ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ 74 ದಿನಗಳ ಅವಧಿಯನ್ನು ಪೂರ್ಣ ಮಾಡಿರುವ ಸಿಜೆಐ ಯುಯು ಲಿಲಿತ್‌ ಸೋಮವಾರ ತಮ್ಮ ವಿದಾಯ ಭಾಷಣವನ್ನು ಮಾಡಿದರು. ಇದೇ ವೇಳೆ ಕಳೆದ 37 ವರ್ಷಗಳ ತಮ್ಮ ಇಡೀ ವೃತ್ತಿಜೀವನ ಸುಪ್ರೀಂ ಕೋರ್ಟ್‌ನಲ್ಲಿಯೇ ಇದ್ದಿದ್ದು ಹೆಮ್ಮೆಯ ವಿಚಾರ ಎಂದಿದ್ದಾರೆ. 

ನವದೆಹಲಿ (ನ.7): ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್‌ ಲಲಿತ್‌ ಅವರ 74 ದಿನಗಳ ಅವಧಿ ಮುಕ್ತಾಯಗೊಂಡಿದೆ. ಮಂಗಳವಾರ ಅವರ ಅಧಿಕಾರದ ಕೊನೆಯ ದಿನ ಆಗಿದ್ದರೂ, ಗುರುನಾನಕ್‌ ಜಯಂತಿ ಆಗಿರುವ ಕಾರಣ ಕೋರ್ಟ್‌ ಕಲಾಪವಿರುವುದಿಲ್ಲ ಆ ಕಾರಣಕ್ಕಾಗಿ ಸೋಮವಾರವೇ ಯುಯು ಲಲಿತ್‌ ಅವರು ವಿದಾಯ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದ ವೇಳೆ ಕಳೆದ 37 ವರ್ಷಗಳ ವಕೀಲ ವೃತ್ತಿಯನ್ನು ಅವರು ನೆನಪಿಸಿಕೊಂಡರು. ಈ 37 ವರ್ಷಗಳಲ್ಲೂ ಅವರು ಸುಪ್ರೀಂ ಕೋರ್ಟ್‌ನಲ್ಲಿಯೇ ಕಳೆದಿರುವುದು ವಿಶೇಷ. ವಕೀಲನಾಗಿ ಹಾಗೂ ನ್ಯಾಯಮೂರ್ತಿಯಾಗಿ ನನ್ನ ಸಮಯವನ್ನು ಆನಂದದಿಂದ ಕಳೆದಿದ್ದೇನೆ ಎಂದು ಹೇಳಿದ್ದಾರೆ. ನವೆಂಬರ್ 8 ರಂದು ನಿವೃತ್ತರಾಗಲಿರುವ ಸಿಜೆಐ ಲಲಿತ್ ಅವರು ಇಂದು ಮಧ್ಯಾಹ್ನ ತಮ್ಮ ನಿಯೋಜಿತ ಉತ್ತರಾಧಿಕಾರಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರೊಂದಿಗೆ ಕೊನೆಯ ಬಾರಿಗೆ ಸುಪ್ರೀಂ ಕೋರ್ಟ್‌ನ ಔಪಚಾರಿಕ ಪೀಠದಲ್ಲಿ ಕುಳಿತು ಮಾತನಾಡಿದರು.

ಯುಯು ಲಲಿತ್‌ ಅವರು, ದೇಶದ 50ನೇ ಸಿಜೆಐ ಆಗಲಿರುವ ಡಿವೈ ಚಂದ್ರಚೂಡ್‌ ಅವರ ತಂದೆ ಮತ್ತು 16 ನೇ ಮುಖ್ಯ ನ್ಯಾಯಮೂರ್ತಿ ಯಶವಂತ ವಿಷ್ಣು ಚಂದ್ರಚೂಡ್ ಅವರ ಮುಂದೆ ಹಾಜರಾಗುವ ಮೂಲಕ ಉನ್ನತ ನ್ಯಾಯಾಲಯದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾಗಿ ತಿಳಿಸಿದರು. ಈಗ ಸಿಜೆಐ ಸ್ಥಾನವನ್ನು ಅವರ ಮಗನಾದ ಹಿರಿಯ ನ್ಯಾಯಾಧೀಶ ಚಂದ್ರಚೂಡ್‌ ಅವರಿಗೆ ಹಸ್ತಾಂತರ ಮಾಡುತ್ತಿರುವುದು ಉತ್ತಮ ಭಾವನೆ ನೀಡಿದೆ ಎಂದು ಹೇಳಿದರು.

ನನ್ನ ಪ್ರಯಾಣವು ಇದೇ ನ್ಯಾಯಾಲಯದಿಂದ ಪ್ರಾರಂಭವಾಗಿತ್ತು. ಇಂದು ಇದೇ ನ್ಯಾಯಾಲಯದಲ್ಲಿ ಕೊನೆಗೊಳ್ಳುತ್ತುದೆ. ಇದೊಂದು ನನ್ನ ಪಾಲಿಗೆ ಸುಂದರ ಸಂದರ್ಭ. ಇದಕ್ಕಿಂತ ದೊಡ್ಡದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನಾನು 37 ವರ್ಷ ಕಳೆದಿದ್ದೇನೆ. 29 ವರ್ಷ ವಕೀಲನಾಗಿ ಕಳೆದಿದ್ದರೆ, ಕಳೆದ ಎಂಟು ವರ್ಷಗಳ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸದ್ದೇನೆ ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘ ಆಯೋಜಿಸಿದ್ದ ವಿದಾಯ ಕಾರ್ಯಕ್ರಮದಲ್ಲಿ ಹೇಳಿದರು.

"ನಾನು 37 ವರ್ಷಗಳಿಂದ ಇಲ್ಲಿ ಅಭ್ಯಾಸ ಮಾಡಿದ್ದೇನೆ. ಆದರೆ ಎರಡು ಸಂವಿಧಾನ ಪೀಠಗಳು ಏಕಕಾಲದಲ್ಲಿ ವಿಚಾರಣೆ ಮಾಡಿದ್ದನ್ನು ನಾನು ನೋಡಿಲ್ಲ. ಆದರೆ ನನ್ನ ಅಧಿಕಾರಾವಧಿಯಲ್ಲಿ, ನಿರ್ದಿಷ್ಟ ದಿನ, ಮೂರು ಸಾಂವಿಧಾನಿಕ ಪೀಠಗಳು ಒಂದೇ ಸಮಯದಲ್ಲಿ ವಿಷಯಗಳನ್ನು ಆಲಿಸುತ್ತಿದ್ದವು" ಎಂದು ನಿರ್ಗಮಿತ ಸಿಜೆಐ ಹೇಳಿದರು. ಸಿಜೆಐ ಲಲಿತ್ ಅವರು ಪ್ರಮಾಣವಚನ ಸ್ವೀಕರಿಸುವಾಗ ವರ್ಷವಿಡೀ ಒಂದು ಸಂವಿಧಾನ ಪೀಠ ಕಾರ್ಯನಿರ್ವಹಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು ಎಂದು ಹೇಳಿದರು. "ಪ್ರತಿಯೊಬ್ಬ ಎಸ್‌ಸಿ ನ್ಯಾಯಾಧೀಶರು ಸಂವಿಧಾನ ಪೀಠದ ಭಾಗವಾಗಲು ಸಮಾನ ಅವಕಾಶವನ್ನು ಹೊಂದಿರಬೇಕು" ಎಂದು ಅವರು ಆಗ ಹೇಳಿದ್ದರು.

EWS Quota: ಸೋಮವಾರ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ನಾಳೆ ಡಿವೈ ಚಂದ್ರಚೂಡ್‌ ಅಧಿಕಾರ ಸ್ವೀಕಾರ: ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮಂಗಳವಾರ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಔಪಚಾರಿಕ ಪೀಠದ ವಿಚಾರಣೆಯಲ್ಲಿ ಮಾತನಾಡಿದ ನಿಯೋಜಿತ ಸಿಜೆಐ ಚಂದ್ರಚೂಡ್, ವಕೀಲಿಕೆಯಿಂದ ನೇರವಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಯುಯು ಲಿಲಿತ್‌ ಒಬ್ಬರು. ಅವರ ಉತ್ತಮ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಹಿಜಾಬ್ ತೀರ್ಪು ಉನ್ನತ ಪೀಠಕ್ಕೆ, ಅರ್ಜಿದಾರರನ್ನು ಬೆಂಬಲಿಸಿದ ಸಂಘಟನೆ ಹೇಳೋದೇನು?

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಯುಯು ಲಲಿತ್‌ ಅವರ ಮುಂದೆ ವಾದ ಮಂಡಿಸುವುದು ಸಂತಸ ತಂದಿತ್ತು ಎಂದರು. ಆದೇಶ ವ್ಯತಿರಿಕ್ತವಾಗಿದ್ದರೂ ಯಾವುದೇ ತಪ್ಪು ಮಾಡಲಾಗಿದೆ ಎಂದು ನಮಗೆ ಅನಿಸಿರಲಿಲ್ಲ ಎಂದರು. ಸಿಜೆಐ ಅವರ ಸಂಕ್ಷಿಪ್ತ ಅವಧಿಯ ಕುರಿತು ಮಾತನಾಡಿದ ಹಿರಿಯ ವಕೀಲ ನಿಧೇಶ್ ಗುಪ್ತಾ, “ನಿಮ್ಮ ಸಿಜೆಐ ಸ್ಥಾನ ಕಡಿಮೆ ಅವಧಿಯದ್ದಾಗಿದ್ದರೂ, ಸುಂದರವಾಗಿತ್ತು. ನ್ಯಾಯಾಲಯದ ಮಹಿಮೆ ಏನೆಂದು ತೋರಿಸಿದ್ದೀರಿ. ನ್ಯಾಯವನ್ನು ಮಾತ್ರ ಮಾಡಲಾಗಿಲ್ಲ. ಅದನ್ನು ಪಾಲಿಸುವಂತೆಯೂ ಮಾಡಲಾಗಿತ್ತು' ಎಂದರು. ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್‌ನ ಅಧ್ಯಕ್ಷ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಸಿಜೆಐ ಲಲಿತ್ ಅವರಿಗೆ ಬಾರ್‌ನ ಸದಸ್ಯರು ಸಹಿ ಮಾಡಿದ ಸ್ಮರಣಿಕೆಯನ್ನು ಉಡುಗೊರೆಯಾಗಿ ನೀಡಿದರು.