ಇಸ್ರೇಲಿ ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಪತನಗೊಳಿಸಲು ಸಹ-ಪೈಲಟ್ ನಡೆಸಿದ ಯತ್ನವನ್ನು ಕ್ಯಾಪ್ಟನ್ ಸ್ಮಿತ್ ಮಚ್ಚರ್ ವಿಫಲಗೊಳಿಸಿದ್ದಾರೆ. ಈ ವಿಮಾನದ ಸಂಖ್ಯೆ FZ1073 ಆಗಿದ್ದು, ಇದು ಅಕ್ಟೋಬರ್ 7ರ ಹಮಾಸ್ ದಾಳಿ ಮತ್ತು ಅದರ 3ನೇ ವರ್ಷವನ್ನು ಸೂಚಿಸುವ '10-7-3' ಕೋಡ್‌ವರ್ಡ್ ಎಂಬ ಅನುಮಾನ ಮೂಡಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಇಸ್ರೇಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 'ಫ್ಲೈದುಬೈ' (Flydubai) ವಿಮಾನದಲ್ಲಿ ನಡೆದ ಭೀಕರ ಹೈಜಾಕ್ ಯತ್ನದ ಘಟನೆ ಈಗ ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದೆ. ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ FZ1073 ವಿಮಾನವನ್ನು ಆಕಾಶದಲ್ಲೇ ಪತನಗೊಳಿಸಲು ನಡೆದ ಸಂಚು ಕೂದಲೆಳೆಯ ಅಂತರದಲ್ಲಿ ವಿಫಲವಾಗಿದೆ. ಕಾಕ್‌ಪಿಟ್‌ನಲ್ಲಿದ್ದ ಒಮಾನಿ ಮೂಲದ ಸಹ-ಪೈಲಟ್ (ಫಸ್ಟ್ ಆಫೀಸರ್) ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ಇದ್ದಕ್ಕಿದ್ದಂತೆ ಮಾರಣಾಂತಿಕ ದಾಳಿ ನಡೆಸಿ, ವಿಮಾನವನ್ನು ಬಲವಂತವಾಗಿ ಕೆಳಕ್ಕೆ ಅಪ್ಪಳಿಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಆದರೆ, ಕ್ಯಾಪ್ಟನ್ ಸ್ಮಿತ್ ಅವರ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆ ಹಾಗೂ ಪ್ರಯಾಣಿಕರ ಸಾಹಸದಿಂದಾಗಿ ದಾಳಿಕೋರನನ್ನು ನಿಯಂತ್ರಿಸಲಾಯಿತು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡಿಂಗ್ ಮಾಡಿಸಲಾಯಿತು. ಆದರೆ, ಈ ಹೈ-ವೋಲ್ಟೇಜ್ ಘಟನೆಯಲ್ಲಿ ನಿರ್ಲಕ್ಷಿಸಲು ಸಾಧ್ಯವೇ ಇಲ್ಲದ ಅತ್ಯಂತ ರೋಚಕ ಅಂಶವೆಂದರೆ—ವಿಮಾನದ ಸಂಖ್ಯೆಗಳ ಆಟ! ಈ ಅಪಹರಣ ಯತ್ನದ ಹಿಂದೆ ಇಸ್ರೇಲ್ ಮೇಲೆ ನಡೆದ ಇತಿಹಾಸದ ಅತಿದೊಡ್ಡ ದಾಳಿಯ ಕನೆಕ್ಷನ್ ಇದೆಯೇ ಎಂಬ ಅನುಮಾನ ಈಗ ದಟ್ಟವಾಗಿದೆ.
ಏನಿದು ಕೋಡವರ್ಡ್?
‘10-7-3’ ಸಂಖ್ಯಾಶಾಸ್ತ್ರ ಹಾಗೂ ನ್ಯೂಮರಾಲಜಿ ರಹಸ್ಯ!ಕಾಕ್‌ಪಿಟ್‌ನಲ್ಲಿ ಘರ್ಷಣೆ ನಡೆದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳು ಹಾಗೂ ತನಿಖಾ ವಲಯಗಳಲ್ಲಿ ಹಲವು ಸಿದ್ಧಾಂತಗಳು ಹರಿಡಾಡಲು ಪ್ರಾರಂಭಿಸಿವೆ. ಇಂಟರ್ನೆಟ್ ಬಳಕೆದಾರರು ಮತ್ತು ಭದ್ರತಾ ತಜ್ಞರು ಘಟನೆಯ ಸಮಯ, ವಿಮಾನ ಸಂಖ್ಯೆ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದ ದಿನಾಂಕಗಳ ನಡುವೆ ಇರುವ ವಿಚಿತ್ರ ಕನೆಕ್ಷನ್ ಕಂಡುಹಿಡಿದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವಂತೆ, FZ1073 ವಿಮಾನ ಸಂಖ್ಯೆಯ ಕೊನೆಯ '10-7-3' ಅಂಕಿಗಳ ಹಿಂದೆ ಭೀಕರ ಅರ್ಥ ಅಡಗಿದೆ:
ಭೀಕರ ದಿನಾಂಕ!
10 ಮತ್ತು 7 (10/7); ಇದು 10ನೇ ತಿಂಗಳು (ಅಕ್ಟೋಬರ್) ಹಾಗೂ 7ನೇ ದಿನಾಂಕವನ್ನು ಸೂಚಿಸುತ್ತದೆ. ಅಂದರೆ, ಅಕ್ಟೋಬರ್ 7, 2023 ರಂದು ಹಮಾಸ್ ಸಂಘಟನೆ ಇಸ್ರೇಲ್ ಮೇಲೆ ನಡೆಸಿದ ಇತಿಹಾಸದಲ್ಲೇ ಅತ್ಯಂತ ಕ್ರೂರ ಹಾಗೂ ಭೀಕರ ದಾಳಿಯ ದಿನಾಂಕ.
3 (ಮೂರು ವರ್ಷಗಳು); ವಿಮಾನ ಸಂಖ್ಯೆಯ ಕೊನೆಯ ಅಂಕೆ '3' ಆಗಿದ್ದು, ಅಕ್ಟೋಬರ್ 7ರ ಆ ಭೀಕರ ನರಮೇಧ ನಡೆದು ಭರ್ತಿ 3 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಮಯವನ್ನು (2026) ಇದು ಪ್ರತಿನಿಧಿಸುತ್ತದೆ. ಕ್ಯಾಪ್ಟನ್ ಸ್ಮಿತ್ ಮಚ್ಚರ್ ಆಕಾಶದಲ್ಲಿ ಸಾವು-ಬದುಕಿನ ಕಾದಾಟ ನಡೆಸಿ ಪ್ರಯಾಣಿಕರ ಜೀವ ಉಳಿಸಿದ್ದು ನಿಜಕ್ಕೂ ರೋಮಾಂಚನಕಾರಿ. ಪ್ರಸ್ತುತ ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಮತ್ತು ಒಮಾನ್ ದೇಶಗಳ ಅಧಿಕೃತ ತನಿಖಾ ಸಂಸ್ಥೆಗಳು ಈ ಪ್ರಕರಣದ ಪ್ರತಿಯೊಂದು ಆಯಾಮವನ್ನು ತೀವ್ರ ತನಿಖೆಗೆ ಒಳಪಡಿಸಿವೆ. ಈ ಕೃತ್ಯದ ಹಿಂದೆ ಯಾವುದಾದರೂ ಸಂಘಟಿತ ಉಗ್ರ ಪಡೆಯ ಕೈವಾಡವಿದೆಯೇ ಅಥವಾ ಇದು ಕೇವಲ ಒಬ್ಬ ವ್ಯಕ್ತಿಯ ಮಾನಸಿಕ ಉನ್ಮಾದವೇ ಎಂಬುದನ್ನು ತನಿಖೆ ಬಹಿರಂಗಪಡಿಸಲಿದೆ.
ಅಕ್ಟೋಬರ್ 7, 2023 ರಂದು ಏನಾಗಿತ್ತು?
ಅಕ್ಟೋಬರ್ 7, 2023 ರಂದು ಪ್ಯಾಲೆಸ್ಟೈನ್‌ನ ಹಮಾಸ್ ಉಗ್ರ ಸಂಘಟನೆಯು 'ಆಪರೇಷನ್ ಅಲ್-ಅಕ್ಸಾ ಫ್ಲಡ್' ಹೆಸರಿನಲ್ಲಿ ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿ ಮಧ್ಯಪ್ರಾಚ್ಯದ ಭದ್ರತಾ ವ್ಯವಸ್ಥೆಯನ್ನೇ ಬುಡಮೇಲು ಮಾಡಿತ್ತು. ಯಹೂದಿಗಳ 'ಸಿಮ್ಚಾಟ್ ತೋರಾ' ಹಬ್ಬದ ಶುಭ ಸಂಧ್ಯಾಕಾಲದಲ್ಲಿ, ಬೆಳಿಗ್ಗೆ 6:30ರ ಸುಮಾರಿಗೆ ಗಾಜಾ ಪಟ್ಟಿಯಿಂದ ಬರೋಬ್ಬರಿ 5,000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಇಸ್ರೇಲ್ ಮೇಲೆ ಹಾರಿಸಲಾಯಿತು. ಅಷ್ಟೇ ಅಲ್ಲದೆ, ಭೂಮಿ, ಆಕಾಶ ಮತ್ತು ಸಮುದ್ರ ಮಾರ್ಗವಾಗಿ ಇಸ್ರೇಲ್ ಪ್ರವೇಶಿಸಿದ ಉಗ್ರರು, ಸೂಪರ್‌ನೋವಾ ಮ್ಯೂಸಿಕ್ ಫೆಸ್ಟಿವಲ್‌ನಲ್ಲಿದ್ದ ನಿರಾಯುಧ ಯುವಕರ ಮೇಲೆ ಮನಬಂದಂತೆ ಗುಂಡಿನ ಮಳೆ ಗರೆದು 360ಕ್ಕೂ ಹೆಚ್ಚು ಜನರನ್ನು ಕೊಂದರು. ಈ ಒಟ್ಟು ದಾಳಿಯಲ್ಲಿ ಸುಮಾರು 1,200 ಮುಗ್ಧ ಜನರು ಪ್ರಾಣ ಕಳೆದುಕೊಂಡರೆ, 250ಕ್ಕೂ ಹೆಚ್ಚು ಜನರನ್ನು ಅಪಹರಿಸಿ ಗಾಜಾದ ರಹಸ್ಯ ಸುರಂಗಗಳಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿತ್ತು. ಇದು ಎರಡನೇ ಮಹಾಯುದ್ಧದ 'ಹತ್ಯಾಕಾಂಡ'ದ (Holocaust) ನಂತರ ಯಹೂದಿಗಳ ಮೇಲೆ ನಡೆದ ಅತ್ಯಂತ ರಕ್ತಸಿಕ್ತ ದಾಳಿಯಾಗಿತ್ತು.
ಆಪರೇಷನ್ ಐರನ್ ಸ್ವೋರ್ಡ್ಸ್!
ಈ ನರಮೇಧಕ್ಕೆ ಪ್ರತ್ಯುತ್ತರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಸಾರಿದರು. ಹಮಾಸ್ ನಿರ್ಮೂಲನೆಗೆ 'ಆಪರೇಷನ್ ಐರನ್ ಸ್ವೋರ್ಡ್ಸ್' ಕೈಗೊಂಡು ಗಾಜಾ ಪಟ್ಟಿಯ ಮೇಲೆ ವಾಯು ಮತ್ತು ನೆಲದ ಮಾದರಿಯ ಭೀಕರ ದಾಳಿ ಆರಂಭಿಸಿದರು. ಈಗ ಅಕ್ಟೋಬರ್ 7ರ ಆ ಕಪ್ಪು ದಿನಕ್ಕೆ 3 ವರ್ಷ ತುಂಬುತ್ತಿರುವ ಬೆನ್ನಲ್ಲೇ '10-7-3' ವಿಮಾನ ಹೈಜಾಕ್ ಯತ್ನ ನಡೆದಿರುವುದು ಜಗತ್ತನ್ನು ಮತ್ತೆ ಆತಂಕದ ತುದಿಯಲ್ಲಿ ತಂದಿರಿಸಿದೆ.


