ನವದೆಹಲಿ(ಸೆ.09):ಲಡಾಖ್‌ನ ಗಡಿಯಲ್ಲಿ ನಾಲ್ಕೈದು ತಿಂಗಳಿನಿಂದ ಭಾರತದ ಸ್ಥಳಗಳನ್ನು ಆಕ್ರಮಿಸಿಕೊಳ್ಳಲು ಯತ್ನಿಸುತ್ತಲೇ ಇರುವ ಚೀನಾ ಸೇನೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊದಲ ಬಾರಿ ಗುಂಡು ಹಾರಿಸಿದೆ. ಗಾಳಿಯಲ್ಲಿ ಗುಂಡು ಹಾರಿಸಿ ನಡೆಸಿದ ಈ ಬೆದರಿಕೆ ಯತ್ನಕ್ಕೆ ಭಾರತೀಯ ಸೇನೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದು, ಗಡಿಯಲ್ಲಿ ಯುದ್ಧದ ಆತಂಕ ಇನ್ನಷ್ಟುತೀವ್ರವಾಗಿದೆ.

ಸೋಮವಾರ ರಾತ್ರಿ ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಸರೋವರದ ದಕ್ಷಿಣದ ದಂಡೆಯ ಮುಖ್‌ಪರಿ ಎಂಬಲ್ಲಿ ಈ ಘಟನೆ ನಡೆದಿದೆ. ಆದರೆ, ಭಾರತೀಯ ಯೋಧರ ಮೇಲೆ ನೇರವಾಗಿ ಚೀನಾ ಸೇನೆ ಗುಂಡಿನ ದಾಳಿ ನಡೆಸಿಲ್ಲ. ಬದಲಿಗೆ, ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯೊಳಗೆ ನುಗ್ಗಿಬರಲು ಚೀನಾದ 50-60 ಸೈನಿಕರು ಗಾಳಿಯಲ್ಲಿ ‘ಎಚ್ಚರಿಕೆಯ ಗುಂಡು’ ಹಾರಿಸುತ್ತಾ ಮುನ್ನುಗ್ಗಿದ್ದಾರೆ. ಅವರನ್ನು ಭಾರತದ ಯೋಧರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ಚೀನಾ ಯೋಧರು ಅಂದಾಜು 10-15 ಸುತ್ತು ಗುಂಡು ಹಾರಿಸಿದ್ದಾರೆ. ಆದರೆ ಭಾರತೀಯ ಯೋಧರು ಸಂಯಮದಿಂದ ವರ್ತಿಸುವ ಮೂಲಕ ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡಿದ್ದಾರೆ.

45 ವರ್ಷದ ಬಳಿಕ ಗುಂಡಿನ ಸದ್ದು:

ಚೀನಾದ ಯೋಧರು ಎಲ್‌ಎಸಿಯಲ್ಲಿ ಗುಂಡು ಹಾರಿಸಿರುವುದು 45 ವರ್ಷಗಳಲ್ಲಿ ಇದೇ ಮೊದಲು. 1975ರಲ್ಲಿ ಕೊನೆಯದಾಗಿ ಈ ಗಡಿಯಲ್ಲಿ ಗುಂಡಿನ ದಾಳಿ ನಡೆದಿತ್ತು. ನಂತರ ನಡೆದ ಒಪ್ಪಂದದಲ್ಲಿ ಉಭಯ ಸೇನೆಗಳು ಎಲ್‌ಎಸಿಯ ಮುಂಚೂಣಿ ಪೋಸ್ಟ್‌ಗಳಲ್ಲಿ ಬಂದೂಕು ಸೇರಿದಂತೆ ಯಾವುದೇ ಮಾರಕ ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ ಎಂದು ನಿರ್ಧಾರವಾಗಿತ್ತು. ಆದರೂ ಐದು ತಿಂಗಳ ಹಿಂದೆ ಗಲ್ವಾನ್‌ ಕಣಿವೆಯಲ್ಲಿ ಚೀನಾದ ಯೋಧರು ಚೂರಿ, ಬಡಿಗೆಗಳಂತಹ ಅಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ದಾಳಿ ನಡೆಸಿ ಒಪ್ಪಂದ ಉಲ್ಲಂಘಿಸಿದ್ದರು. ಆದರೆ, ಆಗಲೂ ಗನ್‌ ಅಥವಾ ಬಂದೂಕು ಬಳಸಿರಲಿಲ್ಲ. ಈಗ ಬಂದೂಕು ಬಳಸಲು ಆರಂಭಿಸಿರುವುದು ಗಡಿಯಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ.

ಸೋಮವಾರ ರಾತ್ರಿ ನಡೆದ ಈ ಘಟನೆಯ ಬಗ್ಗೆ ಭಾರತೀಯ ಸೇನೆ ಪ್ರಕಟಣೆ ಹೊರಡಿಸಿ, ಚೀನಾದ ಸೇನೆ ಗುಂಡು ಹಾರಿಸುತ್ತಾ ಗಡಿಯೊಳಗೆ ನುಗ್ಗಿಬರಲು ಯತ್ನಿಸಿದೆ. ಅದನ್ನು ನಾವು ತಡೆದಿದ್ದೇವೆ ಎಂದು ತಿಳಿಸಿದೆ. ಆದರೆ, ಇದನ್ನು ತಳ್ಳಿಹಾಕಿರುವ ಚೀನಾ, ಭಾರತೀಯ ಯೋಧರೇ ಗುಂಡು ಹಾರಿಸುತ್ತಾ ನಮ್ಮ ಗಡಿಯೊಳಗೆ ನುಗ್ಗಿಬರಲು ಯತ್ನಿಸಿದರು. ಆಗ ರಕ್ಷಣಾತ್ಮಕ ಕ್ರಮವಾಗಿ ನಾವೂ ಪ್ರತಿಕ್ರಿಯಿಸಿದೆವು ಎಂದು ಹೇಳಿದೆ. ಆದರೆ, ಹೇಗೆ ‘ಪ್ರತಿಕ್ರಿಯಿಸಿದೆವು’ ಎಂಬುದನ್ನು ತಿಳಿಸಿಲ್ಲ.

ಮಾರಕ ಶಸ್ತ್ರಾಸ್ತ್ರ ಹಿಡಿದಿದ್ದ ಚೀನಾ ಯೋಧರು

ಸೋಮವಾರ ಚೀನಾ ಸೈನಿಕರು ಎಲ್‌ಎಸಿಯ ‘ನೋ ಫೈರ್‌’ (ಗುಂಡು ಹಾರಿಸಬಾರದ) ವಲಯದಲ್ಲಿ ಈಟಿ, ರಾಡ್‌, ಹರಿತವಾದ ಆಯುಧಗಳನ್ನು ಹಿಡಿದುಕೊಂಡು ಆಗಮಿಸಿದ್ದ ವಿಷಯಗಳು ಭಾರತೀಯ ಯೋಧರು ಸೆರೆಹಿಡಿದ ಫೋಟೋಗಳಿಂದ ಬಹಿರಂಗವಾಗಿದೆ. ಈ ಹಿಂದೆ ಜೂನ್‌ 15ರಂದು ಗಲ್ವಾನ್‌ ಕಣಿವೆಯಲ್ಲಿ ನಡೆದ ದಾಳಿ ವೇಳೆಯೂ ಚೀನಾ ಯೋಧರು ಹೀಗೆ ಮಾರಕಾಸ್ತ್ರ ಹಿಡಿದು ಬಂದಿದ್ದರು.

ಯಾವುದೇ ಹಂತದಲ್ಲೂ ಭಾರತೀಯ ಸೇನೆ ಎಲ್‌ಎಸಿ ದಾಟಿ ಚೀನಾದತ್ತ ನುಗ್ಗಿಲ್ಲ ಅಥವಾ ಗುಂಡು ಹಾರಿಸುವುದೂ ಸೇರಿದಂತೆ ಯಾವುದೇ ಪ್ರಚೋದನಾತ್ಮಕ ಕ್ರಮಗಳನ್ನು ಕೈಗೊಂಡಿಲ್ಲ. ಚೀನಾದ ಯೋಧರೇ ಒಪ್ಪಂದ ಉಲ್ಲಂಘಿಸಿ ಸೆ.7ರಂದು ಕೆಲ ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಮ್ಮ ಪ್ರದೇಶದತ್ತ ನುಗ್ಗಿಬರಲು ಯತ್ನಿಸಿದರು. ಅದನ್ನು ನಮ್ಮ ಪಡೆಗಳು ತಡೆದಿವೆ. ಚೀನಾದ ಸೇನೆ ಎಲ್ಲರನ್ನೂ ದಾರಿ ತಪ್ಪಿಸಲು ಯತ್ನಿಸುತ್ತಿದೆ.

- ಭಾರತೀಯ ಸೇನೆ