ಮಮತಾಗೆ ಮತ್ತೊಂದು ಶಾಕ್ ಕೊಟ್ಟ ಅಮಿತ್ ಶಾ!
ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ಸದ್ಯ ಎರಡು ದಿನಗಳ ಬಂಗಾಳ ಭೇಟಿ ಕೈಗೊಂಡಿರುವ ಅಮಿತ್ ಶಾ| ಮಹತ್ವದ ಘೋಷಣೆ ಬೆನ್ನಲ್ಲೇ ಮಮತಾಗೆ ಮತ್ತೊಂದು ಶಾಕ್ ಕೊಟ್ಟ ಕೇಂದ್ರ ಗೃಹ ಸಚಿವ
ಕೋಲ್ಕತಾ(ಡಿ.21): ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ಸದ್ಯ ಎರಡು ದಿನಗಳ ಬಂಗಾಳ ಭೇಟಿ ಕೈಗೊಂಡಿರುವ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ, 2021ರಿಂದ ಪ್ರತಿ ತಿಂಗಳಲ್ಲಿ ಕನಿಷ್ಠ 7 ದಿನ ಬಂಗಾಳದಲ್ಲಿ ವಾಸ್ತವ್ಯ ಹೂಡಲಿದ್ದಾರಂತೆ.
ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಶಾ ಭೇಟಿ ಪ್ರಮಾಣ ಹೆಚ್ಚಲಿದೆ. ಏಪ್ರಿಲ್-ಮೇ ನಲ್ಲಿ ನಡೆಯುವ ಚುನಾವಣೆಗೂ ಮುನ್ನಾ ತಿಂಗಳಲ್ಲಿ ಅವರು ತಿಂಗಳಲ್ಲಿ ಕನಿಷ್ಠ 7 ದಿನ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ಸಿಎಎ ಜಾರಿ: ಅಮಿತ್ ಶಾ
ಓಲೈಕೆ ರಾಜಕಾರಣದಲ್ಲಿ ನಂಬಿಕೆ ಹೊಂದಿರುವ ತೃಣಮೂಲ ಕಾಂಗ್ರೆಸ್ಸಿನಿಂದ ಬಾಂಗ್ಲಾ ವಲಸಿಗರ ವಲಸೆಯನ್ನು ತಡೆಯಲು ಎಂದಿಗೂ ಆಗುವುದಿಲ್ಲ. ಆ ಕೆಲಸ ಏನಿದ್ದರೂ ಬಿಜೆಪಿಯಿಂದ ಮಾತ್ರ ಸಾಧ್ಯ. ಕೊರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಬಳಿಕ ನಾಗರಿಕ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿಯ ನಂ.2 ನಾಯಕ ಅಮಿತ್ ಶಾ ಹೇಳಿದ್ದಾರೆ.
ಏಪ್ರಿಲ್- ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ 2ನೇ ದಿನವೂ ರೋಡ್ ಶೋ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಂಗಾಳದ ಜನ ಬದಲಾವಣೆ ಬಯಸಿದ್ದಾರೆ. ರಾಜಕೀಯ ಹಿಂಸಾಚಾರ, ಭ್ರಷ್ಟಾಚಾರ, ಸುಲಿಗೆ ಹಾಗೂ ಬಾಂಗ್ಲಾದೇಶೀಯರ ವಲಸೆಯಿಂದ ಮುಕ್ತಿ ಬಯಸಿದ್ದಾರೆ ಎಂದು ಹೇಳಿದರು.