ಅನಾರೋಗ್ಯಕ್ಕೆ ತುತ್ತಾದ ಪತ್ನಿಯ ಭೇಟಿಗೆ ದೆಹಲಿ ಮಾಜಿ ಡಿಸಿಎಂ ಸಿಸೋಡಿಯಾಗೆ ಬರಿ 6 ಗಂಟೆ ಅವಕಾಶ!
ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಿಸೋಡಿಯಾಗೆ ಬೆಳಗ್ಗೆ 10 ರಿಂದ ಸಂಜೆ 4 ರ ನಡುವೆ ಆರು ಗಂಟೆಗಳ ಕಾಲ ಪತ್ನಿಯನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು.
ನವದೆಹಲಿ (ನ.11): ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶನಿವಾರ ತಿಹಾರ್ ಜೈಲಿನಿಂದ ಇಲ್ಲಿನ ತಮ್ಮ ನಿವಾಸಕ್ಕೆ ಆಗಮಿಸಿ ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಪತ್ನಿಯನ್ನು ಭೇಟಿಯಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿರುವ ಅವರ ಪತ್ನಿಯನ್ನು ಭೇಟಿಯಾಗಲು ನಗರದ ನ್ಯಾಯಾಲಯ ಅವರಿಗೆ ಆರು ಗಂಟೆಗಳ ಕಾಲ ಅನುಮತಿ ನೀಡಿತ್ತು. ಆಪಾದಿತ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಿಸೋಡಿಯಾಗೆ ಬೆಳಗ್ಗೆ 10 ರಿಂದ ಸಂಜೆ 4 ರ ನಡುವೆ ಆರು ಗಂಟೆಗಳ ಕಾಲ ಪತ್ನಿಯನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು. ಸಿಸೋಡಿಯಾ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಬೆಳಿಗ್ಗೆ 10 ಗಂಟೆಗೆ ಜೈಲು ವ್ಯಾನ್‌ನಲ್ಲಿ ಮಥುರಾ ರಸ್ತೆಯಲ್ಲಿರುವ ತಮ್ಮ ಮನೆಗೆ ತಲುಪಿದರು. ಜೂನ್‌ನಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್‌ನಿಂದ ಬಳಲುತ್ತಿರುವ ಪತ್ನಿ ಸೀಮಾ ಅವರನ್ನು ಭೇಟಿಯಾಗಲು ದೆಹಲಿ ಹೈಕೋರ್ಟ್ ಅನುಮತಿ ನೀಡಿತ್ತು.
ಆದರೆ, ಆಕೆಯ ಸ್ಥಿತಿ ಹಠಾತ್ ಹದಗೆಟ್ಟ ನಂತರ ಆಸ್ಪತ್ರೆಗೆ ದಾಖಲಾಗಿದ್ದರಿಂದ ಆಕೆಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಸಿಸೋಡಿಯಾ ಅವರ ಪತ್ನಿಯನ್ನು ಭೇಟಿಯಾಗಲು ಅನುಮತಿ ನೀಡಿದ ನ್ಯಾಯಾಲಯ, ಮಾಧ್ಯಮಗಳೊಂದಿಗೆ ಮಾತನಾಡದಂತೆ ಅಥವಾ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗದಂತೆ ಆದೇಶ ನೀಡಿದೆ.
ಎಎಪಿಯ ಹಿರಿಯ ನಾಯಕ ಸಿಸೋಡಿಯಾ ಅವರು ಫೆಬ್ರವರಿಯಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗುವ ಮೊದಲು ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಖಾತೆಗಳನ್ನು ಹೊಂದಿದ್ದಲ್ಲದೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.
ಮನೀಷ್ ಸಿಸೋಡಿಯಾಗೆ ಸಿಗದ ಬೇಲ್, 338 ಕೋಟಿ ವರ್ಗಾವಣೆಯ ಬಗ್ಗೆ ಅನುಮಾನವಿದೆ ಎಂದ ಸುಪ್ರೀಂ !
ಬಂಧನಕ್ಕೊಳಗಾದ ನಂತರ ಅವರು ಉಪ ಮುಖ್ಯಮಂತ್ರಿ ಮತ್ತು ವಿವಿಧ ಇಲಾಖೆಗಳ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಆದರೆ ಅವರ ಕುಟುಂಬವು ಮಥುರಾ ರಸ್ತೆಯಲ್ಲಿರುವ ಅವರ ಅಂದಿನ ಅಧಿಕೃತ ನಿವಾಸದಲ್ಲಿ ಶಿಕ್ಷಣ ಸಚಿವ ಅತಿಶಿ ಅವರೊಂದಿಗೆ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ಈ ಪ್ರಕರಣದಲ್ಲಿ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ದೆಹಲಿ ಮದ್ಯ ಹಗರಣ: ಸಿಎಂ ಕೇಜ್ರಿಗೆ ಸಿಬಿಐ ಸತತ 9 ತಾಸು ಗ್ರಿಲ್!