* ಪ್ರಾರ್ಥನೆಗೆಂದು ತೆರಳುತ್ತಿದ್ದ ಮುಸ್ಲಿಂ ವ್ಯಕ್ತಿಯ ಮೇಲೆ ದುಷ್ಕರ್ಮಿಗಳ ದಾಳಿ* ಮುಸ್ಲಿಂ ವ್ಯಕ್ತಿಯ ಮೇಲೆ ದಾಳಿ ಮಾಡಿದ  ಇಬ್ಬರ ತಂಡ* ಪಾಕಿಸ್ತಾನದ ಗೂಢಚಾರಿ ಎಂದು ಆರೋಪಿಸಿ ಹಲ್ಲೆ* ಇತರೆ ಮುಸ್ಲಿಮರ ಮೇಲೆಯೂ ದಾಳಿ ಮಾಡಿದ್ದೇವೆ

ಗಾಜಿಯಾಬಾದ್​​ (ಜೂ. 14) ಪ್ರಾರ್ಥನೆ ಮಾಡಲು ಮಸೀದಿಗೆ ತೆರಳುತ್ತಿದ್ದ ಹಿರಿಯ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆಟೋದಲ್ಲಿ ತೆರಳುತ್ತಿದ್ದ ಅಬ್ದುಲ್ ಸಮದ್ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಮಾಡಿ ವ್ಯಕ್ತಿಯ ಗಡ್ಡ ಕತ್ತರಿಸಿ ಹಿಂಸಿಸಿದ್ದಾರೆ. ಜೈ ಶ್ರೀರಾಮ್ ಮತ್ತು ವಂದೇ ಮಾತರಂ ಎಂದು ಘೋಷಣೆ ಕೂಗಲು ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ.

ಕ್ಷೌರ ಮಾಡಲು ಕೇಳಿದ್ದಕ್ಕೆ ದಲಿತರ ಮೇಲೆ ಹಲ್ಲೆ

ಅಬ್ದುಲ್ ಸಮದ್ ಪಾಕಿಸ್ತಾನಿ ಗೂಢಚಾರಿ ಎಂದು ಆರೋಪಿಸಿದ್ದಾರೆ. ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ.

ದುಷ್ಕರ್ಮಿಗಳ ಗುಂಪಿನಲ್ಲಿದ್ದ ಒಬ್ಬ ವ್ಯಕ್ತಿ ಸಮದ್​​ ಅವರ ಗಡ್ಡ ಕತ್ತರಿಸುವ ಪ್ರಯತ್ನ ನಡೆಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸಮದ್​, ತಮ್ಮನ್ನು ಬಿಟ್ಟು ಬಿಡುವಂತೆ ಅವರನ್ನು ಕೋರಿಕೊಂಡಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ. ವಿಡಿಯೋದಲ್ಲಿ ಇಬ್ಬರು ಯುವಕರು ಕಂಡು ಬಂದಿದ್ದಾರೆ. 

ಈ ಘಟನೆ ಕುರಿತು ಮಾತನಾಡಿರುವ ಸಮದ್​, ಆಟೋದಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಯುವಕರು ಬಂದು ಆಟೋ ಏರಿದರು. ಈ ವೇಳೆ ಅವರು ನನ್ನನ್ನು ಒಂದು ರೂಂಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದರು. ನನ್ನ ಮೊಬೈಲ್​ ಅನ್ನು ಈ ವೇಳೆ ಕಿತ್ತುಕೊಂಡರು. ಬಿಳಿ ಬಣಣದ ಉದ್ದ ಟಿ ಶರ್ಟ್​ ಧರಿಸಿದ ಯುವಕ ನನ್ನ ಗಡ್ಡವನ್ನು ಚಾಕುವಿನಿಂದ ಕತ್ತರಿಸಿದ ಎಂದು ಘಟನೆ ವಿವರ ನೀಡಿದ್ದಾರೆ.

ಇತರೆ ಮುಸ್ಲಿಮರ ಮೇಲೆ ದಾಳಿ ಮಾಡಿ ಹಿಂಸೆ ಕೊಟ್ಟಿರುವ ವಿಡಿಯೋವನ್ನು ನನಗೆ ತೋರಿಸಿದರು. ನಮ್ಮ ಮಾತು ಕೇಳದ ಅನೇಕ ಮುಸ್ಲಿಮರನ್ನು ಹತ್ಯೆ ಮಾಡಿದ್ದು ನಿನಗೂ ಅದೇ ಗತಿಯಾಗುತ್ತದೆ ಎಂದು ಬೆದರಿಸಿದರು ಎಂದು ಸಮದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಲೋನಿಯ ಹಿರಿಯ ಪೊಲೀಸ್​ ಅಧಿಕಾರಿ ಅತುಲ್​ ಕುಮಾರ್​ ಸೋನ್ಕರ್​, ಪ್ರಕರಣ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ. 

Scroll to load tweet…