ಸಾಕಾರವಾಯ್ತು ಮಂದಿರ್ ವಹೀ ಬನಾಯೇಂಗೇ ಉದ್ಘೋಷ : ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿದ್ದು ಹೀಗೆ
'ಮಂದಿರ್ ವಹೀ ಬನಾಯೇಂಗೇ' ಎಂಬ ಉದ್ಯೋಷ ಸಾಕಾರಗೊಂಡಿದೆ. ರಾಮ ಹುಟ್ಟಿದ ಸ್ಥಳದಲ್ಲೇ, ಆತನಿಗೆ ಮನೆ ಲಭಿಸಿದೆ. 500 ವರ್ಷಗಳ ಭಾರತೀಯರ ಕನಸು ಈಡೇರಿದ್ದು, ಮಂದಿರ ಉದ್ಘಾಟನೆಯ ಜತೆಗೆ 5 ವರ್ಷದ ಹಸನ್ಮುಖಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ.
ಅಯೋಧ್ಯೆ: 'ಮಂದಿರ್ ವಹೀ ಬನಾಯೇಂಗೇ' ಎಂಬ ಉದ್ಯೋಷ ಸಾಕಾರಗೊಂಡಿದೆ. ರಾಮ ಹುಟ್ಟಿದ ಸ್ಥಳದಲ್ಲೇ, ಆತನಿಗೆ ಮನೆ ಲಭಿಸಿದೆ. 500 ವರ್ಷಗಳ ಭಾರತೀಯರ ಕನಸು ಈಡೇರಿದ್ದು, ಮಂದಿರ ಉದ್ಘಾಟನೆಯ ಜತೆಗೆ 5 ವರ್ಷದ ಹಸನ್ಮುಖಿ ಬಾಲರಾಮನ ಪ್ರತಿಷ್ಠಾಪನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಸೋಮವಾರ ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ನಿರ್ವಿಘ್ನವಾಗಿ ನೆರವೇರಿದೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ.
ಸುಮಾರು 1 ತಾಸು ಅವಧಿಯ ಪ್ರಾಣಪ್ರತಿಷ್ಠಾಪನೆಯ ವೇಳೆ ರಾಮ ಪ್ರತಿಷ್ಠಾಪಿತನಾಗುತ್ತಿದ್ದಂತೆಯೇ ವೇದ ಘೋಷಗಳು ಮುಗಿಲು ಮುಟ್ಟಿದವು. ಈ ವೇಳೆ ಶಂಖನಾದ ಮೊಳಗಿತು ಮತ್ತು ಹೆಲಿಕಾಪ್ಟರ್ ಮೂಲಕ ದೇವಸ್ಥಾನದ ಮೇಲೆ ಪುಷ್ಪವೃಷ್ಟಿಮಾಡಲಾಯಿತು ಮತ್ತು 70 ವರ್ಷದಿಂದ ಟೆಂಟ್‌ನಲ್ಲಿದ್ದ ಚಿಕ್ಕ ಬಾಲರಾಮನ ಉತ್ಸವ ಮೂರ್ತಿಯನ್ನೂ ಹೊಸ ರಾಮನ ವಿಗ್ರಹದ ಪದತಲದಲ್ಲೇ ಪ್ರತಿಷ್ಠಾಪಿಸಲಾಗಿದೆ ಎಂಬುದು ವಿಶೇಷ.
ಅಯೋಧ್ಯೆ ಪ್ರಾಣ ಪ್ರತಿಷ್ಠೆ: ಇದುವರೆಗೆ ಅತೀ ಹೆಚ್ಚು ವೀಕ್ಷಿಸಿದ ಯೂಟ್ಯೂಬ್ ಲೈವ್ ಸ್ಟ್ರೀಮ್
ಮೋದಿ ನಡೆಸಿದ ಧಾರ್ಮಿಕ ವಿಧಿ ವಿಧಾನಗಳ ವೇಳೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳು, ಸಾಧು-ಸಂತರು ಗರ್ಭಗುಡಿಯೊಳಗೆ ಉಪಸ್ಥಿತರಿದ್ದರು. ಮಂದಿರದ ಹೊರಗೆ ಸುಮಾರು 8000 ಗಣ್ಯರು ಕುರ್ಚಿಗಳಲ್ಲಿ ಆಸೀನರಾಗಿ ಪರದೆಯಲ್ಲಿ ಪ್ರತಿಷ್ಠಾಪನೆ ವೀಕ್ಷಿಸಿದರು. ದೇಶಾದ್ಯಂತ ಜನರು ಟೀವಿಗಳಲ್ಲಿ ಇದರ ನೇರಪ್ರಸಾರ ವೀಕ್ಷಿಸಿ ಧನ್ಯತಾ ಭಾವನೆ ವ್ಯಕ್ತಪಡಿಸಿದರು. ಪ್ರತಿಷ್ಠಾಪಿತ ವಿಗ್ರಹವನ್ನು ಕೆತ್ತಿದ್ದು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಎಂಬುದು ಗಮನಾರ್ಹ.
ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಡೆದಿದ್ದು ಹೀಗೆ
ಚಿನ್ನದ ಬಣ್ಣದ ಕುರ್ತಾ ಹಾಗೂ ಕೆನೆ ಬಣ್ಣದ ಧೋತಿ ಧರಿಸಿದ್ದ ಮೋದಿ ಕೈಯಲ್ಲಿ, ಛತ್ರ ಹಾಗೂ ಕೆಂಪುವಸ್ತ್ರ ಹಿಡಿದು ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಮಮಂದಿರ ಪ್ರವೇಶಿಸಿದರು. ನಂತರ ಕಾಶಿಯ ಗಣೇಶ್ವರ ಶಾಸ್ತ್ರಿಗಳು, ಕರ್ನಾಟಕದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು, ವಿವಿಧ ಸಾಧು-ಸಂತರು, ಪುರೋಹಿತರ ಸಮ್ಮುಖದಲ್ಲಿ 12.20ಕ್ಕೆ ಪ್ರತಿ ಷ್ಠಾಪನಾ ವಿಧಿಗಳು ಆರಂಭವಾದವು. ಮೋದಿ ಪ್ರತಿಷ್ಠಾಪನೆಯ ಯಜಮಾನತ್ವ ವಹಿಸಿದ್ದರಿಂದ ಮಣೆಯ ಮೇಲೆ ಅವರನ್ನು ಕೂರಿಸಿ ಪ್ರತಿಷ್ಠಾಪನೆಯ ಸಂಕಲ್ಪ ನೆರವೇರಿಸಲಾಯಿತು.
ಶ್ರೀರಾಮನ ನೆಲೆ ವಾಸ್ತು ಶಿಲ್ಪದ ಅದ್ಭುತ ಸೆಲೆ: 32 ಮೆಟ್ಟಿಲು ಏರಿದರೆ ರಾಮದರ್ಶನ
ನಂತರ 12.30ಕ್ಕೆ ಸರಿಯಾಗಿ 84 ಸೆಕೆಂಡಿನ ಪ್ರಾಣಪ್ರತಿಷ್ಠಾಪನೆಯ ಮುಹೂರ್ತ ಆರಂಭವಾಯಿತು. ರಾಮನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ತೆರೆದು ಮಂತ್ರಘೋಷಗಳ ನಡುವೆ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಆಗ ಆಗಸದಲ್ಲಿ ಹೆಲಿಕಾಪ್ಟರ್ ಮೂಲಕ ರಾಮಮಂದಿರದ ಮೇಲೆ ಪುಷ್ಪವೃಷ್ಟಿಗರೆಯಲಾಯಿತು. ಭಾರತದ ಬಹುಪಾಲು ಜನ 500 ವರ್ಷದಿಂದ ಕಂಡಿದ್ದ ಕನಸು ನನಸಾಯಿತು. ರಾಮ ಚಿನ್ನದ ಕಿರೀಟ, ಚಿನ್ನದ ಸರ, , ಚಿನ್ನದ ಬಿಲ್ಲು-ಬಾಣ ಹಿಡಿದು ಸರ್ವಾಲಂಕೃತನಾಗಿದ್ದ. ಇದೇ ವೇಳೆ, 70 ವರ್ಷಗಳಿಂದ ಸಣ್ಣ ಟೆಂಟ್‌ನಲ್ಲಿದ್ದ ಬಾಲ ರಾಮನ ಪುಟ್ಟ ಮೂರ್ತಿಯನ್ನು ಈ ರಾಮನ ದೊಡ್ಡ ವಿಗ್ರಹದ ಮುಂಭಾಗದಲ್ಲಿ ಇಡಲಾಗಿದೆ. ಅದಕ್ಕೂ ಮೋದಿ ಪೂಜೆ ನೆರವೇರಿಸಿದರು.
ಇಂದು ಭಕ್ತರಿಗೆ ತೆರೆಯಲಿದೆ ಅಯೋಧ್ಯೆ ರಾಮಮಂದಿರ: ಶತಮಾನಗಳ ಆಸೆ ಈಡೇರಿಸಿಕೊಳ್ಳುವ ತವಕದಲ್ಲಿ ಭಕ್ತರು
ಬಳಿಕ ತಮ್ಮ ಸ್ಥಾನದಿಂದ ಎದ್ದ ಮೋದಿ, ಭಾಗವತ್, ಯೋಗಿ, ಆನಂದಿಬೆನ್ ಅವರು ರಾಮಲಲ್ಲಾನ ಚರಣಗಳ ಬಳಿ ಆಗಮಿಸಿ ನಿಂತರು. ಮೋದಿ ಅವರ ಹಸ್ತದಿಂದ ರಾಮನ ಚರಣಗಳಿಗೆ ಪುಷ್ಪಗಳನ್ನು ಸಮರ್ಪಿಸಲಾಯಿತು ಹಾಗೂ ವಿವಿಧ ಪ್ರೋಕ್ಷಣಾ ವಿಧಿಗಳನ್ನು ಅವರು ನೆರವೇರಿಸಿದರು. 12.50ರ ಸುಮಾರಿಗೆ ಮೋದಿ ಮುಖ್ಯ ಮಂಗಳಾರತಿಯನ್ನು ರಾಮಲಲ್ಲಾಗೆ ನೆರವೇರಿಸಿದರು. ಬಳಿಕ ಎಲ್ಲರೂ ಮಂಗಳಾರತಿ ತೆಗೆದುಕೊಂಡರು. ಅದು ಅತ್ಯಂತ ಭಕ್ತಿಮಯ ಭಾವುಕ ಸಂದರ್ಭವಾಗಿತ್ತು. ಅಲ್ಲಿಗೆ ಪ್ರತಿಷ್ಠಾಪನಾ ವಿಧಿಗಳು ಸಂಪನ್ನಗೊಂಡವು. ಮೋದಿ ಅವರು ರಾಮನ ಮೂರ್ತಿ ಎದುರು ಮಲಗಿ ದಂಡವತ್ ಪ್ರಣಾಮ ಮಾಡಿದರು.