕರೆದುಕೊಂಡು ಹೋಗಿ ಆಕೆಗೆ ಧೈರ್ಯ ತುಂಬಲಾಗಿದೆ. ಬಳಿಕ ಆಕೆಯಿಂದ ಮಾಹಿತಿ ಕೇಳಿದ್ದಾರೆ.

ಶಾಲೆ ಪಕ್ಕದಲ್ಲೇ ಕಿರುಕುಳ

23 ವರ್ಷದ ಆರೋಪಿ ಜಾಧವ್ ಕೃಷ್ಣ ಈ ಬಾಲಕಿಯನ್ನು ಭೇಟಿಯಾಗಿ ಕಿರುಕುಳ ನೀಡುತ್ತಿದ್ದ. ಕೃಷಿ ಸಲಕರಣೆ ಮಾರಾಟ ಮಾಡುತ್ತಿದ್ದ ಈ ಆರೋಪಿ ಬಾಲಕಿಗೆ ಪರಿಚಯವಾಗಿದ್ದ. ಬಳಿಕ ಶಾಲೆ ಪಕ್ಕದಲ್ಲೇ ಇರುವ ಸಣ್ಣ ಓಣಿಯಲ್ಲಿ ಸೇರಿದಂತೆ ಹಲವೆಡೆ ಕಿರುಕುಳ ನೀಡುತ್ತಿದ್ದ. ಭೇಟಿಯಾದಾಗ ಬಿಸ್ಕೆಟ್, ಚಾಕೋಲೇಟ್ ಖರೀದಿಸಲು 10 ರೂಪಾಯಿ ನೀಡುತ್ತಿದ್ದ. ಬಳಿಕ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಈ ಎಲ್ಲಾ ಮಾಹಿತಿಯನ್ನು ಬಾಲಕಿ ತಂಡದ ಸದಸ್ಯರಲ್ಲಿ ಹೇಳಿದ್ದಾಳೆ.

ತಂತ್ರ ಉಪಯೋಗಿಸಿ ಆರೋಪಿ ಬಂಧಿಸಿ ಪೊಲೀಸ್

ಶಿ ತಂಡದ ಸದಸ್ಯರು ಪೊಲೀಸರಿಗೆ ಈ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿ ಪಡೆದ ಪೊಲೀಸರು ಆರೋಪಿಯ ಫೋನ್ ನಂಬರ್ ಸಂಗ್ರಹಿಸಿದ್ದಾರೆ. ಬಳಿಕ ಕೃಷಿ ಸಲಕರಣೆ ಖರೀದಿ ನೆಪದಲ್ಲಿ ಕರೆ ಮಾಡಿದ್ದಾರೆ. ಕೆಲ ಸಲಕರಣೆಗಳನ್ನು ನೀಡುವಂತೆ ಹೇಳಿದ್ದಾರೆ. ಇದರಂತೆ ಆರೋಪಿ ಸಲಕರಣೆ ಒಪ್ಪಿಸಲು ತರುವಾಗ ಪೊಲೀಸರು ಆತನ ಬಂಧಿಸಿದ್ದಾರೆ. ಪೊಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.