ದೀಪಾವಳಿಗೆ ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು, ಮಾರಾಟ ಮಾಡಿದರೂ ಶಿಕ್ಷೆ!
ದೀಪಾವಳಿಗೆ ಕೆಲ ದಿನಗಳು ಮಾತ್ರ ಬಾಕಿ. ಈಗಾಗಲೇ ತಯಾರಿಗಳು ನಡೆಯುತ್ತಿದೆ. ಕೊರೋನಾ ದೂರ ಸರಿದಿರುವ ಕಾರಣ ಅದ್ಧೂರಿಯಾಗಿ ಬೆಳಕಿನ ಹಬ್ಬ ಆಚರಿಸಲು ಹಿಂದೂ ಸಮುದಾಯ ರೆಡಿಯಾಗಿದೆ. ಆದರೆ ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ. ಕದ್ದು ಮುಚ್ಚಿ ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಬೇಕು. ಇಷ್ಟೇ ಅಲ್ಲ ಮಾರಾಟ ಮಾಡಿದರೆ, ಶೇಖರಿಸಿಟ್ಟರೂ ಶಿಕ್ಷೆ ತಪ್ಪಿದ್ದಲ್ಲ.
ನವದೆಹಲಿ(ಅ.19): ದೇಶ ವಿದೇಶದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಕಳೆದೆರಡು ವರ್ಷ ನಿರ್ಬಂಧಗಳ ಕಾರಣ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಯುತ್ತಿದೆ. ಆದರೆ ಈ ವರ್ಷ ಪಟಾಕಿ ನಿಯಮ ಮತ್ತಷ್ಟು ಕಠಿಣವಾಗಿದೆ. ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಿದರೆ ಕನಿಷ್ಠ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಮಾರಾಟ ಮಾಡಿದರೆ, ಪಟಾಕಿ ಶೇಖರಿಸಿಟ್ಟಿದ್ದರೆ 3 ವರ್ಷ ಜೈಲು ಹಾಗೂ 5,000 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಈ ನಿಯಮ ದೆಹಲಿಯಲ್ಲಿ ಜಾರಿ ಮಾಡಲಾಗಿದೆ. ಈ ಕುರಿತು ಪರಿಸರ ಸಚಿವ ಗೋಪಾಲ್ ರೈ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಮಾಲಿನ್ಯ ಅತೀಯಾಗುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಈ ಕುರಿತು ಸ್ಪಷ್ಟ ಸೂಚನೆ ನೀಡಿದೆ. ಹೀಗಾಗಿ ದೆಹಲಿಯಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ ಎಂದು ಗೋಪಾಲ್ ರೈ ಸ್ಪಷ್ಟಪಡಿಸಿದ್ದಾರೆ.
ಕಳೆದೆರಡು ವರ್ಷದಿಂದ ದೆಹಲಿಯಲ್ಲಿ ಪಟಾಕಿ ನಿಷೇಧಿಸಲಾಗಿದೆ. ಹಬ್ಬ ಮಾತ್ರವಲ್ಲ, ಹೊಸ ವರ್ಷ ಆಚರಣೆ ಸೇರಿದಂತೆ ಪ್ರಮುಖ ಸಂದರ್ಭಗಳಲ್ಲಿ ಪಟಾಕಿ ಸಿಡಿಸುವುದರಿಂದ ದೆಹಲಿ ಮಾಲಿನ್ಯ ಅತೀಯಾಗುತ್ತಿದೆ. ಹೀಗಾಗಿ ಸಂಪೂರ್ಣವಾಗಿ ಪಟಾಕಿ ನಿಷೇಧಿಸಲಾಗಿತ್ತು. 2022ರ ಸೆಪ್ಟೆಂಬರ್ ತಿಂಗಳಲ್ಲಿ ಪಟಾಕಿ ನಿಷೇಧ ಅವಧಿಯನ್ನು ಮತ್ತೆ ಮುಂದುವರಿಸಲಾಗಿದೆ. ಇದೀಗ ಜನವರಿ 1 ರವರೆಗೆ ಪಟಾಕಿ ಸಂಪೂರ್ಣ ನಿಷೇಧಿಸಲಾಗಿದೆ.
ದೀಪಾವಳಿ 2022: ಮನೆಯಲ್ಲಿ ಕನಿಷ್ಠ ಇಷ್ಟು ದೀಪ ಹಚ್ಚಬೇಕು.. ಎಷ್ಟು?
ಈ ನಿಯಮ ಕೇವಲ ದೆಹಲಿಗೆ ಎಂದು ನಿಟ್ಟುಸಿರು ಬಿಡಬೇಡಿ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧ ಮಾಡಲಾಗಿತ್ತು. ಈ ಬಾರಿಯೂ ಮತ್ತೆ ಪಟಾಕಿ ನಿಷೇಧ ನಿಯಮ ಜಾರಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬವಾಗಿ ಆಚರಿಸುವುಗು ಸೂಕ್ತವಾಗಿದೆ. ಪಟಾಕಿಯಿಂದ ದೂರ ಉಳಿಯುವುದು ಮತ್ತಷ್ಟು ಸೂಕ್ತವಾಗಿದೆ.
ದೆಹಲಿಯಲ್ಲಿ ಪಟಾಕಿ ಖರೀದಿಸಿ ಸಿಡಿಸಿದರೆ 6 ತಿಂಗಳ ಜೈಲು ಶಿಕ್ಷೆ ಹಾಗೂ 200 ರೂಪಾಯಿ ದಂಡ ವಿಧಿಸಲಾಗುತ್ತದೆ. ದೆಹಲಿಯಲ್ಲಿ 408 ತಂಡ ರಚಿಸಲಾಗಿದೆ. ಯಾವುದೇ ಪ್ರದೇಶದಲ್ಲಿ ಪಟಾಕಿ ಸಿಡಿಸಿದರೂ ಪೊಲೀಸರು ಹದ್ದಿನ ಕಣ್ಣಿಟ್ಟಿದೆ. ಸಹಾಯಕ ಪೊಲೀಸ್ ಕಮಿಷನರ್ ಅಡಿಯಲ್ಲಿ 210 ಪೊಲೀಸ್ ತಂಡಗಳು ಕಾರ್ಯನಿರ್ವಹಿಸಲಿದೆ. ಇನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನೊಳಗೊಂಡ 165 ತಂಡ ಹಾಗೂ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರ 33 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ದೆಹಲಿಯಲ್ಲಿ ಪಟಾಕಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕಾರ್ಯನಿರ್ವಹಿಸಲಿದೆ.
ದೀಪಾವಳಿಗೆ ಚಿನ್ನ ಖರೀದಿಸುತ್ತಿದ್ದೀರಾ? ಹಾಗಾದ್ರೆ ಈ 5 ವಿಷಯಗಳನ್ನು ನೆನಪಿಡಿ
ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ
ಮುಂದಿನ ವಾರ ನಡೆಯಲಿರುವ ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಹಸಿರು ಪಟಾಕಿಯ ವ್ಯಾಪಾರ ವಹಿವಾಟು ಮಾತ್ರ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅವಕಾಶ ನೀಡಿದೆ. ಒಂದು ವೇಳೆ ಹಸಿರು ಪಟಾಕಿ ಹೊರತು ಪಡಿಸಿ ಅನ್ಯ ಪಟಾಕಿಗಳ ವ್ಯಾಪಾರ ವಹಿವಾಟು ನಡೆಸುವುದು ಕಂಡು ಬಂದರೆ ಅವುಗಳನ್ನು ವಶಕ್ಕೆ ತೆಗೆದುಕೊಳ್ಳುವುದು ಎಂಬುದೂ ಸೇರಿದಂತೆ ಹಲವು ಸೂಚನೆಗಳನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಿದೆ.