ಉಚಿತ ಕೊಡುಗೆಗಳ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ: ಈ ರಾಜ್ಯಗಳಿಗೆ ನೋಟಿಸ್ ನೀಡಿದ ನ್ಯಾಯಾಲಯ
ಚುನಾವಣೆಗೂ ಮುನ್ನ ಸಾಕಷ್ಟು ಉಚಿತ ಕೊಡುಗೆ ಘೋಷಿಸಲಾಗುತ್ತಿರುವ ಬಗ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಸಲ್ಲಿಕೆ ಮಾಡಿದೆ.

ನವದೆಹಲಿ (ಅಕ್ಟೋಬರ್ 6, 2023): ತೆರಿಗೆದಾರರ ವೆಚ್ಚದಲ್ಲಿ ರಾಜಕೀಯ ಪಕ್ಷಗಳು ನಗದು ಮತ್ತು ಇತರ ಉಚಿತ ವಸ್ತುಗಳನ್ನು ವಿತರಿಸುವುದನ್ನು ನಿರ್ಬಂಧಿಸಲು ಸಮಗ್ರ ಮಾರ್ಗಸೂಚಿಗಳನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ಮೇರೆಗೆ ನ್ಯಾಯಾಲಯ ಶುಕ್ರವಾರ ಕೆಲ ರಾಜ್ಯಗಳಿಗೆ ನೋಟಿಸ್ ನೀಡಿದ್ದು, ಈ ಸಂಬಂಧ 4 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆಯೂ ಕೋರ್ಟ್ ಕೋರಿದೆ.
ಮಧ್ಯ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಚುನಾವಣೆಗೂ ಮುನ್ನ ಸಾಕಷ್ಟು ಉಚಿತ ಕೊಡುಗೆ ಘೋಷಿಸಲಾಗುತ್ತಿರುವ ಬಗ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ರಾಜ್ಯಗಳಿಗೆ ನೋಟಿಸ್ ಸಲ್ಲಿಕೆಯಾಗಿದೆ. ಇನ್ನು, ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಕೇಂದ್ರ ಸರ್ಕಾರ, ಚುನಾವಣಾ ಆಯೋಗ (ಇಸಿ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೂ ನೋಟಿಸ್ ಜಾರಿ ಮಾಡಿದೆ. ಮತದಾರರನ್ನು ಸೆಳೆಯಲು ಮಧ್ಯಪ್ರದೇಶ (ಬಿಜೆಪಿ ಆಳ್ವಿಕೆ) ಮತ್ತು ರಾಜಸ್ಥಾನ (ಕಾಂಗ್ರೆಸ್ ಆಳ್ವಿಕೆ) ಸರ್ಕಾರಗಳು ತೆರಿಗೆದಾರರ ಹಣ ದುರ್ಬಳಕೆ ಮಾಡಿಕೊಂಡಿವೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಇದನ್ನು ಓದಿ: ಉಚಿತ ಕೊಡುಗೆಗಳಿಂದ ದಿವಾಳಿಯತ್ತ ಖಜಾನೆ: 3.27 ಲಕ್ಷ ಕೋಟಿ ರು. ಸಾಲದ ಸುಳಿಯಲ್ಲಿ ಪಂಜಾಬ್
ಈ ಮಧ್ಯೆ, ಸುಪ್ರಿಂಕೋರ್ಟ್ ಪೀಠವು ನೋಟಿಸ್ ಜಾರಿ ಮಾಡಿದ್ದಲ್ಲದೆ, ಉಚಿತ ಕೊಡುಗೆ ವಿಚಾರದಲ್ಲಿ ಈಗಾಗಲೇ ಬಾಕಿ ಇರುವ ಇನ್ನೊಂದು ಪ್ರಕರಣವನ್ನು ಇದಕ್ಕೆ ಸೇರಿಸಿದೆ. ಚುನಾವಣೆಯ ಹೊಸ್ತಿಲಲ್ಲಿ ಕ್ರೋಢೀಕೃತ ನಿಧಿ ಅಥವಾ ಸಾರ್ವಜನಿಕ ನಿಧಿಯನ್ನು ದುರ್ಬಳಕೆ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಭಟ್ಟುಲಾಲ್ ಜೈನ್ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳಿಂದ ಮತದಾರರಿಗೆ ಆಮಿಷ ಒಡ್ಡುವ ಇಂತಹ ಚುನಾವಣಾ ಪೂರ್ವ ಭರವಸೆಗಳು ಮತ್ತು ಉಚಿತ ಕೊಡುಗೆಗಳು "ತೆರಿಗೆದಾರರ ಹಣವನ್ನು ಕಸಿದುಕೊಳ್ಳುತ್ತಿವೆ" ಮತ್ತು ಲಂಚ ಹಾಗೂ ಅನಗತ್ಯ ಪ್ರಭಾವಕ್ಕೆ ಸಮಾನವಾಗಿದೆ ಎಂದೂ ಆರೋಪಿಸಿದೆ.
ಚುನಾವಣೆಗೆ ಆರು ತಿಂಗಳ ಮೊದಲು ಟ್ಯಾಬ್‌ಗಳಂತಹ ಉಚಿತ ಕೊಡುಗೆಗಳನ್ನು ವಿತರಿಸಲಾಗುತ್ತಿದೆ ಮತ್ತು ರಾಜ್ಯ ಸರ್ಕಾರಗಳು ಇದನ್ನು ಸಾರ್ವಜನಿಕ ಹಿತಾಸಕ್ತಿ ಎಂದು ಕರೆಯುತ್ತಿವೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಹಾಗೂ, ರಾಜ್ಯಗಳು ಭಾರಿ ಸಾಲದಲ್ಲಿದ್ದು, ಉಚಿತ ವಿತರಣೆ ಮಾಡಬಾರದು ಎಂದೂ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಇದನ್ನೂ ಓದಿ: ಉಚಿತ ಯೋಜನೆಯಿಂದ ಸಾಲದ ಸುಳಿಯಲ್ಲಿ ಪಂಜಾಬ್, ದಾಖಲೆ ಬಹಿರಂಗಪಡಿಸಿದ ಸಿಧು!
"ಚುನಾವಣೆಯ ಮೊದಲು ಸರ್ಕಾರವು ನಗದು ಹಂಚುವುದಕ್ಕಿಂತ ಹೆಚ್ಚು ಕ್ರೂರವಾದುದೇನೂ ಇಲ್ಲ. ಇದು ಪ್ರತಿ ಬಾರಿಯೂ ನಡೆಯುತ್ತಿದೆ ಮತ್ತು ಅಂತಿಮವಾಗಿ ತೆರಿಗೆದಾರರ ಮೇಲೆ ಹೊರೆ ಬೀಳುತ್ತದೆ" ಎಂದು ಅರ್ಜಿದಾರರ ಪರ ವಕೀಲರು ಹೇಳಿದರು. ಈ ವಿಷಯವನ್ನು ಗಮನಿಸಿದ ಸಿಜೆಐ ಚಂದ್ರಚೂಡ್, "ಎಲ್ಲಾ ರೀತಿಯ ಭರವಸೆಗಳನ್ನು ಚುನಾವಣೆಗೆ ಮುನ್ನ ನೀಡಲಾಗುತ್ತದೆ ಮತ್ತು ಇದನ್ನು ನಿಯಂತ್ರಿಸಲು ನಮಗೆ ಸಾಧ್ಯವಿಲ್ಲ" ಎಂದು ಹೇಳಿದರು.
ಈ ವರ್ಷ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಫ್ರೀ ಆಗಿ ಹೇಗೆ ಪ್ರಯಾಣಿಸಬಹುದೆಂದು ತೋರಿಸಿದ ಯೂಟ್ಯೂಬರ್: ವಿಡಿಯೋ ವೈರಲ್