ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾದ ಅವರನ್ನು ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ನಿಧನರಾಗಿದ್ದು, ಅವರಿಗೆ 79 ವರ್ಷ ವಯಸ್ಸಾಗಿತ್ತು. ಕೆಲದಿನಗಳಿಂದ ಅನಾರೋಗ್ಯಕ್ಕೀಡಾದ ಅವರನ್ನು ದೆಹಲಿಯ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಅವರ ಆರ್‌.ಕೆ ಪುರಂನ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ನಾಳೆ ಲೋಧಿ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

1970ರಲ್ಲಿ ಶಾಸಕನಾಗಿ ರಾಜಕೀಯ ಪ್ರವೇಶ ಮಾಡಿದ ಸತ್ಯಪಾಲ್ ಮಾಲಿಕ್ ಅವರು ರಾಜಕೀಯದಲ್ಲಿ 50 ವರ್ಷಗಳನ್ನೇ ಕಳೆದಿದ್ದಾರೆ. ಪಶ್ಚಿಮ ಉತ್ತರಪ್ರದೇಶದ ಬಾಘಪತ್ ನಿವಾಸಿಯಾಗಿದ್ದ ಅವರು ಹಲವು ಪಕ್ಷಗಳನ್ನು ಬದಲಾಯಿಸಿದ್ದಾರೆ. ಮೊದಲ ಬಾರಿಗೆ ಅವರು ಚೌಧರಿ ಚರಣ್‌ ಸಿಂಗ್ ಅವರ ಭಾರತೀಯ ಕ್ರಾಂತಿ ದಳದಿಂದ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು.

1980ರಲ್ಲಿ, ಚರಣ್ ಸಿಂಗ್ ನೇತೃತ್ವದ ಲೋಕದಳದಿಂದ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ 1984 ರಲ್ಲಿ, ಅವರು ಕಾಂಗ್ರೆಸ್ ಸೇರಿದರು, ಕಾಂಗ್ರೆಸ್‌ನಿಂದ ಅವರು 1986 ರಲ್ಲಿ ರಾಜ್ಯಸಭೆಗೆ ಪ್ರವೇಶಿಸಿದರು. ಜಮ್ಮುಕಾಶ್ಮೀರದ 370 ನೇ ಕಲಂ ರದ್ದಾಗುವುದರೊಂದಿಗೆ ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ಅವರ ಒಂದು ವರ್ಷದ ಅವಧಿ ಕೊನೆಗೊಂಡಿತ್ತು. ಇದಕ್ಕೂ ಮೊದಲು ಅವರು ಗೋವಾ ಮತ್ತು ಮೇಘಾಲಯದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದರು.

ಸಕ್ರಿಯ ರಾಜಕಾರಣಿಯಾಗಿ ಅವರು, ವಿವಾದಗಳಿಗೆ ಹೊರತಾಗಿರಲಿಲ್ಲ, ಅವರ ಕೆಲ ಹೇಳಿಕೆಗಳು ಅವರ ಸ್ವಪಕ್ಷಕ್ಕೆ ತೀವ್ರ ಇರಿಸುಮುರಿಸು ತಂದಿದ್ದರು. ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು 2019 ರ ಪುಲ್ವಾಮಾ ದಾಳಿಯ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದರು .