Asianet Suvarna News Asianet Suvarna News

RIP Gen Bipin Rawat : ದೇಶದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ ಸ್ಪೆಷಲಿಸ್ಟ್ ರಾವತ್

  •  ದೇಶದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ ಸ್ಪೆಷಲಿಸ್ಟ್ ರಾವತ್
  •  ಮ್ಯಾನ್ಮಾರ್‌ ಗಡಿಯೊಳಗೆ ಭಾರತ ದಾಳಿ ನಡೆಸಿದ್ದಕ್ಕೆ ರಾವತ್‌ ಸೂತ್ರಧಾರ
  •  ಪಾಕಿಸ್ತಾನ ಮೇಲಿನ ಸರ್ಜಿಕಲ್‌ ದಾಳಿ, ಏರ್‌ ಸ್ಟ್ರೈಕ್‌ನಲ್ಲೂ ಪ್ರಮುಖ ಪಾತ್ರ
  •  ತಗಾದೆ ತೆಗೆವ ಚೀನಾಕ್ಕೆ ಪದೇ ಪದೇ ತೀಕ್ಷ್ಣ ತಿರುಗೇಟು ನೀಡಿದ್ದ ದಂಡನಾಯಕ
Gen bipin Rawat  Master of surgical strikes snr
Author
Bengaluru, First Published Dec 9, 2021, 8:18 AM IST

ನವದೆಹಲಿ (ಡಿ.09) : ದೇಶದ ಮೊದಲ ಸೇನಾ ಮಹಾದಂಡ ನಾಯಕರಾಗಿದ್ದ ಜನರಲ್‌ ಬಿಪಿನ್‌ ರಾವತ್‌ (Gen Bipin Rawat)  ಅವರು ಸೇನೆಯಲ್ಲಿನ 40 ವರ್ಷಗಳ ತಮ್ಮ ಜೀವನದುದ್ದಕ್ಕೂ ಹಲವು ಮಹತ್ವದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವರು. 2015ರಲ್ಲಿ ಮ್ಯಾನ್ಮಾರ್‌ನಲ್ಲಿ  ಭಾರತ (India) ನಡೆಸಿದ ಮೊದಲ ಸರ್ಜಿಕಲ್‌ ದಾಳಿಯ (Surgical Strike)  ರೂವಾರಿಯಾಗಿದ್ದ ಬಿಪಿನ್‌ ರಾವತ್‌ ಅವರು, ಪಾಕಿಸ್ತಾನ (Pakistan ) ಮೇಲೆ ಭಾರತ ನಡೆಸಿದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಏರ್‌ ಸ್ಟ್ರೈಕ್‌ನಲ್ಲೂ ಮಹತ್ತರ ಪಾತ್ರ ನಿರ್ವಹಿಸಿದ್ದರು. ಸೇನಾ ಮುಖ್ಯಸ್ಥರಾಗಿದ್ದಾಗ ಹಾಗೂ ಮಹಾದಂಡ ನಾಯಕರಾದ ಬಳಿಕವೂ ಚೀನಾ (China) ಜತೆಗಿನ ಗಡಿ ವಿವಾದವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದ್ದರು. ಕಾಲಕಾಲಕ್ಕೆ ಕಮ್ಯುನಿಸ್ಟ್‌ ದೇಶಕ್ಕೆ ನೇರ ಎಚ್ಚರಿಕೆ ನೀಡುವ ಮೂಲಕ ಬೆದರಿಕೆ ತಂತ್ರಗಳಿಗೆ ಭಾರತ ಮಣಿಯದು ಎಂಬ ಸಂದೇಶವನ್ನು ನೆರೆ ದೇಶಕ್ಕೆ ರವಾನಿಸುವಲ್ಲಿ ಸಫಲರಾಗಿದ್ದರು.

ಮೊದಲ ಸರ್ಜಿಕಲ್‌ ದಾಳಿ 

2015ರ ಜೂನ್‌ 4ರಂದು ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಬಂಡುಕೋರರು  ಮಣಿಪುರದ (Manipur) ಚಂಡೇಲ್‌ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್‌ ವಾಹನಗಳ ಮೇಲೆ ದಾಳಿ ಮಾಡಿದ್ದರು. ಈ ಘಟನೆಯಲ್ಲಿ 18 ಭಾರತೀಯ (India) ಯೋಧರು ಹುತಾತ್ಮರಾಗಿದ್ದರು. 15 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಚಂಡೇಲ್‌ ಜಿಲ್ಲೆ ಮ್ಯಾನ್ಮಾರ್‌ ಗಡಿಯಲ್ಲಿದೆ. ಇಲ್ಲಿ ದಾಳಿ ನಡೆಸಿದ್ದ ಬಂಡುಕೋರರು ಮ್ಯಾನ್ಮಾರ್‌ನಲ್ಲಿ ಆಶ್ರಯ ಪಡೆದಿದ್ದರು. ಆಗ ಆ ಭಾಗದ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಹಾಗೂ ಲೆಫ್ಟಿನಂಟ್‌ ಜನರಲ್‌ ಆಗಿದ್ದ ಬಿಪಿನ್‌ ರಾವತ್‌ ಅವರು ಉಗ್ರರ ಮೇಲೆ ದಾಳಿಯ ಮೇಲುಸ್ತುವಾರಿ ವಹಿಸಿದ್ದರು. ಭಾರತೀಯ ಯೋಧರು ಮ್ಯಾನ್ಮಾರ್‌ ಗಡಿಯೊಳಕ್ಕೆ ನುಗ್ಗಿ ಎರಡು ಉಗ್ರಗಾಮಿ ಶಿಬಿರಗಳನ್ನು ಧ್ವಂಸ ಮಾಡಿದ್ದರು. ನಾಗಾಲ್ಯಾಂಡ್‌, ಮಣಿಪುರ ಗಡಿಗೆ ಹೊಂದಿಕೊಂಡ ಸ್ಥಳಗಳಲ್ಲಿ ಈ ದಾಳಿ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಎನ್‌ಎಸ್‌ಸಿಎನ್‌-ಕೆ ಸಂಘಟನೆಗೆ ಸೇರಿದ 38 ಉಗ್ರರು ಹತರಾಗಿದ್ದರು. ಕೇವಲ 40 ನಿಮಿಷಗಳಲ್ಲೇ ಈ ಕಾರ್ಯಾಚರಣೆ ಮುಗಿದು ಹೋಗಿತ್ತು. ಭಾರತದ ಮೇಲೆ ದಾಳಿ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನು ಈ ಘಟನೆ ಇಡೀ ವಿಶ್ವಕ್ಕೇ ರವಾನಿಸಿತ್ತು. ಮತ್ತೊಂದು ದೇಶದೊಳಕ್ಕೆ ನುಗ್ಗಿ ಸೀಮಿತ ರೀತಿಯಲ್ಲಿ ಭಾರತ ನಡೆಸಿದ ಮೊದಲ ಸರ್ಜಿಕಲ್‌ ಸ್ಟ್ರೈಕ್‌ ಇದು ಎಂದು ಕರೆಯಲಾಗುತ್ತದೆ. ಈಶಾನ್ಯ ಭಾರತದಲ್ಲಿ ಉಗ್ರವಾದವನ್ನು ಮಟ್ಟಹಾಕುವಲ್ಲಿ ಬಿಪಿನ್‌ ರಾವತ್‌ರದ್ದು ಅಪಾರ ಶ್ರಮವಿದೆ.

ಪಾಕ್‌ ಮೇಲೂ ಸರ್ಜಿಕಲ್‌ ಸ್ಟ್ರೈಕ್‌

ಬಿಪಿನ್‌ ರಾವತ್‌ ಅವರು ಭೂಸೇನೆಯ ಉಪಮುಖ್ಯಸ್ಥರಾಗಿದ್ದಾಗ 2016ರ ಸೆಪ್ಟೆಂಬರ್‌ನಲ್ಲಿ ಜಮ್ಮು-ಕಾಶ್ಮೀರದ (Jammu And Kashmir) ಉರಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ದಾಳಿ ಮಾಡಿದರು. ಈ ಘಟನೆಯಲ್ಲಿ 19 ಯೋಧರು ಹುತಾತ್ಮರಾದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೇಲೆ ತಕ್ಕ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಕೂಗು ಬಲವಾಯಿತು. ಗಡಿ ನಿಯಂತ್ರಣ ರೇಖೆ ದಾಟಿ ಹೋದ ಭಾರತೀಯ ಯೋಧರು ಆ ದೇಶದಲ್ಲಿ ಸರ್ಜಿಕಲ್‌ ಸ್ಟ್ರೈಕ್ ನಡೆಸಿದ್ದರು. ಈ ಘಟನೆಯಿಂದ ಪಾಕಿಸ್ತಾನ (Pakistan) ಬೆವೆತು ಹೋಗಿತ್ತು. ಭಾರತೀಯ ಸೇನೆಯ ಹೊಸ ಕೆಚ್ಚು, ಧೈರ್ಯ ಕಂಡು ಹೆದರಿ ಕುಳಿತಿತ್ತು. ಈ ದಾಳಿಯಲ್ಲಿ ಪ್ರಮುಖ ಪಾತ್ರವನ್ನು ಬಿಪಿನ್‌ ರಾವತ್‌ (Bipin Rawat) ನಿರ್ವಹಿಸಿದ್ದರು. ಈ ದಾಳಿ ರಾವತ್‌ ಅವರಿಗೆ ಮುಖ್ಯವೂ ಆಗಿತ್ತು. ಏಕೆಂದರೆ ಸೇನೆಯಲ್ಲಿ ಮೇಜರ್‌ ಆಗಿ ಒಂದು ತುಕಡಿಯನ್ನು ಮೊದಲ ಬಾರಿಗೆ ರಾವತ್‌ ಅವರು ನಿರ್ವಹಿಸಿದ್ದು ಉರಿಯಲ್ಲೇ. ಸರ್ಜಿಕಲ್‌ (ಸ್ಟ್ರೈಕ್ )  ಯಶಸ್ವಿಯಾದ ಮೂರೇ ತಿಂಗಳಲ್ಲಿ ಬಿಪಿನ್‌ ರಾವತ್‌ ಅವರು ಸೇನಾ ಮುಖ್ಯಸ್ಥರಾದರು.

ಪಾಕ್‌ಗೆ ಏರ್‌ಸ್ಟ್ರೈಕ್‌ ಶಾಕ್‌ : 2019ರ ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರು ಸಾಗುತ್ತಿದ್ದ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಮಂಡ್ಯ ಜಿಲ್ಲೆಯ ವೀರ ಯೋಧ ಗುರು ಸೇರಿ 40 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯಿಂದ ಪಾಕಿಸ್ತಾನ ಮೇಲೆ ಭಾರತೀಯರ ಸಹನೆಯ ಕಟ್ಟೆಯೊಡೆದಿತ್ತು. ನೆರೆ ದೇಶದ ಮೇಲೆ ಯುದ್ಧ ಸಾರಬೇಕು ಎಂಬ ಕೂಗು ಕೇಳಿಬಂದಿತ್ತು. ದಾಳಿ ನಡೆದ 12 ದಿನಕ್ಕೇ ಭಾರತೀಯ ವಾಯುಸೇನೆ ಪಾಕಿಸ್ತಾನ ಮೇಲೆ ಏರ್‌ ಸ್ಟ್ರೈಕ್‌ ನಡೆಸಿತ್ತು. ಆ ಸಂದರ್ಭದಲ್ಲಿ ಭೂಸೇನೆಯ ಮುಖ್ಯಸ್ಥರಾಗಿದ್ದವರು ಇದೇ ರಾವತ್‌. ಆ ದಾಳಿ ಕಾರ್ಯಾಚರಣೆಯ ಪ್ರತಿ ಹಂತದಲ್ಲೂ ಭಾಗಿಯಾಗಿದ್ದ ಅವರು, ಮರುದಿನ ಪಾಕಿಸ್ತಾನ ಭಾರತದ ಮೇಲೆ ದಂಡೆತ್ತಿ ಬಂದಾಗ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಿ ಪಾಕಿಸ್ತಾನದ ಯಾವುದೇ ದುಸ್ಸಾಹಸಕ್ಕೂ ಅವಕಾಶ ಕೊಟ್ಟಿರಲಿಲ್ಲ.

ಚೀನಾಕ್ಕೆ ತ್ರಿವಳಿ ಶಾಕ್‌ ನೀಡಿದ್ದ ಜನರಲ್‌

1. 1987ರಲ್ಲೇ ಚೀನಾ ವಿರುದ್ಧ ಫೈಟ್‌

ಸೇನಾ ಜೀವನದುದ್ದಕ್ಕೂ ಭಾರತ- ಚೀನಾ ನಡುವಣ ಹಲವು ಸಂಘರ್ಷಗಳ ಸಂದರ್ಭದಲ್ಲಿ ಬಿಪಿನ್‌ ರಾವತ್‌ ಮಹತ್ತರ ಪಾತ್ರಗಳನ್ನು ನಿರ್ವಹಿಸಿದ್ದಾರೆ. 1987ರಲ್ಲಿ ಅರುಣಾಚಲಪ್ರದೇಶ ಬಳಿಯ ಸಮ್‌ಡೊರೊಂಗ್‌ ಚು ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಯಿತು. ಚೀನಾ ತನ್ನ ಯೋಧರನ್ನು ಕಳುಹಿಸಿತು ಎಂದು ಭಾರತವೂ ಯೋಧರನ್ನು ನಿಯೋಜನೆ ಮಾಡಿತು. ಅದರಲ್ಲಿ ರಾವತ್‌ ಮುನ್ನಡೆಸುತ್ತಿದ್ದ ಪಡೆಯೂ ಇತ್ತು. ಹಲವು ದಿನಗಳ ತ್ವೇಷಮಯ ಪರಿಸ್ಥಿತಿ ಬಳಿಕ ಎರಡೂ ದೇಶಗಳ ನಡುವಣ ಬಿಕ್ಕಟ್ಟು ಶಮನವಾಗಿತ್ತು.

2. ಡೋಕ್ಲಾಂ ಸಂಘರ್ಷದಲ್ಲಿ ತಿರುಗೇಟು

ಭಾರತ- ಭೂತಾನ್‌- ಚೀನಾ ಗಡಿಗಳ ತ್ರಿವಳಿ ಸಂಗಮವಾಗಿರುವ ಡೋಕ್ಲಾಂನಲ್ಲಿ 2017ರಲ್ಲಿ ಚೀನಾ ತಗಾದೆ ತೆಗೆದಾಗ ಅದನ್ನು ಸೂಕ್ತ ರೀತಿಯಲ್ಲಿ ಸೇನೆ ನಿರ್ವಹಿಸಿತ್ತು. ಆಗ ಸೇನಾ ಮುಖ್ಯಸ್ಥರಾಗಿದ್ದವರು ಜನರಲ್‌ ಬಿಪಿನ್‌ ರಾವತ್‌. 2017ರ ಜೂ.16ರಂದು ಚೀನಾ ಪಡೆಗಳು ಡೋಕ್ಲಾಂನಲ್ಲಿ ರಸ್ತೆ ನಿರ್ಮಾಣ ಆರಂಭಿಸಿದವು. ಕಾಮಗಾರಿ ನಡೆಯುತ್ತಿದ್ದ ಸ್ಥಳ ತನ್ನದೆಂದು ಚೀನಾ ಹೇಳಿದರೆ, ಇಲ್ಲ ಅದು ತನಗೆ ಸೇರಿದ ಜಾಗ ಎಂದು ಭಾರತದ ಮಿತ್ರದೇಶ ಭೂತಾನ್‌ ಪ್ರತಿಪಾದಿಸಿತ್ತು. ಭಾರತ ಸುಮ್ಮನಿದ್ದರೆ ಪುಟ್ಟದೇಶ ಭೂತಾನ್‌ ಮೇಲೆ ಚೀನಾ ದಬ್ಬಾಳಿಕೆ ಮಾಡುವ ಅಪಾಯವಿತ್ತು. ನಂತರ ಭಾರತದ ಗಡಿಗೂ ದಾಂಗುಡಿ ಇಡುವ ಸಾಧ್ಯತೆ ಇತ್ತು. ಇದರ ಅಪಾಯ ಅರಿತ ಬಿಪಿನ್‌ ರಾವತ್‌ ನೇತೃತ್ವದ ಸೇನೆ, ‘ಆಪರೇಷನ್‌ ಜುನಿಪರ್‌’ ಕೈಗೆತ್ತಿಕೊಂಡಿತು. 270 ಯೋಧರನ್ನು ಶಸ್ತ್ರಾಸ್ತ್ರ ಹಾಗೂ ಎರಡು ಬುಲ್ಡೋಜರ್‌ಗಳ ಸಮೇತ ಚೀನಾ ಕಾಮಗಾರಿ ನಡೆಸುತ್ತಿದ್ದ ಸ್ಥಳಕ್ಕೆ ರವಾನಿಸಿತು. ಎರಡೂ ದೇಶಗಳ ನಡುವೆ ತ್ವೇಷಮಯ ಪರಿಸ್ಥಿತಿ ಉದ್ಭವಿಸಿತು. ಇದು ಯುದ್ಧಕ್ಕೆ ಎಡೆ ಮಾಡಿಕೊಡಬಹುದು ಎನ್ನುವ ಆತಂಕದ ನಡುವೆಯೇ ಉಭಯ ದೇಶಗಳ ನಡುವೆ ನಿರಂತರ ಮಾತುಕತೆ ನಡೆದು, ಎರಡು ತಿಂಗಳ ಬಳಿಕ ಎರಡೂ ದೇಶಗಳು ಆ ಸ್ಥಳದಿಂದ ಹಿಂದಕ್ಕೆ ಸರಿದಿದ್ದವು. ಭಾರತದ ಆಕ್ರಮಣಕಾರಿ ಧೋರಣೆ ಕಂಡು ಚೀನಾ ದಂಗಾಗಿತ್ತು.

3. ಲಡಾಖ್‌ನಲ್ಲಿ ಚೀನಾಕ್ಕೆ ಸಡ್ಡು

ದೇಶದಲ್ಲಿ ಕೊರೋನಾ ಹಾವಳಿ ಇದ್ದಾಗ ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾ ತಗಾದೆ ತೆಗೆಯಿತು. ಎರಡೂ ದೇಶಗಳ ಯೋಧರು ಕಟ್ಟಿಗೆಗಳಿಂದ ಬಡಿದಾಡಿಕೊಂಡರು. ಹಲವು ದಶಕಗಳ ಬಳಿಕ ಗಡಿಯಲ್ಲಿ ನೆತ್ತರು ಹರಿಯಿತು. ಉಭಯ ದೇಶಗಳು ಗಡಿಯಲ್ಲಿ ಸೇನಾ ಜಮಾವಣೆ ಮಾಡಿದವು. ಇನ್ನೇನು ಯುದ್ಧವೇ ಆರಂಭವಾಗಿಬಿಡುತ್ತೆ ಎಂಬ ಸನ್ನಿವೇಶ ಸೃಷ್ಟಿಯಾಗಿತ್ತು. ಅಂತಹ ಸಂದರ್ಭದಲ್ಲಿ ಎದೆಗುಂದದೆ, ದೈತ್ಯ ಚೀನಾವನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸುವಲ್ಲಿ ಸಫಲವಾಯಿತು. ಆಗ ಸೇನೆಯ ಮಹಾದಂಡನಾಯಕರಾಗಿದ್ದವರು ಇದೇ ಬಿಪಿನ್‌ ರಾವತ್‌. ಗಡಿಯಲ್ಲಿ ಚೀನಾ ವಿರುದ್ಧ ಸೂಕ್ತ ತಂತ್ರಗಾರಿಕೆ ಮೆರೆಯಲು ಮೂರೂ ಪಡೆಗಳಿಗೆ ಸೂಚನೆ ನೀಡುತ್ತಾ, ಹೇಳಿಕೆಗಳ ಮೂಲಕ ಚೀನಾ ವಿರುದ್ಧ ಗುಡುಗುತ್ತಾ ಪರಿಸ್ಥಿತಿಯನ್ನು ಯಶಸ್ವಿಯಾಗಿ ಅವರು ನಿರ್ವಹಿಸಿದ್ದರು.

ಕಾಂಗೋದಲ್ಲೂ ಮಹತ್ತರ ಪಾತ್ರ

ಶಾಂತಿಪಾಲನಾ ಪಡೆಯ ಭಾಗವಾಗಿ 2008ರಲ್ಲಿ ಬಿಪಿನ್‌ ರಾವತ್‌ ಆಫ್ರಿಕಾದ ಕಾಂಗೋದಲ್ಲೂ ಕೆಲಸ ಮಾಡಿದ್ದರು. ಅಲ್ಲಿ ಸೇನಾ ತಂತ್ರಗಾರಿಕೆಯಲ್ಲೂ ಹಲವು ಬದಲಾವಣೆಗಳನ್ನು ತರುವ ಮೂಲಕ ಗಮನ ಸೆಳೆದಿದ್ದರು.

Follow Us:
Download App:
  • android
  • ios