ಗುಜರಾತ್‌ನಲ್ಲಿ ಗರ್ಬಾ ನೃತ್ಯ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಗುಂಪೊಂದು ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಕನಿಷ್ಠ 6 ಮಂದಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. 

 ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಗರ್ಬಾ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವೊಂದರಲ್ಲಿ ಉದ್ರಿಕ್ತ ಗುಂಪುಂದು ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಸೋಮವಾರ ರಾತ್ರಿ ನಡೆದ ಘಟನೆಯ ನಂತರ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಆರಿಫ್ ಮತ್ತು ಜಹೀರ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳ ನೇತೃತ್ವದ ಜನರ ಗುಂಪು ನವರಾತ್ರಿ ಗರ್ಬಾ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶಿಸಿ ತೊಂದರೆ ಉಂಟುಮಾಡಲು ಪ್ರಾರಂಭಿಸಿತು. ಅವರು ಕಲ್ಲುಗಳನ್ನು ಎಸೆದರು" ಎಂದು ಖೇಡಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಗಾಧಿಯಾ ಹೇಳಿದ್ದಾರೆ.

ಈ ಘಟನೆಯಲ್ಲಿ "6 ಜನರು ಗಾಯಗೊಂಡಿದ್ದಾರೆ. ನಾವು ಗ್ರಾಮದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದೇವೆ ಮತ್ತು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಅಲ್ಲದೆ, ಗರ್ಬಾ ನೃತ್ಯ ನಡೆಯುತ್ತಿದ್ದ ಸ್ಥಳದಲ್ಲಿ ನಿಯೋಜಿಸಲಾದ ಹೋಮ್ ಗಾರ್ಡ್ ಸಹ ಗಾಯಗೊಂಡವರಲ್ಲಿ ಒಬ್ಬರು ಎಂದೂ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಡ್ಯಾನ್ಸ್ ಮಾಡುತ್ತಲೇ ಕುಸಿದ ಬಿದ್ದ ಮಗನ ಸಾವು, ಶಾಕ್‌ನಿಂದ ತಂದೆ ಸ್ಥಳದಲ್ಲೇ ನಿಧನ

ನವರಾತ್ರಿ ಉತ್ಸವದ ಸಂದರ್ಭದಲ್ಲಿ ಗರ್ಬಾ ನೃತ್ಯವನ್ನು ಆಯೋಜಿಸಿದ್ದ ಗ್ರಾಮದ ಚೌಕದಲ್ಲಿ ಮತ್ತು ಸ್ಥಳದ ಹಿಂದಿನ ಪ್ರದೇಶದಿಂದ ಬರುವ ರಸ್ತೆಯ ಮೇಲೆ ಕಲ್ಲು ತೂರಾಟ ವರದಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಇನ್ನು, ಕಲ್ಲು ತೂರಾಟದಲ್ಲಿ ತೊಡಗಿರುವವರನ್ನು ಗುರುತಿಸಲಾಗಿದ್ದು, ಸ್ಥಳೀಯರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನವರಾತ್ರಿ ಹಬ್ಬದ ಆಚರಣೆಯಲ್ಲಿ ಗರ್ಬಾ ನೃತ್ಯಕ್ಕೆ ವಿಶೇಷ ಮಹತ್ವವಿದೆ. ಗರ್ಬಾ ಗುಜರಾತ್ ಸಂಸ್ಕೃತಿಯಾದರೂ ದೇಶದ ಹಲವು ರಾಜ್ಯಗಳಲ್ಲಿ ಗರ್ಬಾ ನೃತ್ಯದ ಮೂಲಕ ನವರಾತ್ರಿ ಆಚರಣೆ ಮಾಡಲಾಗುತ್ತದೆ.

ಮಹಾರಾಷ್ಟ್ರದಲ್ಲಿ ಇಬ್ಬರು ಬಲಿ

ಈ ಮಧ್ಯೆ, ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ವಿರಾರ್‌ನಲ್ಲಿ ರಾತ್ರಿ ಆಯೋಜಿಸಿದ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡ 35 ಹರೆಯದ ಮನೀಶ್ ನರಾಪ್ಜಿ ಸೋನಗ್ರ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದಾನೆ. ತಕ್ಷಣೆ ಕಾರ್ಯಪ್ರವೃತ್ತರಾದ ಮನೀಶ್ ತಂದೆ, ಮಗನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಕೆಲ ಹೊತ್ತಿನ ಬಳಿ ನಿಮ್ಮ ಮಗ ಬದುಕುಳಿದಿಲ್ಲ ಎಂದು ತಂದೆಗೆ ಹೇಳಿದ್ದಾರೆ. ಈ ಸುದ್ದಿ ಕೇಳಿದ ತಂದೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮನೀಶ್ ಕುಟುಂಬಕ್ಕೆ ಸಂಭ್ರಮ ತರಬೇಕಿದ್ದ ನವರಾತ್ರಿ ಈ ಬಾರಿ ಬರಸಿಡಿಲಿನಂತೆ ಎರಗಿದೆ.

ಇದನ್ನೂ ಓದಿ: ನವರಾತ್ರಿಯಲ್ಲಿ ಗರ್ಬಾ ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು: ವಿಡಿಯೋ ವೈರಲ್

ಗುಜರಾತ್‌ನಲ್ಲಿ 21 ವರ್ಷದ ಯುವಕ ಸಾವು
ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದ 21 ವರ್ಷದ ಯುವಕ ಇದೇ ರೀತಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಯುವಕನ ಸ್ನೇಹಿತರು ವಿಡಿಯೋ ಮಾಡುತ್ತಿದ್ದಂತೆ ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.