ಕೆಸರು ತುಂಬಿದ ಹೊಂಡಕ್ಕೆ ಬಿದ್ದ ಆನೆಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ
- ಕಾಡಾನೆಯನ್ನು ರಕ್ಷಿಸಿದ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ
- ಕೆಸರು ತುಂಬಿದ್ದ ಹೊಂಡಕ್ಕೆ ಬಿದ್ದ ಕಾಡಾನೆ
- ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ತಮಿಳುನಾಡು(ಮಾ.27): ಕಾಡಿನ ಮಧ್ಯೆ ಇದ್ದ ಕೆಸರು ತುಂಬಿದ ಹೊಂಡದೊಳಗೆ ಸಿಲುಕಿ ಒದ್ದಾಟ ನಡೆಸುತ್ತಿದ್ದ ಕಾಡಾನೆಯೊಂದನ್ನು ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದ್ದು, ಅಪಾಯದಲ್ಲಿದ್ದ ಆನೆಯನ್ನು ರಕ್ಷಣೆ ಮಾಡಿದ ತಮಿಳುನಾಡಿನ ಅರಣ್ಯ ಸಿಬ್ಬಂದಿ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನ(Tamilnadu) ನೀಲಗಿರಿ (Nilagiri) ಜಿಲ್ಲೆಯಲ್ಲಿ ಈ ಅರಣ್ಯ ಇಲಾಖೆ ಸಿಬ್ಬಂದಿ ಈ ಕಾಡಾನೆಯನ್ನು ರಕ್ಷಿಸಿದ್ದಾರೆ.
ಇದು 25 ವರ್ಷ ಪ್ರಾಯದ ಹೆಣ್ಣಾನೆಯಾಗಿದ್ದು, ನೀಲಗಿರಿ ಅರಣ್ಯ ವ್ಯಾಪ್ತಿಯ ಗುಡಲೂರು(Gudalur) ಎಂಬ ಪ್ರದೇಶದಲ್ಲಿ ಕೇಸರಿನಲ್ಲಿ ಸಿಲುಕಿ ಹಾಕಿಕೊಂಡಿತ್ತು. ಇದು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿದು ಬಂದು ಅವರು ಆನೆ ರಕ್ಷಣೆಗೆ ಮುಂದಾಗಿದ್ದಾರೆ. ದೊಡ್ಡದಾದ ಹಗ್ಗವನ್ನು ತೆಗೆದುಕೊಂಡು ಬಂದು ಹಿಡಿದುಕೊಳ್ಳುವಂತೆ ಆನೆಯತ್ತ ಎಸೆದಿದ್ದಾರೆ. ಆನೆಯೂ ಕೂಡ ಬುದ್ಧಿವಂತಿಕೆ ಉಪಯೋಗಿಸಿ ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಈ ವೇಳೆ ಅರಣ್ಯ ಸಿಬ್ಬಂದಿ ಆನೆಯನ್ನು ಭಾರಿ ಶ್ರಮ ಹಾಕಿ ಎಳೆದು ಕೆಸರಿಲ್ಲದ ಜಾಗ ಸೇರಿಸಿದ್ದಾರೆ. ಈ ವೇಳೆ ಆನೆ ತೀವ್ರವಾಗಿ ದಣಿದಂತೆ ಕಾಣುತ್ತಿದ್ದು, ಅದಾಗ್ಯೂ ಅದು ಮೇಲೆ ಬರುವ ಸಲುವಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ(ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು (Supriya Sahu) ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಯ ಫೋಟೋ ಕೂಡ ಜೊತೆಗಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 15,300 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ರಕ್ಷಣಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಪ್ರಿಯಾ ಸಾಹು ತಮಿಳುನಾಡು ಸರ್ಕಾರದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಭದ್ರಾ ಅಭಯಾರಣ್ಯದಲ್ಲಿ ಜೆಸಿಬಿಯಿಂದ ಕಾಡಾನೆಯನ್ನು ಹಿಂಸಿಸಿದ ಕಿಡಿಗೇಡಿಗಳು!
'ನೀಲಗಿರಿಯ ಗುಡಲೂರಿನಲ್ಲಿ ಜೌಗು ಪ್ರದೇಶದಲ್ಲಿ ಸಿಲುಕಿದ್ದ 25 ವರ್ಷದ ಆನೆಯನ್ನು ರಕ್ಷಿಸುವಲ್ಲಿ #ಟಿಎನ್ ಫಾರೆಸ್ಟರ್ಸ್ ತಂಡ, ಆನೆ ಕೂಡ ಛಲ ಬಿಡದೆ ಎಸೆದ ಹಗ್ಗವನ್ನು ಹಿಡಿದುಕೊಂಡು ಜೌಗು ಪ್ರದೇಶದಿಂದ ಹೊರಬರಲು ಮಾದರಿ ಹೋರಾಟದ ಶಕ್ತಿಯನ್ನು ಪ್ರದರ್ಶಿಸಿದೆ. ಅವಳನ್ನು ರಕ್ಷಿಸಿದವರಿಗೆ ಹ್ಯಾಟ್ಸ್ ಆಫ್' ಎಂದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಆನೆ ದಿನ : ಹಣ್ಣು ತರಕಾರಿಗಳ ಬಪೆ ಆಯೋಜಿಸಿ ಗಜಪಡೆಗೆ ಸನ್ಮಾನ
ಕಳೆದ ತಿಂಗಳು ಪಶ್ಚಿಮ ಬಂಗಾಳದಲ್ಲಿ(West Bengal) ಮರಿಯಾನೆಯೊಂದು ಇದೇ ರೀತಿ ಕೆಸರು ಮಣ್ಣು ತುಂಬಿದ ದೊಡ್ಡದಾದ ಹೊಂಡಕ್ಕೆ ಬಿದ್ದಿತ್ತು. ಇದನ್ನು ಅರಣ್ಯ ಸಿಬ್ಬಂದಿ ಊರವರ ಸಹಾಯದಿಂದ ಸಾಹಸ ಮಾಡಿ ಮೇಲೆತ್ತಿದ್ದರು. ಮರಿಯಾನೆಯನ್ನು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಂದಕಕ್ಕೆ ಬಿದ್ದ ಮರಿಯಾನೆಯನ್ನು ಮೇಲೆತ್ತಲೂ ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭೌತಶಾಸ್ತ್ರವನ್ನು ಬಳಸಿದ್ದರು. ದೊಡ್ಡದಾದ ಕಂದಕಕ್ಕೆ ನೀರು ತುಂಬಿಸಿ ಜೊತೆಗೆ ದೊಡ್ಡದಾದ ಹಗ್ಗಗಳನ್ನು ಕೆಳಗೆ ಬಿಟ್ಟು ಅದರ ಸಹಾಯದಿಂದ ಆನೆ ಮೇಲೆ ಬರುವಂತೆ ಮಾಡಿದ್ದರು.
ಆರ್ಕಿಮಿಡಿಸ್ ತತ್ವವನ್ನು ಅನ್ವಯಿಸಿ,ಅರಣ್ಯ ಸಿಬ್ಬಂದಿ (Forest Staff) ಈ ಹೊಂಡವನ್ನು ನೀರಿನಿಂದ ತುಂಬಿಸಿದರು. ಇದರ ಮೂಲಕ ಆನೆಯೂ ಅಂತಿಮವಾಗಿ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದರು.