1986ನೇ ಬ್ಯಾಚ್‌ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ, ಕರ್ನಾಟಕದ ಮಾಜಿ ಡಿಜಿ-ಐಜಿ ಪ್ರಸ್ತುತ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕ ಪ್ರವೀಣ್‌ ಸೂದ್‌ ಶನಿವಾರ ಹಠಾತ್‌ ಅಸ್ವಸ್ಥಗೊಂಡು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೈದರಾಬಾದ್: 1986ನೇ ಬ್ಯಾಚ್‌ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ, ಕರ್ನಾಟಕದ ಮಾಜಿ ಡಿಜಿ-ಐಜಿ ಪ್ರಸ್ತುತ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕ ಪ್ರವೀಣ್‌ ಸೂದ್‌ ಶನಿವಾರ ಹಠಾತ್‌ ಅಸ್ವಸ್ಥಗೊಂಡು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೂದ್‌, ಶ್ರೀಶೈಲದಿಂದ ಹೈದರಾಬಾದ್‌ಗೆ ವಾಪಸಾಗುತ್ತಿದ್ದಾಗ ಅವರ ಆರೋಗ್ಯದಲ್ಲಿ ದಿಢೀರನೇ ಏರುಪೇರು ಉಂಟಾಯಿತು. ತಕ್ಷಣವೇ ಅವರನ್ನು ಜ್ಯುಬಿಲಿ ಹಿಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ‘ಸೂದ್‌ ಅವರನ್ನು ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಒಂದು ದಿನದವರೆಗೆ ನಿಗಾದಲ್ಲಿಡಲಾಗಿದೆ’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಸೇವೆ:

ಮೂಲತಃ ಹಿಮಾಚಲ ಪ್ರದೇಶದವರಾದ ಸೂದ್‌ 1986ನೇ ಬ್ಯಾಚ್‌ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ. 1989ರಲ್ಲಿ ಮೈಸೂರಿನಲ್ಲಿ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಪೊಲೀಸ್ (ಎಎಸ್‌ಪಿ) ಆಗಿ ವೃತ್ತಿ ಆರಂಭಿಸಿದ ಅವರು, ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಎಸ್‌ಪಿಯಾಗಿ, ಬೆಂಗಳೂರು ನಗರಕ್ಕೆ ಉಪ ಪೊಲೀಸ್ ಆಯುಕ್ತರಾಗಿ, ಮೈಸೂರು ಪೊಲೀಸ್ ಕಮಿಷನರ್ ಆಗಿ, ಬೆಂಗಳೂರು ಟ್ರಾಫಿಕ್ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

2013-14ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ರಾಜ್ಯ ಗೃಹ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಎಡಿಜಿಪಿಯಾಗಿ ಮತ್ತು ಕರ್ನಾಟಕದ ಡಿಜಿ & ಐಜಿಪಿಯಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಸಿಬಿಐನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬಿಹಾರ ರೀತಿ ದೇಶವಿಡೀ ಮತಪಟ್ಟಿ ಪರಿಷ್ಕರಣೆಗೆ ಬುಧವಾರ ಆಯೋಗ ಸಭೆ

ನವದೆಹಲಿ: ಪ್ರಸ್ತುತ ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ರೀತಿ ದೇಶವ್ಯಾಪಿ ಪರಿಷ್ಕರಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ಕೈಗೊಂಡಿದೆ. ಇದರ ಭಾಗವಾಗಿ ಬುಧವಾರ ರಾಜ್ಯ ಚುನಾವಣಾ ಆಯುಕ್ತರ ಸಭೆಯನ್ನು ಕರೆಯಲಾಗಿದೆ.ಆಯೋಗದ ಅಧ್ಯಕ್ಷತೆಯನ್ನು ಜ್ಞಾನೇಶ್‌ ಕುಮಾರ್‌ ವಹಿಸಿಕೊಂಡಾಗಿನಿಂದ ಇದು 3ನೇ ಸಭೆಯಾಗಲಿದೆ. ಆದರೆ ಈ ಸಭೆಯಲ್ಲಿ ವಿಶೇಷ ಮತಪಟ್ಟಿ ಪರಿಷ್ಕರಣೆ ಕುರಿತು ಚರ್ಚೆಗಳು ನಡೆಯುವ ಕಾರಣ ಪ್ರಾಮುಖ್ಯತೆ ಹೊಂದಿರಲಿದೆ. 2026ರ ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗೂ ಮುನ್ನ ಈ ವರ್ಷಾಂತ್ಯಕ್ಕೆ ದೇಶವಿಡೀ ಮತಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಹಾರದಲ್ಲಿನ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಪಕ್ಷಗಳು ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿವೆ.

ಅಮೆರಿಕ ರಕ್ಷಣಾ ಇಲಾಖೆ ಹೆಸರಿನ್ನು ‘ಯುದ್ಧ ಇಲಾಖೆ’: ಟ್ರಂಪ್‌ರಿಂದ ಬದಲಾವಣೆ

ವಾಷಿಂಗ್ಟನ್‌: ಯುದ್ಧಗಳನ್ನೆಲ್ಲಾ ನಿಲ್ಲಿಸಿ ಜಗತ್ತಿನಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವುದೇ ತಮ್ಮ ಗುರಿ ಎಂದು ಹೇಳಿಕೊಂಡು, ಆ ಕಾರ್ಯಕ್ಕಾಗಿ ನೊಬೆಲ್‌ ಶಾಂತಿ ಪ್ರಶಸ್ತಿ ಹಂಬಲದಲ್ಲಿಯೂ ಇದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಅದಕ್ಕೆ ವ್ಯತಿರಿಕ್ತವಾದ ಹೆಜ್ಜೆ ಇಟ್ಟಿದ್ದಾರೆ. ದೇಶದ ರಕ್ಷಣಾ ಇಲಾಖೆಯ ಹೆಸರನ್ನು ‘ಯುದ್ಧ ಇಲಾಖೆ’ ಎಂದು ಬದಲಿಸುವ ಆದೇಶಕ್ಕೆ ಅವರು ಸಹಿ ಮಾಡಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಟ್ರಂಪ್‌, ‘ಹಳೆ ಹೆಸರು ಅಸಮಾನತೆಯನ್ನು ತೋರುತ್ತದೆ. ಆದರೆ ಹೊಸ ಹೆಸರು ಬಲ ಹಾಗೂ ವಿಜಯದ ಸಂದೇಶವನ್ನು ನೀಡುವಂತಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಲಾಖೆಯ ವೆಬ್‌ಸೈಟ್‌ ಹೆಸರನ್ನು ಕೂಡ ‘ಡಿಪಾರ್ಟ್‌ಮೆಂಟ್‌ ಆಫ್‌ ವಾರ್‌’ ಎಂದು ಬದಲಿಸಲಾಗಿದೆ. ರಕ್ಷಣಾ ಸಚಿವರಾಗಿರುವ ಪೀಟ್‌ ಹೆಗ್ಸೆತ್‌ ಅವರನ್ನೂ ಟ್ರಂಪ್‌ ಯುದ್ಧದ ಸಚಿವ ಎಂದು ಸಂಬೋಧಿಸಲು ಆರಂಭಿಸಿದ್ದಾರೆ.

ಮುಂಬೈಗೆ ಪಾಕ್‌ ಉಗ್ರರ ಪ್ರವೇಶ ಬೆದರಿಕೆ ಹಿಂದೆ ಜ್ಯೋತಿಷಿ ಸೇಡಿನ ವಿಷ್ಯ

ಮುಂಬೈ: 400 ಕೆಜಿ ಸ್ಫೋಟಕ ಹೊಂದಿರುವ 14 ಪಾಕ್ ಉಗ್ರರು ಮುಂಬೈ ಪ್ರವೇಶಿಸಿದ್ದಾರೆ ಎಂದು ಪೊಲೀಸರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಬಿಹಾರ ಮೂಲದ ಸುರೇಶ್‌ ಕುಮಾರ್‌ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸುರೇಶ್‌ ಜ್ಯೋತಿಷಿ ಎಂದು ಹೇಳಿಕೊಂಡು ಮುಂಬೈನಲ್ಲಿ ವಾಸವಿದ್ದ. ಕೆಲ ವರ್ಷಗಳ ಸ್ನೇಹಿತ ನೀಡಿದ ದೂರಿನಲ್ಲಿ ಈತ ಮೂರು ತಿಂಗಳ ಹಿಂದೆ ಜೈಲು ಸೇರಿದ್ದ. ಹೀಗಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ನೇಹಿತನ ಹೆಸರಲ್ಲಿ ಪೊಲೀಸರಿಗೆ ವಾಟ್ಸಾಪ್‌ನಲ್ಲಿ ಬೆದರಿಕೆ ಸಂದೇಶ ರವಾನಿಸಿದ್ದ. ಆದರೆ ಡಿಜಿಟಲ್‌ ಹೆಜ್ಜೆಯ ಜಾಡು ಹಿಡಿದ ಪೊಲೀಸರು ಸುರೇಶ್‌ನನ್ನು ನೋಯ್ಡಾದಲ್ಲಿ ಬಂಧಿಸಿದ್ದಾರೆ.

ಬೀಡಿ - ಬಿಹಾರ ವಿವಾದ: ಕೇರಳ ಕೈ ಮೀಡಿಯಾ ಮುಖ್ಯಸ್ಥ ತಲೆದಂಡ

ನವದೆಹಲಿ: ಬಿ ಎಂದರೆ ಬಿಹಾರ ಮತ್ತು ಬೀಡಿ ಎನ್ನುವ ಟ್ವೀಟ್‌ ಭಾರೀ ವಿವಾದಕ್ಕೆ ಕಾರಣವಾಗುತ್ತಲೇ, ಕೇರಳ ಕಾಂಗ್ರೆಸ್‌ ಘಟಕ ತನ್ನ ಸಾಮಾಜಿಕ ಜಾಲತಾಣವನ್ನು ಪುನರ್‌ರಚನೆ ಮಾಡಿದೆ. ಜೊತೆಗೆ ಜಾಲತಾಣ ಮುಖ್ಯಸ್ಥ ಬಲರಾಮ್‌ ಅವರ ತಲೆದಂಡ ಪಡೆಯಲಾಗಿದೆ. ಕೇಂದ್ರ ಸರ್ಕಾರ ಬೀಡಿ ಮೇಲಿನ ಜಿಎಸ್‌ಟಿ ದರವನ್ನು ಶೇ.28ರಿಂದ ಶೇ.18ಕ್ಕೆ ಇಳಿಸಿದ್ದನ್ನು ಟೀಕಿಸುವ ಭರದಲ್ಲಿ, ‘ಬಿಹಾರ ಮತ್ತು ಬೀಡಿ ಇವೆರಡೂ ಬಿ ಇಂದ ಶುರುವಾಗುತ್ತವೆ. ಇನ್ನು ಮುಂದೆ ಇವೆರಡೂ ಪಾಪಗಳಲ್ಲ’ ಎಂದು ಕೇರಳ ಕಾಂಗ್ರೆಸ್‌ ಘಟಕ ಟ್ವೀಟ್ ಮಾಡಿತ್ತು. ಇದು ಬಿಹಾರದ ಜನತೆಗೆ ಮಾಡಿದ ಅವಮಾನ ಎಂದು ಎನ್‌ಡಿಎ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.