ಅಶ್ನೀರ್ ಗ್ರೋವರ್ ಕೇವಲ ಒಂದು ದಿನದಲ್ಲಿ 1 ಕೋಟಿ ಸಂಬಳದ EY ಉದ್ಯೋಗವನ್ನು ತೊರೆದಿದ್ದೇಕೆ?
ಅರ್ನೆಸ್ಟ್ & ಯಂಗ್ ಸಂಸ್ಥೆಯಲ್ಲಿ ಉದ್ಯೋಗಿಯೊಬ್ಬರ ಸಾವಿನ ನಂತರ ಕೆಲಸದ ಒತ್ತಡದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಭಾರತ್ ಪೇ ಮಾಜಿ ಸಿಇಒ ಆಶ್ನೀರ್ ಗ್ರೋವರ್ ಅವರು ಒಂದು ಕೋಟಿ ರೂಪಾಯಿ ಸಂಬಳದ ಆಫರ್ ತಿರಸ್ಕರಿಸಿದ್ದಾಗಿ ಹೇಳಿರುವ ಹಳೆಯ ವಿಡಿಯೋ ವೈರಲ್ ಆಗಿದೆ.
ಅರ್ನೆಸ್ಟ್&ಯಂಗ್ (Ernst & Young) ಸಂಸ್ಥೆಯಲ್ಲಿ ಕೆಲಸದ ಒತ್ತಡದಿಂದಾಗಿ ಯುವ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದ ನಂತರ ಅಲ್ಲಿನ ಕೆಲಸದ ಸ್ಥಿತಿ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಈ ನಡುವೆ ಭಾರತ್ ಪೇ(BharatPe) ಮಾಜಿ ಸಿಇಒ ಉದ್ಯಮಿ ಆಶ್ನೀರ್ ಗ್ರೋವರ್ ಅವರು ಹಳೆ ವೀಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಅವರು ಒಂದು ಕೋಟಿಯ ಆಫರ್ ನೀಡಿದ ನಂತರವೂ ತಾನು ಏಕೆ ಇವೈ ಸಂಸ್ಥೆಗೆ ಸೇರಲು ಹಿಂದೇಟು ಹಾಕಿದೆ ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ.
ಕಚೇರಿಯಲ್ಲಿ ಕೆಲಸದ ವಾತಾವರಣವೇ ಸತ್ತು ಹೋಗಿದ್ದು, ಅಲ್ಲಿನ ಉದ್ಯೋಗಿಗಳು ಅಂತ್ಯಸಂಸ್ಕಾರಕ್ಕೆ ಕಾಯುತ್ತಿರುವ ಹೆಣಗಳಂತೆ ಕಾಣುತ್ತಿದ್ದರು. ಹೀಗಾಗಿ ಅವರು ಕೆಲಸಕ್ಕೆ ಸೇರಿದ ಮೊದಲ ದಿನವೇ ಕೆಲಸ ತೊರೆಯಲು ಅನಾರೋಗ್ಯದ ನಾಟಕವಾಡಿದ್ದರು ಎಂದು ಈ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅಶ್ನೀರ್ ಗ್ರೋವರ್ ಅವರ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಆರ್ನೆಸ್ಟ್ & ಯಂಗ್ ಸಂಸ್ಥೆಯ 26 ವರ್ಷದ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರಯಿಲ್ ಅವರು ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ತನ್ನ ಮಗಳು ಸಂಸ್ಥೆಯ ಕೆಲಸದ ಒತ್ತಡಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅನ್ನಾ ಸೆಬಾಸ್ಟಿಯನ್ ಅವರ ತಾಯಿ ದೂರಿದ್ದರು, ಇದಾದ ನಂತರ ಆ ಸಂಸ್ಥೆಯು ಸೇರಿದಂತೆ ಭಾರತೀಯ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸದ ವಾತಾವರಣ ಹಾಗೂ ಕೆಲಸದ ಸಂಸ್ಕೃತಿ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ.
ಟಾರ್ಗೆಟ್ ತಲುಪೋ ಭರದಲ್ಲಿ ಒತ್ತಡದಿಂದ ಕೆಲಸ ಮಾಡಿ ಯುವತಿಯ ಸಾವು! ಕಂಪೆನಿ ಮಾಡಿದ್ದೇನು ನೋಡಿ..
ಇವೈನಲ್ಲಿ ಕೆಲಸದ ವಾತಾವರಣವೇ ಸತ್ತು ಹೋಗಿದೆ. ನಾನು ನನ್ನ ಆರಂಭದ ದಿನಗಳಲ್ಲಿ ಅಲ್ಲಿ ಕೆಲಸಕ್ಕೆ ಸೇರಿದ್ದೆ ಅವರು ನನಗೆ ಒಂದು ಕೋಟಿ ಹಣ ನೀಡಲು ಬಯಸಿದ್ದರು. ಆದರೆ ಕಚೇರಿಯಲ್ಲಿ ಜೀವಕಳೆಯೇ ಇರಲಿಲ್ಲ, ಅಲ್ಲಿ ಎಲ್ಲರೂ ಹೆಣಗಳಂತೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಎದೆನೋವಿನ ನಾಟಕವಾಡಿ ನಾನು ಆ ಸಂಸ್ಥೆಯನ್ನು ಬಿಟ್ಟೆ. ಉತ್ತಮವಾದ ಆಫೀಸ್ ಯಾವುದೆಂದರೆ ಅಲ್ಲಿ ಉದ್ಯೋಗಿಗಳು ಜಗಳ ಮಾಡುತ್ತಾರೆ ಅದು. ಹಾಗೂ ಅದನ್ನು ಯಾರಾದರು ವಿಷಕಾರಿ ಕಚೇರಿ ಎಂದರೆ ಅಲ್ಲ ಅದು ಉತ್ತಮ ವಾತಾವರಣವಿರುವ ಕಚೇರಿ ಎಂದು ಅಶ್ನೀರ್ ಗ್ರೋವರ್ ಹೇಳಿದ್ದರು. ಅಶ್ನೀರ್ ಗ್ರೋವರ್ ಈ ಹೇಳಿಕೆ ಚರ್ಚೆಗೆ ಕಾರಣವಾಗಿತ್ತು.
ಇದರ ಜೊತೆಗೆ ಆರ್‌ಪಿಜಿ ಎಂಟರ್‌ಪ್ರೈಸ್‌ನ ಹರ್ಷಾ ಗೋಯೆಂಕಾ ಅವರು ಕೂಡ ಅಶ್ನೀರ್ ಗ್ರೋವರ್ ಅವರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ವಿಷಕಾರಿ ಕಾರ್ಪೊರೇಟ್ ಸಂಸ್ಕೃತಿಗೆ ಕರೆ ನೀಡುವವರು ಇದ್ದಾರೆ ಎಂದು ನಂಬಲು ಸಾಧ್ಯವಿಲ್ಲ, ಉದ್ಯೋಗಿಗಳಿಗೆ ಮಾರಕವಾಗಿರುವ ಈ ಕಾರ್ಪೊರೇಟ್ ಸಂಸ್ಕೃತಿಯನ್ನು ಆದಷ್ಟು ಬೇಗ ಬದಲಾಯಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು ಜೊತೆಗೆ ಸಂಸ್ಥೆಗಳಲ್ಲಿ ಮಾನಸಿಕ ಆರೋಗ್ಯಕ್ಕಾಗಿ ಕಾರ್ಯಕ್ರಮಗಳನ್ನು ಮಾಡುವುದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿ ಎಂದು ಹೇಳಿದ್ದಾರೆ. ಇದರ ಜೊತೆಗೆ ಇವೈನ ಮಾಜಿ ಉದ್ಯೋಗಿಗಳು ಕೂಡ ಒಬ್ಬೊಬ್ಬರಾಗಿ ಆ ಕಂಪನಿಯಲ್ಲಿ ತಾವು ಅನುಭವಿಸಿದ ಕೆಲಸದ ಒತ್ತಡವನ್ನು ಹೇಳಿಕೊಂಡಿದ್ದಾರೆ.