ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿವೈ ಚಂದ್ರಚೂಡ್‌ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಕೇವಲ 74 ದಿನಗಳ ಕಾಲ ದೇಶದ ಸಿಜೆಐ ಆಗಿದ್ದ ಯುಯು ಲಲಿತ್‌, ಈ ಅವಧಿಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ಮಾಡುವ ಮೂಲಕ ಗಮನಸೆಳೆದಿದ್ದರು. 

ನವದೆಹಲಿ (ನ.9): ಸುಪ್ರೀಂ ಕೋರ್ಟ್‌ನಲ್ಲಿ ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಾಧೀಶ ಡಿವೈ ಚಂದ್ರಚೂಡ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರೊಂದಿಗೆ ಕೇವಲ 74 ದಿನಗಳ ಕಾಲ ದೇಶದ ಸಿಜೆಐ ಆಗಿ ಸೂಪರ್‌ಫಾಸ್ಟ್‌ ಆಗಿ ಕಾರ್ಯನಿರ್ವಹಿಸಿದ್ದ ಉದಯ್‌ ಉಮೇಶ್‌ ಲಲಿತ್‌ ಅವರ ಅವಧಿ ಮುಕ್ತಾಯ ಕಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ನೂತನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವಧಿಯಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅಂದಾಜು 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದವರು ಯುಯು ಲಲಿತ್‌. ಅವರ ವಕೀಲಿಕೆಯ ವೃತ್ತಿ ಕೂಡ ಸುಪ್ರೀಂ ಕೋರ್ಟ್‌ನಿಂದಲೇ ಆರಂಭವಾಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿಯೇ ಸೇವೆ ಸಲ್ಲಿಸಿ ಅವರು ನಿವೃತ್ತಿಯಾಗಿರುವುದು ವಿಶೇಷ. ತಮ್ಮ ಮೊದಲ ವಾದವನ್ನು ಅಂದಿನ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ವೈವಿ ಚಂದ್ರಚೂಡ್‌ ಅವರ ಮುಂದೆ ಯುಯು ಲಲಿತ್‌ ಮಾಡಿದ್ದರು. ಇಂದು ಅವರ ಪುತ್ರ ಡಿವೈ ಚಂದ್ರಚೂಡ್‌ ಅವರಿಗೆ ತಮ್ಮ ಸಿಜೆಐ ಸ್ಥಾನವನ್ನು ನೀಡಿರುವುದು ವಿಶೇಷವಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದ ಯುಯು ಲಿಲಿತ್‌ ಅವರನ್ನು 2014ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಭಡ್ತಿ ಪಡೆದಿದ್ದರು. ಬಳಿಕ ಅದೇ ನ್ಯಾಯಾಲಯದಲ್ಲಿ ಸಿಜೆಐ ಆಗಿ ಸೇವೆ ಸಲ್ಲಿಸಿದ್ದು ಈಗ ಇತಿಹಾಸ. ಸುಪ್ರೀಂ ಕೋರ್ಟ್‌ನ ಬಾರ್‌ ಅಸೋಸಿಯೇಷನ್‌ನಿಂದ ಸಿಜೆಐ ಹುದ್ದೆಗೆ ಏರಿದ 2ನೇ ವ್ಯಕ್ತಿ ಎನ್ನುವ ಶ್ರೇಯ ಇವರದಾಗಿದೆ. ಇದಕ್ಕೂ ಮುನ್ನ ನ್ಯಾಯಮೂರ್ತಿಯಾಗಿದ್ದ ಎಸ್‌ಎಂ ಸಿಕ್ರಿ ಅವರು 1971ರಲ್ಲಿ ವಕೀಲ ವೃತ್ತಿಯಿಂದ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದಲ್ಲದೆ, ಕೊನೆಗೆ ಸಿಜೆಐ ಆಗಿಯೂ ಕಾರ್ಯನಿವರ್ಹಹಿಸಿದ್ದರು.

ಉದಯ್‌ ಉಮೇಶ್‌ ಲಲಿತ್‌ ಅಥವಾ ಯುಯು ಲಿಲಿತ್‌ ಕೇವಲ 74 ದಿನಗಳ ಕಾಲ ಸಿಜೆಐ ಆಗಿದ್ದರೂ, ಇದ್ದಷ್ಟು ದಿನಗಳ ಕಾಲ ಸೂಪರ್‌ಫಾಸ್ಟ್‌ ಆಗಿ ಕಾರ್ಯನಿರ್ವಹಿಸಿದ್ದರು. ಎಷ್ಟೋ ವರ್ಷಗಳಿಂದ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಕೆಲ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿದ್ದರು.

49ನೇ ಸಿಜೆಐ ಉದಯ್‌ ಉಮೇಶ್ ಲಲಿತ್‌ ನೀಡಿದ್ದ ಪ್ರಮುಖ ತೀರ್ಪುಗಳು ಹಾಗೂ ಸುಧಾರಣಾ ಕ್ರಮಗಳು

ವಿಕೃತಕಾಮಿ ಉಮೇಶ್‌ ರೆಡ್ಡಿಗೆ ಗಲ್ಲು ರದ್ದು: ಕರ್ನಾಟಕ ಮೂಲದ ವಿಕೃತಕಾಮಿ ಉಮೇಶ್‌ ರೆಡ್ಡಿ ಅವರನ್ನು ಜೈಲಿನಲ್ಲಿ ಏಕಾಂಗಿಯಾಗಿ ಇರಿಸಲಾಗಿತ್ತು. ಇದನ್ನು ಕಾನೂನು ಬಾಹಿರ ಎಂದು ಹೇಳಿದ್ದ ಸಿಜೆಐ ಪೀಠ, ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಇಳಿಕೆ ಮಾಡಿದ್ದರು.

ತೀಸ್ತಾಗೆ ಜಾಮೀನು ನೀಡಿಕೆ: ಗುಜರಾತ್‌ ಗಲಭೆ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಸಿಜೆಐ ನೇತೃತ್ವದ ಪೀಠ ಜಾಮೀನು ನೀಡುವ ಆದೇಶ ನೀಡಿತ್ತು.

ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ಖಾಯಂ: ದೆಹಲಿಯ ಕೆಂಪುಕೋಟೆಯ ಮೇಲೆ 2000ದಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕ ಮೊಹಮದ್‌ ಆರಿಫ್‌ಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಗಲ್ಲು ಶಿಕ್ಷೆಯನ್ನು ಸಿಜೆಐ ನೇತೃತ್ವದ ಪೀಠ ಎತ್ತಿ ಹಿಡಿದಿತ್ತು.

ತ್ರಿವಳಿ ತಲಾಕ್‌: ತ್ರಿವಳಿ ತಲಾಕ್‌ ನಿಷೇಧ ತೀರ್ಪು ನೀಡಿದ ನ್ಯಾಯಪೀಠದ ಸದಸ್ಯರಾಗಿ ಇವರು ಕಾರ್ಯನಿರ್ವಹಿಸಿದ್ದು ಮಾತ್ರವಲ್ಲದೆ, ತ್ರಿವಳಿ ತಲಾಕ್‌ ನಿಷೇಧವನ್ನು ಬೆಂಬಲಿಸಿದ್ದರು.

ಸೂಪರ್‌ಫಾಸ್ಟ್‌ ತ್ರಿಸದಸ್ಯ ಪೀಠ ರಚನೆ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ವಿಚಾರದಲ್ಲಿ ಎದ್ದ ವಿವಾದವನ್ನು ಇತ್ಯರ್ಥ ಮಾಡುವ ಸಲುವಾಗಿ ರಾತ್ರೋರಾತ್ರಿ ತ್ರಿದಸ್ಯ ಪೀಠ ರಚನೆ ಮಾಡಿದ್ದರು.

ಹಿಜಾಬ್‌ ಕೇಸ್‌: ಕರ್ನಾಟಕಕ್ಕೆ ದೊಡ್ಡ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್‌ ಕೇಸ್‌ನಲ್ಲಿ ದ್ವಿಸದಸ್ಯ ಪೀಠ ರಚನೆ ಮಾಡುವ ಮೂಲಕ ಅತ್ಯಂತ ವೇಗವಾಗಿ ತೀರ್ಪು ಬರುವಂತೆ ನೋಡಿಕೊಂಡಿದ್ದರು.

ಸಾಂವಿಧಾನಿಕ ಪೀಠದ ವಿಚಾರಣೆ ನೇರಪ್ರಸಾರ: ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದಲ್ಲಿ ನಡೆಯುವ ವಾದ ವಿವಾದಗಳನ್ನು ವೆಬ್‌ಸೈಟ್‌ ಮೂಲಕ ನೇರಪ್ರಸಾರ ಮಾಡುವ ನಿರ್ಧಾರ ಮಾಡಿದ್ದರು.

ವಕೀಲನಾಗಿ, ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್‌ನಲ್ಲಿ ನನ್ನ 37 ವರ್ಷ ತೃಪ್ತಿ ನೀಡಿದೆ: ಸಿಜೆಐ ಯುಯು ಲಲಿತ್

ಸಾಂವಿಧಾನಿಕ ಪೀಠ ರಚನೆ: ಸುಪ್ರೀಂ ಕೋರ್ಟ್‌ನಲ್ಲಿ ಇವರು ಸಿಜೆಐ ಆಗಿದ್ದ ಅವಧಿಯಲ್ಲಿ ಒಂದಕ್ಕಿಂತ ಹೆಚ್ಚು ಸಾಂವಿಧಾನಿಕ ಪೀಠದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಕಲಾಪ ನಡೆದವು.

EWS Quota: ಸೋಮವಾರ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಮೀಸಲಾತಿ ತೀರ್ಪು: ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಿದ ಕೇಂದ್ರದ ನಿರ್ಧಾರವನ್ನು ಇವರ ಪೀಠದ ಎದುರು ವಿಚಾರಣೆ ಮಾಡಲಾಗಿತ್ತು.

ಗುಜರಾತ್‌ ಗಲಭೆ, ಅಯೋಧ್ಯಾ ಪ್ರಕರಣಕ್ಕೆ ಕೊನೆ: ಅಯೋಧ್ಯಾ ಪ್ರಕರಣ ಹಾಗೂ ಗುಜರಾತ್‌ ಗಲಭೆ ಪ್ರಕರಣ ಮುಗಿದು ಹೋಗಿರುವ ಅಧ್ಯಾಯ ಈ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿದ್ದ ಎಲ್ಲಾ ಕೇಸ್‌ಗಳನ್ನು ರದ್ದು ಮಾಡಿದ ನಿರ್ಧಾರ