ರಾಜ್ಯಸಭಾ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮರು ಆಯ್ಕೆಗೆ ಜೆಡಿಎಸ್ ಬಳಿ ಸಂಖ್ಯಾಬಲವಿಲ್ಲ. ಹೀಗಾಗಿ, ಮಿತ್ರಪಕ್ಷವಾದ ಬಿಜೆಪಿಯ ಬೆಂಬಲವನ್ನು ಜೆಡಿಎಸ್ ನಿರೀಕ್ಷಿಸುತ್ತಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವೇ ಅಂತಿಮವಾಗಲಿದೆ.

ಬೆಂಗಳೂರು: ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮರು ಆಯ್ಕೆ ಕುರಿತು ರಾಜಕೀಯ ವಲಯದಲ್ಲಿ ಬಿಸಿ ಚರ್ಚೆ ಶುರುವಾಗಿದೆ.

Add Asianetnews Kannada as a Preferred SourcegooglePreferred

ಬರುವ ಜೂ.25ಕ್ಕೆ ಎಚ್‌.ಡಿ.ದೇವೇಗೌಡ ಅವರ ರಾಜ್ಯಸಭಾ ಸದಸ್ಯ ಅವಧಿ ಅಂತ್ಯಗೊಳ್ಳಲಿದೆ. ಮರು ಆಯ್ಕೆಯಾಗಲು ಜೆಡಿಎಸ್‌ ಬಳಿ ಸಂಖ್ಯಾಬಲ ಇಲ್ಲ. ಆದರೂ ಮಿತ್ರ ಪಕ್ಷ ಬಿಜೆಪಿಯ ಬೆಂಬಲದೊಂದಿಗೆ ದೇವೇಗೌಡ ಅವರು ಮತ್ತೊಮ್ಮೆ ರಾಜ್ಯಸಭೆ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ.

ದೇವೇಗೌಡ ಮರು ಆಯ್ಕೆಯಿಂದ ಮುಂಬರುವ ಜಿಬಿಎ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿ ಮತ್ತಷ್ಟು ಗಟ್ಟಿಯಾಗಲಿದೆ ಎಂಬ ಲೆಕ್ಕಾಚಾರ ಜೆಡಿಎಸ್‌ ವಲಯದಲ್ಲಿ ಆರಂಭವಾಗಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವಿನ್‌ ಅವರನ್ನು ಭೇಟಿಯಾಗಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ದೇವೇಗೌಡರ ಮರು ಆಯ್ಕೆಯಿಂದ ರಾಜ್ಯದಲ್ಲಿ ಭವಿಷ್ಯದಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದಾರೆ. ಕಾಂಗ್ರೆಸ್‌ ವಿರುದ್ಧದ ಹೋರಾಟಕ್ಕೆ ಎಚ್‌.ಡಿ.ದೇವೇಗೌಡ ಎಷ್ಟು ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿ ತೀರ್ಮಾನದತ್ತ ಎಲ್ಲರ ಚಿತ್ತ

ಪ್ರಧಾನಿ ಮೋದಿ ಅವರು ದೇವೇಗೌಡ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ದೇವೇಗೌಡ ಅವರ ಸುದೀರ್ಘ ರಾಜಕೀಯ ಅನುಭವ, ತಂತ್ರಗಾರಿಕೆಗಳ ಬಗ್ಗೆ ಚೆನ್ನಾಗಿ ಬಲ್ಲ ಪ್ರಧಾನಿ ಮೋದಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರ ಮೇಲೆ ದೇವೇಗೌಡ ಅವರ ಮರು ಆಯ್ಕೆ ನಿಂತಿದೆ. ಈಗಾಗಲೇ ಕೇಂದ್ರದ ಬಿಜೆಪಿ ವರಿಷ್ಠರು ರಾಜ್ಯಸಭಾ ಚುನಾವಣೆ ಸಂಬಂಧ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಪಡೆದಿದ್ದಾರೆ. ದೇವೇಗೌಡ ಅವರ ಮರು ಆಯ್ಕೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ತೀರ್ಮಾನವೇ ಅಂತಿಮ ಎನ್ನಲಾಗಿದೆ.

ಈ ನಡುವೆ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಕೆಲ ದಿನಗಳ ಹಿಂದೆ ಹುಟ್ಟುಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಕೆಲ ಕಾಲ ಚರ್ಚಿಸಿರುವುದು ಕುತೂಲಹಕ್ಕೆ ಕಾರಣವಾಗಿದೆ. ರಾಜ್ಯಸಭಾ ಚುನಾವಣೆ ಹಿನ್ನೆಲ್ಲೆಯಲ್ಲಿ ಕೇಂದ್ರದ ಬಿಜೆಪಿ ವರಿಷ್ಠರ ಸೂಚನೆ ಮೇರೆಗೆ ಪ್ರಮೋದ್‌ ಸಾವಂತ್‌ ಅವರು ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.