ದೆಹಲಿಯ ಆಮ್‌ ಆದ್ಮಿ ಸರ್ಕಾರ ವಿರುದ್ಧ ಕೇಳಿಬಂದಿರುವ ಮದ್ಯದ ಲೈಸೆನ್ಸ್‌ ಹಂಚಿಕೆ ಅವ್ಯವಹಾರದ ಅರೋಪದ ತನಿಖೆ ತೀವ್ರಗೊಳಿಸಿರುವ ಸಿಬಿಐ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭಾನುವಾರ ಸತತ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ.

ನವದೆಹಲಿ (ಏ.17): ದೆಹಲಿಯ ಆಮ್‌ ಆದ್ಮಿ ಸರ್ಕಾರ ವಿರುದ್ಧ ಕೇಳಿಬಂದಿರುವ ಮದ್ಯದ ಲೈಸೆನ್ಸ್‌ ಹಂಚಿಕೆ ಅವ್ಯವಹಾರದ ಅರೋಪದ ತನಿಖೆ ತೀವ್ರಗೊಳಿಸಿರುವ ಸಿಬಿಐ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭಾನುವಾರ ಸತತ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದೆ. ಪ್ರಕರಣ ಸಂಬಂಧ ದೆಹಲಿಯ ಮಾಜಿ ಉಪಮುಖ್ಯಮಂತ್ರಿ, ಮಾಜಿ ಅಬಕಾರಿ ಸಚಿವ ಮನಿಶ್‌ ಸಿಸೋಡಿಯಾ, ಗುತ್ತಿಗೆದಾರರು ಜೈಲು ಪಾಲಾಗಿರುವ ನಡುವೆಯೇ ಈ ವಿಚಾರಣೆ ನಡೆಸಲಾಗಿದೆ.

ವಿಚಾರಣೆಗೆ ಹಾಜರಾಗಲು ನೀಡಿದ್ದ ಸೂಚನೆ ಅನ್ವಯ ಬೆಳಗ್ಗೆ 11ರ ವೇಳೆಗೆ ಸಿಬಿಐ ಕಚೇರಿಗೆ ಆಗಮಿಸಿದ ಕೇಜ್ರಿವಾಲ್‌ ಅವರನ್ನು ರಾತ್ರಿ 8.30ರವರೆಗೂ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್‌ ‘ನನಗೆ 56 ಪ್ರಶ್ನೆಗಳನ್ನು ಕೇಳಲಾಯಿತು. ಎಲ್ಲದ್ದಕ್ಕೂ ನಾನು ಉತ್ತರಿಸಿದ್ದೇನೆ. ಮೊದಲೇ ಹೇಳಿದಂತೆ ಇದರಲ್ಲಿ ಮುಚ್ಚಿಡುವುದೇನೂ ಇಲ್ಲ. ಆರೋಪಿತ ಮದ್ಯ ಹಗರಣವೇ ಒಂದು ಸುಳ್ಳು, ಕಪೋಲಕಲ್ಪಿತ ಪ್ರಕರಣ. ಕೆಟ್ಟರಾಜಕೀಯಕ್ಕಾಗಿ ಇದನ್ನು ಸೃಷ್ಟಿಸಲಾಗಿದೆ. ನಾವು ಸಾಯುತ್ತವೆಯೇ ಹೊರತೂ ಪ್ರಾಮಾಣಿಕತೆ ಬಿಡುವುದಿಲ್ಲ’ ಎಂದು ಹೇಳಿದರು.

ಸಿಬಿಐ ವಿಚಾರಣೆ ಬೆನ್ನಲ್ಲೇ ಅರವಿಂದ್ ಕೇಜ್ರಿವಾಲ್‌ಗೆ ಬಂಧನ ಭೀತಿ, ತುರ್ತು ಸಭೆ ನಡೆಸಿದ ಆಪ್!

ಏನೇನು ಪ್ರಶ್ನೆ?:

ದೆಹಲಿ ಸರ್ಕಾರದ ಮದ್ಯ ನೀತಿ ಅಂಗೀಕಾರಕ್ಕೂ ಮುನ್ನ ವಿವಿಧ ವಲಯಗಳಿಂದ ಸಂಗ್ರಹಿಸಿದ್ದ ತಜ್ಞರ ಅಭಿಪ್ರಾಯದ ಮಹತ್ವದ ಸಂಪುಟ ಕಡತ ನಾಪತ್ತೆಯಾಗಿರುವ ಬಗ್ಗೆ, ಕೆಲ ಉದ್ಯಮಿಗಳಿಗೆ ಲಾಭ ಮಾಡಿಕೊಡುವಂತೆ ಮತ್ತು ದಕ್ಷಿಣದ ಲಾಬಿಗೆ ಮಣಿದು ನೀತಿ ರೂಪಿಸಲಾಗಿತ್ತು ಎಂಬ ಕೆಲ ಆರೋಪಿಗಳು ನೀಡಿರುವ ಹೇಳಿಕೆ ಬಗ್ಗೆ, ಮದ್ಯ ನೀತಿ ರಚನೆಯಲ್ಲಿ ನಿಮ್ಮ ಪಾತ್ರವೇನು? ಕೆಲ ಉದ್ಯಮಿಗಳು ಮತ್ತು ದಕ್ಷಿಣದ ಲಾಬಿ ಬೀರಿರುವ ಪ್ರಭಾವದ ಬಗ್ಗೆ ನಿಮಗೆ ಏನು ಮಾಹಿತಿ ಇತ್ತು? ನೀತಿಗೆ ಅಂತಿಮ ಅನುಮೋದನೆ ನೀಡುವ ಮುನ್ನ ಆ ಪ್ರಕ್ರಿಯೆಯಲ್ಲಿ ನೀವು ಭಾಗಿಯಾಗಿದ್ದೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಸಿಬಿಐ ಅಧಿಕಾರಿಗಳು ಕೇಜ್ರಿವಾಲ್‌ಗೆ ಕೇಳಿದ್ದಾರೆ ಎನ್ನಲಾಗಿದೆ.

ಭಾರೀ ಪ್ರತಿಭಟನೆ:

ಇದಕ್ಕೂ ಮುನ್ನ ಕೇಜ್ರಿವಾಲ್‌ಗೆ ಸಮನ್ಸ್‌ ನೀಡಿರುವುದನ್ನು ಪ್ರಶ್ನಿಸಿ ಆಮ್‌ಆದ್ಮಿ ಪಕ್ಷದ ಕಾರ್ಯಕರ್ತರು ದೆಹಲಿಯ ಹಲವು ಕಡೆ ಭಾನುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದರು. ಮತ್ತೊಂದೆಡೆ ಸಿಬಿಐ ಕಚೇರಿಗೆ ತೆರಳುವುದಕ್ಕೆ ಮುನ್ನ ಟ್ವೀಟ್‌ ಮಾಡಿದ್ದ ಕೇಜ್ರಿವಾಲ್‌, ನನ್ನನ್ನು ಬಂಧಿಸುವಂತೆ ಈಗಾಗಲೇ ಸಿಬಿಐಗೆ ಬಿಜೆಪಿ ಸೂಚನೆ ನೀಡಿರುವ ಸಾಧ್ಯತೆ ಇದೆ ಎಂದು ಆರೋಪಿಸಿದರು.

ನನಗೆ 56 ಪ್ರಶ್ನೆಗಳನ್ನು ಕೇಳಿದರು. ಎಲ್ಲದ್ದಕ್ಕೂ ಉತ್ತರಿಸಿದೆ. ಮದ್ಯ ಹಗರಣವೇ ಒಂದು ಕಟ್ಟುಕತೆ. ಕೆಟ್ಟರಾಜಕೀಯಕ್ಕಾಗಿ ಇದನ್ನು ಸೃಷ್ಟಿಸಲಾಗಿದೆ. ನಾವು ಸಾಯುತ್ತವೆಯೇ ಹೊರತು ಪ್ರಾಮಾಣಿಕತೆ ಬಿಡುವುದಿಲ್ಲ. ನನ್ನನ್ನು ಬಂಧಿಸಲು ಸಿಬಿಐಗೆ ಬಿಜೆಪಿ ಸೂಚಿಸಿರುವ ಸಾಧ್ಯತೆಯಿದೆ.

- ಅರವಿಂದ ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿ