ಸೂರತ್(ಏ.17)‌: ಗುಜರಾತ್‌ನ ಸೂರತ್‌ನಲ್ಲಿ ಸೋಂಕಿತರ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆ ಬೆನ್ನಲ್ಲೇ, ಅಂತ್ಯಸಂಸ್ಕಾರ ದೊಡ್ಡ ಸಮಸ್ಯೆಯಾಗಿ ತಲೆದೋರಿದೆ. ಚಿತಾಗಾರಗಳಲ್ಲಿ ದಿನದ 24 ಗಂಟೆಯೂ ಅಂತ್ಯಸಂಸ್ಕಾರ ನಡೆಸಿದರೂ ಪೂರ್ಣ ಶವ ಸಂಸ್ಕಾರ ಮುಗಿಯುತ್ತಿಲ್ಲ.

ಹೀಗಾಗಿ ಬುಧವಾರ ಒಂದೇ ಚಿತೆಯಲ್ಲಿ 5 ಕೋವಿಡ್‌ ಸೋಂಕಿತರ ಶವಗಳನ್ನು ಇಟ್ಟು ಅಂತ್ಯಸಂಸ್ಕಾರ ನಡೆಸಲಾಗಿದೆ. ಇನ್ನೊಂದೆಡೆ ಸರ್ಕಾರ ಪ್ರಕಟಿಸುತ್ತಿರುವ ಅಂಕಿಅಂಶಕ್ಕಿಂತ ಸಾವಿಗೀಡಾಗುತ್ತಿರುವ ಪ್ರಮಾಣ ಅಧಿಕವಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಗುಜರಾತಿನ 4 ಪ್ರಮುಖ ನಗರಗಳಲ್ಲಿ ನಿತ್ಯ ಕನಿಷ್ಠ 25 ಕೋವಿಡ್‌ ಸಾವು ಸಂಭವಿಸುತ್ತಿದೆ ಎಂದು ಪಾಲಿಕೆಗಳು ಮಾಹಿತಿ ನೀಡುತ್ತಿವೆ.

ಭರೂಚ್‌ನಲ್ಲಿ ಕಳೆದ ಏ.7ರಿಂದ ಸುಮಾರು 260 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸ್ಥಳೀಯ ಆಡಳಿತ ಕೊರೋನಾ ಆರಂಭವಾದಾನಿಗಿಂದ ಕೇವಲ 36 ಸಾವು ಸಂಭವಿಸಿದೆ ಎಂದು ಹೇಳುತ್ತಿದೆ. ಇನ್ನು ವಡೋದರದ ಸಯ್ಯಾಜಿರಾವ್‌ ಆಸ್ಪತ್ರೆಯೊಂದರಲ್ಲೇ ಕಳೆದ 9 ದಿನಗಳಲ್ಲಿ 180 ಕೋವಿಡ್‌ ರೋಗಿಗಳು ಸಾವಿಗೀಡಾಗಿದ್ದಾರೆ. ಬೇರೆ ಆಸ್ಪತ್ರೆಗಳಲ್ಲೂ ಸಾವಿನ ಸಂಖ್ಯೆ ಹೆಚ್ಚಿದೆ.

ಆದರೆ ಕೊರೋನಾ ಆರಂಭವಾದಾಗಿನಿಂದ ಇಲ್ಲಿ ಕೇವಲ 300 ಮಂದಿ ಮೃತಪಟ್ಟಿದ್ದಾಗಿ ಸರ್ಕಾರಿ ಅಂಕಿ ಅಂಶಗಳು ಹೇಳುತ್ತಿವೆ.