ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಲೋಗೋದಲ್ಲಿ ಪಾರಂಪರಿಕ ಕೆಂಪೆಗೌಡ ಗೋಪುರದ ಜೊತೆಗೆ ಖಡ್ಗ ಹಿಡಿದ ಕೆಂಪೆಗೌಡರ ಚಿತ್ರಣವಿದ್ದು, ಮುಂಬರುವ ಬಜೆಟ್ ಪುಸ್ತಕದ ಮೇಲೆ ಇದು ಮುದ್ರಣಗೊಳ್ಳಲಿದೆ.

ಬೆಂಗಳೂರು (ಮಾ. 27): ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತಾತ್ಮಕ ಬದಲಾವಣೆಯ ಪರ್ವ ಆರಂಭವಾಗಿದೆ. ಮುಂಬರುವ ಬಜೆಟ್ ಮಂಡನೆ ಬೆನ್ನಲ್ಲೇ, ಬಹುನಿರೀಕ್ಷಿತ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ತನ್ನ ಹೊಸ ಲಾಂಛನವನ್ನು (Logo) ಅನಾವರಣಗೊಳಿಸಲು ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಜೆಟ್ ಪುಸ್ತಕದಲ್ಲೂ ಹೊಸ ಲೋಗೋ ಝಲಕ್!

ಈ ಬಾರಿ ಮಂಡನೆಯಾಗಲಿರುವ ಗ್ರೇಟರ್ ಬೆಂಗಳೂರು ಬಜೆಟ್ ಪುಸ್ತಕಗಳ ಮೇಲೆ ಈ ಹೊಸ 'ಜಿಬಿಎ' ಲೋಗೋ ಇರಲಿದೆ. ಬಜೆಟ್ ಘೋಷಣೆಯ ಜೊತೆಜೊತೆಗೇ ಈ ಲಾಂಛನ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಇತಿಹಾಸವನ್ನು ನೆನಪಿಸುತ್ತಲೇ ಆಧುನಿಕ ಆಡಳಿತಕ್ಕೆ ಸಾಕ್ಷಿಯಾಗಲಿರುವ ಈ ಲೋಗೋ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಹಾಗಾದರೆ ಹೊಸ ಲೋಗೋದ ವಿಶೇಷತೆಗಳೇನು?

ಬೆಂಗಳೂರಿನ ಇತಿಹಾಸ ಮತ್ತು ಗಾಂಭೀರ್ಯವನ್ನು ಎತ್ತಿ ಹಿಡಿಯುವಂತೆ ಈ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ. ಹಿಂದಿನ ಬಿಬಿಎಂಪಿ ಲೋಗೋದಲ್ಲಿದ್ದ ಪಾರಂಪರಿಕ ಕೆಂಪೆಗೌಡರ ಗೋಪುರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ವೀರತೆಯ ಗತ್ತಿನಲ್ಲಿ ನಿಂತಿರುವ ಖಡ್ಗದಾರಿ ಕೆಂಪೆಗೌಡರ ಚಿತ್ರಣ ಈ ಲೋಗೋದ ಪ್ರಮುಖ ಆಕರ್ಷಣೆಯಾಗಿರಲಿದೆ. ಇನ್ನು ಲೋಗೊದ ಬಣ್ಣವೂ ವಿಶಿಷ್ಟವಾಗಿದೆ. ಹಳದಿ ಬಣ್ಣದ ವೃತ್ತದೊಳಗೆ ಗೋಪುರ ಮತ್ತು ಕೆಂಪೆಗೌಡರ ಚಿತ್ರವಿದ್ದು, ಒಟ್ಟಾರೆ ಲಾಂಛನವು ನೀಲಿ, ಹಳದಿ ಮತ್ತು ಕೆಂಪು ಬಣ್ಣಗಳ ಸಂಯೋಜನೆಯಿಂದ ಕೂಡಿ ನೋಡಲು ಆಕರ್ಷಕವಾಗಿದೆ.

ಈ ಲೋಗೊವನ್ನು ಏಕಪಕ್ಷಿಯವಾಗಿ ವಿನ್ಯಾಸಗೊಳಿಸದೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕರಿಂದ ಸಲಹೆಗಳನ್ನು ಪಡೆದ ಬಳಿಕವೇ ಈ ವಿನ್ಯಾಸವನ್ನು ಅಂತಿಮಗೊಳಿಸಿದ್ದಾರೆ.