ರಾತ್ರಿಯಾಗುತ್ತಿದ್ದಂತೆ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಪ್ರೇತ, ಪಿಶಾಚಿಗಳ ಸಂಚಾರ ಆರಂಭಗೊಳ್ಳುತ್ತಿದೆ. ಆತ್ಮಗಳ ಕೂಗು, ಬೆಚ್ಚಿ ಬೀಳಿಸುವ ಶಬ್ದಗಳಿಂದ ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಹೊರಬಂದು ಪ್ರತಿಭಟನೆ ನಡೆಸಿದ್ದಾರೆ.
ನವದೆಹಲಿ (ಸೆ.26) ವಿದ್ಯಾರ್ಥಿನಿಯ ಹಾಸ್ಟೆಲ್‌ನಲ್ಲಿ ಪ್ರೇತ, ಪಿಶಾಚಿಗಳ ಕೂಗು ಕೇಳಿಸುತ್ತಿದೆ ಎಂದು ಹಾಸ್ಟೆಲ್‌ನಿಂದ ಹೊರಬಂದು ಯೂನಿವರ್ಸಿಟಿ ಆಡಳಿತ ಮಂಡಳಿ ವಿರುದ್ದ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ.ಹಾಸ್ಟೆಲ್‌ನಲ್ಲಿ ಪ್ರೇತದ ಕೂಗು, ಪ್ರೇತ ಪಿಶಾಚಿ ಪ್ರತ್ಯಕ್ಷವಾಗಿರುವ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಪರಿಣಾಮ ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಹೊರಬಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ ಘಟನೆ ಪಂಜಾಬ್‌ನ ಪಟಿಯಾಲದಲ್ಲಿರುವ ಚಿತ್ಕಾರ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ವಿಡಿಯೋದಿಂದ ಸೃಷ್ಟಿಯಾದ ಕೋಲಾಹಲ
ಚಿತ್ಕಾರ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಪ್ರೇತ ಕೂಗುತ್ತಿರುವ ರೀತಿ, ರಾತ್ರಿಯ ನಿಶಬ್ದ ವೇಳೆಯಲ್ಲಿ ಶಬ್ದ ಕೇಳಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಪ್ರಮುಖವಾಗಿ ಇದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಈ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ. ಹೀಗಾಗಿ ಪ್ರೇತ ರೂಪದಲ್ಲಿ ಕಾಡುತ್ತಿದೆ ಅನ್ನೋ ಮಾತುಗಳು ಹರಿದಾಡಿತ್ತು. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿನ ವಿಡಿಯೋ ಇದಕ್ಕೆ ಪುಷ್ಠಿ ನೀಡಿತ್ತು.
ಹಾಸ್ಟೆಲ್‌ಗೆ ಆ್ಯಂಬುಲೆನ್ಸ್ ಆಗಮಿಸಿತ್ತು. ಹೀಗಾಗಿ ಇಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇಷ್ಟೇ ಅಲ್ಲ ಈ ಘಟನೆ ಬಳಿಕ ಅರ್ಚಕರೊಬ್ಬರು ಹಾಸ್ಟೆಲ್‌ಗೆ ಭೇಟಿ ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ, ಹಾಸ್ಟೆಲ್‌ಗೆ ಆ್ಯಂಬುಲೆನ್ಸ್ ಆಗಮಿಸಿದ್ದು ನಿಜ, ಅದು ವಿದ್ಯಾರ್ಥಿಯನ್ನು ಆಸ್ಪತ್ರೆ ದಾಖಲಿಸಲು, ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಅರ್ಚಕರೊಬ್ಬರ ಪುತ್ರಿ ಇಲ್ಲಿನ ವಿದ್ಯಾರ್ಥಿಯಾಗಿದ್ದಾರೆ. ಪುತ್ರಿಯನ್ನು ನೋಡಲು ಅರ್ಚಕರು ಆಗಮಿಸಿದ್ದಾರೆ. ಹೀಗಾಗಿ ಪ್ರತಿಭಟನೆ ಕೈಬಿಡಲು ಆಡಳಿತ ಮಂಡಳಿ ಮನವಿ ಮಾಡಿದೆ.
ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ
ವಿದ್ಯಾರ್ಥಿಗಳು ಮಾಡಿದ ಗಂಭೀರ ಆರೋಪವನ್ನು ವಿಶ್ವವಿದ್ಯಾಲದ ಹಾಸ್ಟೆಲ್ ಆಡಳಿತ ವಿಭಾಗ ತಳ್ಳಿ ಹಾಕಿತ್ತು. ಅಲ್ಲದೆ ಸೋಶಿಯಲ್ ಮೀಡಿಯಾದ ವಿಡಿಯೋ ಸಾಕ್ಷಿ ನೀಡಿ ಕಟ್ಟು ಕತೆಗಳನ್ನು ಹೇಳಬೇಡಿ ಎಂದು ಎಚ್ಚರಿಸಿತ್ತು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳ ಗುಂಪು ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಹೊರಬಂದು ಪ್ರತಿಭಟನೆ ಮಾಡಿದ್ದಾರೆ. ಕ್ಷಣಕ್ಷಣಕ್ಕೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿದೆ. ವಿಶ್ವವಿದ್ಯಾಲದ ಹಾಸ್ಟೆಲ್ ಆಡಳಿತ ವಿಭಾಗ, ಕಾಲೇಜಿನ ಡಳಿತ ಮಂಡಳಿ ಮನ ಒಲಿಕೆ ಪ್ರಯತ್ನಗಳು ವಿಫಲಗೊಂಡಿದೆ. ವಿದ್ಯಾರ್ಥಿಗಳು ಉದ್ರಿಕ್ತಗೊಂಡಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳ ಗುಂಪು ಪ್ರತಿಭಟನೆ ತೀವ್ರಗೊಳಿಸಿದೆ. ಪೊಲೀಸರ ವಾಹನಗಳನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಜಖಂಗೊಳಿಸಿದ್ದಾರೆ. ಇತ್ತ ಪೊಲೀಸರು ವಿದ್ಯಾರ್ಥಿಗಳ ಅಹವಾಲು ಆಲಿಸಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಮಿಸ್ಸಿಂಗ್ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಆದರೆ ಯಾರು ಮಿಸ್ಸಿಂಗ್ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ. ವದಂತಿಗಳಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.


