ಶ್ರೀನಗರ(ಮೇ.03): ದೇಶದಾದ್ಯಂತ ಒಂದೆಡೆ ಕೊರೋನಾ ಅಟ್ಟಹಾಸದಿಂದ ಲಾಕ್‌ಡೌನ್‌ ಹೇರಲಾಗಿದೆ. ಹೀಗಿದ್ದರೂ ಉಗ್ರರ ಪುಂಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಗಡಿಯಲ್ಲಿ ಉಗ್ರರು ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ಹಂದ್ವಾರದಲ್ಲಿ ಉಗ್ರರು ಭಾರತೀಯ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು, ಓರ್ವ ಲ್ಯಾನ್ಸ್ ನಾಯ್ಕ್, ರೈಫಲ್ ಮ್ಯಾನ್ ಹಾಗೂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದಾರೆ. ಈ ಗುಂಡಿನ ಚಕಮಕಿ ವೇಳೆ ಇಬ್ಬರು ಉಗ್ರರನ್ನೂ ಭಾರತೀಯ ಸೇನೆ ಹೊಡೆದುರುಳಿಸಿದೆ.

ದಾಳಿ ನಡೆದಿದ್ದೆಲ್ಲಿ?

ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರದ ಚಂಜ್‍ಮುಲ್ಲಾ ಪ್ರದೇಶದಲ್ಲಿ ಶನಿವಾರ ರಾತ್ರಿ ಉಗ್ರರು ಏಕಾಏಕಿ ಗುಂಡಿ ದಾಳಿ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಅಲ್ಲಿನ ನಾಗರಿಕರ ರಕ್ಷಣೆಗೆ ಮುಂದಾಗಿತ್ತು. ಆದರೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಐವರು ಭದ್ರತಾ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ.

ಕುಪ್ವಾರಾ ಜಿಲ್ಲೆಯ ಚಂದಿಮುಲ್ಲಾದಲ್ಲಿರುವ ಜನರನ್ನು ಒತ್ತೆಯಾಳು ಮಾಡಿಕೊಳ್ಳಲು ಉಗ್ರರು ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದರು. ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ತಂಡವು ಚಂದಿಮುಲ್ಲಾ ಪ್ರದೇಶದಿಂದ ನಾಗರಿಕನನ್ನು ಯಶಸ್ವಿಯಾಗಿ ಹೊರಹಾಕಿತು. ಆದರೆ ಕಾರ್ಯಾಚರಣೆಯಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಆಶುತೋಷ್ ಶರ್ಮಾ ಹೀರೋ

ಆಶುತೋಷ್ ಶರ್ಮಾ ಅವರು 21 ರಾಷ್ಟ್ರೀಯ ರೈಫಲ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಗಡಿಯಲ್ಲಿ ಒಳನುಸುಳುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹೀರೋ ಎಂದು ಗುರುತಿಸಿಕೊಂಡಿದ್ದರು. ಈ ಹಿಂದೆ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆಶುತೋಷ್ ಶರ್ಮಾ ಅವರ ಕೂಡುಗೆ ಮಹತ್ವದ್ದಾಗಿತ್ತು.