ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಮುಂದೂಡಲು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಸಿಬ್ಬಂದಿ ಕೊರತೆ ಮತ್ತು ಮಳೆಗಾಲದ ಕಾರಣ ನೀಡಿ, ಚುನಾವಣೆ ನಡೆಸಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ ಕೋರಿದೆ.

 ನವದೆಹಲಿ (ಮೇ.12): ದೀರ್ಘಕಾಲದಿಂದ ಬಾಕಿ ಉಳಿದಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಮುಂದೂಡಲು ರಾಜ್ಯ ಸರ್ಕಾರ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಮೇಲ್ಮನವಿ ಅರ್ಜಿ ಸಲ್ಲಿಸಿರುವ ಸರ್ಕಾರದ ಪರ ವಕೀಲರು, ಜಿಬಿಎ ಚುನಾವಣೆ ನಡೆಸಲು ಮೂರು ತಿಂಗಳ ಕಾಲಾವಕಾಶ ಕೋರಿದ್ದಾರೆ.

Add Asianetnews Kannada as a Preferred SourcegooglePreferred

ಈ ಹಿಂದಿನ ಬಿಬಿಎಂಪಿಗೆ 2015ರ ಆಗಸ್ಟ್ 22 ರಂದು ಚುನಾವಣೆ ನಡೆದಿದ್ದು, ಇದರ ಅವಧಿ 2020ರ ಸೆಪ್ಟೆಂಬರ್ ಗೆ ಕೊನೆಗೊಂಡಿತ್ತು. ಬಳಿಕ, ಚುನಾವಣೆಯನ್ನು ಮುಂದೂಡುತ್ತಲೇ ಬರಲಾಗಿತ್ತು. 2026ರ ಜನವರಿ 12ರಂದು ಈ ಸಂಬಂಧದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಜೂನ್‌ 30ರೊಳಗೆ ಜಿಬಿಎಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೂಡ ಚುನಾವಣಾ ದಿನಾಂಕ ನಿಗದಿಗೆ ಮುಂದಾಗಿತ್ತು.

ಈ ಮಧ್ಯೆ, ಚುನಾವಣೆ ನಡೆಸಲು ಸಿಬ್ಬಂದಿ ಕೊರತೆ ಇರುವ ಕಾರಣ ಚುನಾವಣೆ ನಡೆಸಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸದ್ಯ ರಾಜ್ಯದಲ್ಲಿ ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಮತ್ತು ಜನಗಣತಿ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೂನ್ ಅಂತ್ಯದವರೆಗೂ ಇವರು ಲಭ್ಯವಿರುವುದು ಕಷ್ಟಕರವಾದ್ದರಿಂದ ಚುನಾವಣೆ ನಡೆಸುವುದು ತಾಂತ್ರಿಕವಾಗಿ ಸವಾಲಾಗಿದೆ. ನಂತರ, ಮಳೆಗಾಲ ಆರಂಭವಾಗುತ್ತಿರುವುದರಿಂದ ಮುಂದಿನ ಮೂರು ತಿಂಗಳು ಚುನಾವಣೆ ನಡೆಸುವುದು ಕಷ್ಟ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಮತ್ತು ಬೆಂಗಳೂರು ಕೇಂದ್ರ ನಗರಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ, ಪಾಲಿಕೆಗೆ ಚುನಾವಣೆ ನಡೆಸಲು ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದೆ.