* ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿತ, ಗಡ್ಡ ಕತ್ತರಿಸಿ ಹಲ್ಲೆ* ಕೋಮು ಬಣ್ಣ ಪಡೆದಿದ್ದ ವೈಯುಕ್ತಿಕ ದ್ವೇಷ ಪ್ರಕರಣ* ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ದಾಖಲಾಯ್ತು ಕೇಸ್* ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸೇರಿ ಅನೇಕರ ವಿರುದ್ಧ ದೂರು
ನವದೆಹಲಿ(ಜೂ.17): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವೃದ್ಧನ ಗಡ್ಡ ಕತ್ತರಿಸಿ ಹಲ್ಲೆ ನಡೆಸಿದ ವಿಚಾರವಾಗಿ ಪೊಲೀಸರು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸ್ವರಾ ಹೊರತುಪಡಿಸಿ ಅರ್ಫಾ ಖಾನಂ ಶೇರ್ವಾನಿ, ಆಸಿಫ್ ಖಾನ್, ಟ್ವಿಟರ್ ಇಂಡಿಯಾ ಹಾಗೂ ಟ್ವಿಟರ್ ಇಂಡಿಯಾದ ಮುಖ್ಯಸ್ಥ ಮನೀಷ್ ಮಹೇಶ್ವರಿ ಹೆಸರು ಕೂಡಾ ಈ ದೂರಿನಲ್ಲಿದೆ. ಇವರೆಲ್ಲರ ವಿರುದ್ಧ ಪ್ರಚೋದನಕಾರಿ ಟ್ವೀಟ್ ಮಾಡಿರುವ ಆರೋಪವಿದೆ. ವಕೀಲ ಅಮಿತ್ ಆಚಾರ್ಯ ಇವರೆಲ್ಲರ ವಿರುದ್ಧ ದೆಹಲಿಯ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಿದ್ದರೂ ಈವತರೆಗೆ ಎಫ್‌ಐಆರ್ ದಾಖಲಾಗಿಲ್ಲ, ತಾವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
'ಮುಸ್ಲಿಂ ವ್ಯಕ್ತಿ ಗಡ್ಡ ಬೋಳಿಸಿ ಜೈ ಶ್ರೀರಾಮ್ ಘೋಷಣೆ ಕೂಗು ಎಂದ್ರು'
ಇನ್ನು ಇದಕ್ಕೂ ಮುನ್ನ ಇದೇ ಪ್ರಕರಣ ಸಂಬಂಧ ಪತ್ರಕರ್ತರು ಹಾಗೂ ಇಬ್ಬರು ಕಾಂಗ್ರೆಸ್ ನಾಯಕರ ವಿರುದ್ಧವೂ ದೂರು ದಾಖಲಾಗಿತ್ತು. ಪತ್ರಕರ್ತರಾದ ರಾಣಾ ಅಯೂಬ್ ಮತ್ತು ಸಬಾ ನಖ್ವಿ, ಫ್ಯಾಕ್ಟ್ ಚೆಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್‌ನ ಲೇಖಕ ಜುಬೈರ್, ಕಾಂಗ್ರೆಸ್ ನಾಯಕರಾದ ಡಾ.ಶಮಾ ಮೊಹಮ್ಮದ್ ಮತ್ತು ನಿಜಾಮ್ ಸೇರಿ ಅನೇಕ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಧಾರ್ಮಿಕ ಭಾವನೆ ಕೆಣಕುವ ಯತ್ನ
ಇನ್ನು ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಇದರಲ್ಲಿ ವೃದ್ಧ ಅಬ್ದುಲ್ ಸಮದ್ ಸೈಫಿಯನ್ನು ಕೆಲವರು ಬಲವಂತವಾಗಿ ಹೊಡೆಯುವುದು ಮತ್ತು ಅವನ ಗಡ್ಡವನ್ನು ಕತ್ತರಿಸುವ ದೃಶ್ಯಗಳಿವೆ. ಆದರೆ ಮುಂದೆ ಇಲ್ಲಿ ಥಳಿಸಿದವರು ಹಿಂದೂಗಳೆಂಬ ಆರೋಪ ಮಾಡಲಾಗಿದೆ. ಇವರು ಬಲವಂತವಾಗಿ ಜೈಶ್ರೀರಾಮ್ ಎನ್ನುವಂತೆ ವೃದ್ಧನಿಗೆ ಒತ್ತಾಯಿಸುತ್ತಿದ್ದರು. ಈ ವಿಡಿಯೋವನ್ನು ವೈರಲ್ ಮಾಡಿ ಕೋಮು ಗಲಭೆ ಹುಟ್ಟುಹಾಕುವ ಯತ್ನ ನಡೆಸಿದ್ದಾರೆ ಎಂದಿದ್ದಾರೆ.
ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!
ಏನಿದು ಪ್ರಕರಣ?
ಕಳೆದ ಕೆಲ ದಿನಗಳ ಹಿಂದೆ ಗಾಜಿಯಾಬಾದ್ ಜಿಲ್ಲೆಯ ವೃದ್ಧ ಮುಸ್ಲಿಂ ವ್ಯಕ್ತಿ ಸೂಫಿ ಅಬ್ದುಲ್ ಸಮದ್ ಎಂಬವರನ್ನು ಯುವಕರ ತಂಡ ಥಳಿಸಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಇದಲ್ಲಿ ವೃದ್ಧನನ್ನು ಕೋಣೆಯಲ್ಲಿ ಬಂಧಿಸಿ ಥಳಿಸಿದ್ದಲ್ಲದೇ, ಆತನ ಗಡ್ಡ ಕತ್ತರಿಸಿ ಹಿಂಸಿಸುತ್ತಿದ್ದ ದೃಶ್ಯಗಳಿದ್ದವು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೋಮು ಬಣ್ಣ ಪಡೆದುಕೊಂಡಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಇದೊಂದು ಕೋಮು ಗಲಭೆಯಲ್ಲ, ಬದಲಾಗಿ ವೈಯುಕ್ತಿಕ ದ್ವೇಷದಿಂದಾದ ಕೃತ್ಯ. ಆದರೆ ಇದನ್ನು ತಿರುಚುವ ಯತ್ನ ನಡೆಸಲಾಗಿದೆ ಎಂದಿದ್ದಾರೆ.
