ಸ್ಕಾರ್ಪಿಯೋ ಕಾರ್‌ನ ಏರ್‌ಬ್ಯಾಗ್ ಓಪನ್ ಆಗದ ಕಾರಣ ಮಗನ ಸಾವು, ಕಾರ್ ಕಂಪನಿ ಮಾಲೀಕನ ವಿರುದ್ಧ ಎಫ್‌ಐಆರ್!
ಉತ್ತರ ಪ್ರದೇಶದ ಕಾನ್ಪುರದಲ್ಲಿ ವ್ಯಕ್ತಿಯೊಬ್ಬ ಆನಂದ್ ಮಹೀಂದ್ರಾ ಸೇರಿದಂತೆ ಮಹೀಂದ್ರಾ & ಮಹೀಂದ್ರಾ ಕಂಪನಿಯ 13 ಉದ್ಯೋಗಿಗಳ ವಿರುದ್ಧ ವಂಚನೆ ಸೇರಿದಂತೆ ಗಂಭೀರ ಪ್ರಮಾಣದ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ.

ನವದೆಹಲಿ (ಸೆ.25): ವಂಚನೆ ಸೇರಿದಂತೆ ಇತರ ಗಂಭೀರ ಆರೋಪಗಳ ಅಡಿಯಲ್ಲಿ ಉತ್ತರ ಪ್ರದೇಶದ ಕಾನ್ಪುರದ ರಾಯ್‌ಪುರ್ವಾ ಪೊಲೀಸ್ ಠಾಣೆಯಲ್ಲಿ ಆನಂದ್ ಮಹೀಂದ್ರಾ ಸೇರಿದಂತೆ ಮಹೀಂದ್ರಾ & ಮಹೀಂದ್ರಾ ಕಂಪನಿಯ 13 ಮಂದಿ ಉದ್ಯೋಗಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲು ಮಾಡಿರುವ ಆರೋಪಿಯ ಪ್ರಕಾರ, ಆನಂದ್ ಮಹಿಂದ್ರಾ ಮಾಲೀಕತ್ವದ ಮಹೀಂದ್ರಾ & ಮಹೀಂದ್ರಾ ಕಂಪನಿ ಹಾಗೂ ಅದರ ಉದ್ಯೋಗಿಗಳು ಏರ್‌ಬ್ಯಾಗ್ ಇಲ್ಲದ ಕಾರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ನನ್ನ ಏಕೈಕ ಉಪತ್ರ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇಲ್ಲಿನ ಜುಹಿ ನಿವಾಸಿಯಾಗಿರುವ ರಾಜೇಶ್ ಮಿಶ್ರಾ ಈ ದೂರು ನೀಡಿದ್ದಾರೆ. 2020ರ ಡಿಸೆಂಬರ್ 2 ರಂದು ಇಲ್ಲಿನ ಜರೀಬ್ ಚೌಕಿಯಲ್ಲಿನ ತಿರುಪತಿ ಆಟೋ ಡೀಲರ್‌ಶಾಪ್‌ನಲ್ಲಿ 17.39 ಲಕ್ಷ ರೂಪಾಯಿ ಹಣ ನೀಡಿ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್‌ಅನ್ನು ಖರೀದಿ ಮಾಡಿದ್ದೆ. ಇದೇ ವೇಳೆ ಕಂಪನಿ ಕೂಡ ಕಾರ್‌ನ ಫೀಚರ್‌ಗಳು ಹಾಗೂ ಅದರಲ್ಲಿನ ಸೇಫ್ಟಿಯ ಬಗ್ಗೆ ನನಗೆ ವಿವರಣೆ ನೀಡಿತ್ತು. ಅದಲ್ಲದೆ, ಆನಂದ್ ಮಹೀಂದ್ರಾ ವಿವಿಧ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ತೋರಿಸಿದ್ದ ಜಾಹೀರಾತನ್ನು ಕೂಡ ನೋಡಿದ್ದಾಗಿ ಹೇಳಿದ್ದರು. ಹಾಗಾಗಿ ತಮ್ಮ ಏಕೈಕ ಪುತ್ರ ಡಾ. ಅಪೂರ್ವ ಮಿಶ್ರಾಗೆ ಈ ಕಾರ್‌ಅನ್ನು ಉಡುಗೊರೆಯಾಗಿ ನೀಡಿದ್ದರು ಎಂದು ದೂರಿನಲ್ಲಿ ಬರೆದಿದ್ದಾರೆ.
ಹೀಗಿರುವಾಗ 2022ರ ಜನವರಿ 14 ರಂದು ಅಪೂರ್ವ ಲಕ್ನೋದಿಂದ ಕಾನ್ಪುರಕ್ಕೆ ತನ್ನ ಸ್ನೇಹಿತರ ಜೊತೆ ವಾಪಾಸಾಗುತ್ತಿದ್ದಾಗ, ಕಾರಿನ ಗಾಜಿನ ಮೇಲೆ ಮಂಜು ಕುಳಿತಿದ್ದರಿಂದ ಕಾರು ಡಿವೈಡರ್‌ಗೆ ಬಡಿದು ಪಲ್ಟಿಯಾಗಿತ್ತು. ಅಪೂರ್ವ ಸ್ಥಳದಲ್ಲಿಯೇ ಸಾವು ಕಂಡಿದ್ದರು. ಆ ಬಳಿಕ ಜನವರಿ 29 ರಂದು ತಿರುಪತಿ ಆಟೋ ಡೀಲರ್‌ಶಾಪ್‌ಗೆ ತೆರಳಿದ್ದ ರಾಜೇಶ್ ಮಿಶ್ರಾ, ಕಾರ್‌ನಲ್ಲಿರುವ ದೋಷಗಳ ಬಗ್ಗೆ ವಿವರಣೆ ನೀಡಿದ್ದರು. ಕಾರ್ ಓಡಿಸುವಾಗ ನನ್ನ ಮಗ ಸೀಟ್ ಬೆಲ್ಟ್ ಧರಿಸಿದ್ದ ಆದರೂ, ಅಪಘಾತವಾದ ಸಮಯದಲ್ಲಿ ಕಾರಿನ ಏರ್‌ಬ್ಯಾಗ್ ಓಪನ್ ಆಗಿರಲಿಲ್ಲ. ನೀವು ಜನರಿಗೆ ವಂಚನೆ ಮಾಡಿ ಕಾರ್‌ಗಳ ಮಾರಾಟ ಮಾಡುತ್ತಿದ್ದೀರಿ ಎಂದು ಆರೋಪ ಮಾಡಿದ್ದರು. ಹಾಗೇನಾದರೂ ಕಾರು ಉತ್ಪಾದನೆಯಾಗುವ ಸಮಯದಲ್ಲಿ ಕಾರ್‌ಅನ್ನು ಸರಿಯಾಗ ಪರಿಶೀಲನೆ ಮಾಡಿದ್ದರೆ, ಖಂಡಿತವಾಗಿಯೂ ನನ್ನ ಮಗ ಬದುಕುತ್ತಿದ್ದ ಎಂದು ಅಲ್ಲಿನ ಅಧಿಕಾರಿಗಳ ಮುಂದೆ ಹೇಳಿದ್ದರು.
ಈ ವಿಚಾರವನ್ನು ಅಲ್ಲಿನ ಅಧಿಕಾರಿಗಳ ಮುಂದೆ ಹೇಳಿದಾಗ ಅವರು ಇದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ ಎಂದು ರಾಜೇಶ್ ಮಿಶ್ರಾ ದೂರಿನಲ್ಲಿ ತಿಳಿಸಿದ್ದಾರೆ. ಆ ಬಳಿಕ ನನ್ನ ದೂರಿನ ಬೆನ್ನಲ್ಲಿಯೇ ತಿರುಪತಿ ಆಟೋದ ನಿರ್ದೇಶಕರಾದ ಚಂದ್ರಪ್ರಕಾಶ್ ಗುರ್ಹಾನಿ, ವಿಕ್ರಮ್ ಸಿಂಗ್ ಮೆಹ್ತಾ, ರಾಜೇಶ್ ಗಣೇಶ್, ಮುತ್ತಯ್ಯ ಮುರುಗಪ್ಪನ್, ವಿಶಾಂಕಾ ನೀರೂಭಾಯಿ, ನಿಶಬ್ ಗೋದ್ರೇಜ್, ಆನಂದ್ ಗೋಪಾಲ್ ಮಹೀಂದ್ರಾ, ಶಿಖಾ ಸಂಜನಯ್, ವಿಜಯ್ ಕುಮಾರ್ ಶರ್ಮ ಹೆಸರುಗಳನ್ನು ಸೇರಿಸಿದ್ದು, ತನ್ನ ಮಗನ ಸಾವಿಗೆ ಇವರೆಲ್ಲರೂ ಕಾರಣ ಎಂದು ತಿಳಿಸಿದ್ದಾರೆ.
ಕಂಪನಿಯ ಮ್ಯಾನೇಜರ್ ಆ ಕಂಪನಿಯ ನಿರ್ದೇಶಕದ ಸೂಚನೆಯ ಮೇರೆಗೆ ನನ್ನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ, ನಮ್ಮ ಇಡೀ ಕುಟುಂಬವನ್ನು ನಾಶ ಮಾಡುವ ಬೆದರಿಕೆ ಹಾಕಿದ್ದಾರೆ. ಆ ಬಳಿಕ ನಾನು ಸ್ಕಾರ್ಪಿಯೋ ಕಾರ್‌ಅನ್ನು ಲಿಫ್ಟ್ ಮಾಡಿಸಿ ರುಮಾದಲ್ಲಿರುವ ಮಹೀಂದ್ರಾ ಕಂಪನಿಯ ಶೋ ರೂಮ್ ಎದುರುಗಡೆ ಪಾರ್ಕ್ ಮಾಡಿದ್ದೆ ಎಂದು ರಾಜೇಶ್ ಮಿಶ್ರಾ ತಿಳಿಸಿದ್ದಾರೆ. ಕಂಪನಿ ಈ ಕಾರ್‌ಗಳಲ್ಲಿ ಏರ್‌ಬ್ಯಾಗ್ ಹಾಕಿರಲೇ ಇಲ್ಲ ಎಂದು ರಾಜೇಶ್ ಮಿಶ್ರಾ ದೂರಿದ್ದಾರೆ.
ಈಗಾಗಲೇ ತಲುಪಿದೆ, ಸಿರಾಜ್‌ಗೆ ಥಾರ್ ಕಾರು ಗಿಫ್ಟ್ ಕೊಡಿ ಫ್ಯಾನ್ಸ್ ಮನವಿಗೆ ಆನಂದ್ ಮಹೀಂದ್ರ ಉತ್ತರ ವೈರಲ್!
ಮಹೀಂದ್ರಾ & ಮಹೀಂದ್ರಾ ಕಂಪನಿಯ ಮಾಲೀಕ ಆನಂದ್ ಮಹೀಂದ್ರಾ ಸೇರಿದಂತೆ 13 ಮಂದಿ ಕಂಪನಿಯ ಉದ್ಯೋಗಿಗಳ ವಿರುದ್ಧ ಅವರು ಕೋರ್ಟ್ ಮೂಲಕ ದೂರು ದಾಖಲಿಸಲು ಯಶಸ್ವಿಯಾಗಿದ್ದಾರೆ. ಇದೇ ವೇಳೆ ಪೊಲೀಸ್ ಅಧಿಕಾರಿ ಪ್ರಕರಣ ಬಗ್ಗೆ ತಾಂತ್ರಿಕ ತನಿಖೆಗಳು ಮೊದಲು ನಡೆಯಲಿದೆ ಎಂದು ತಿಳಿಸಿದ್ದಾರೆ.
1999ರಲ್ಲೇ ಎಲೆಕ್ಟ್ರಿಕ್ ವಾಹನ ನಿರ್ಮಿಸಿದ ಸಂಸ್ಥೆಯ ಎಂಜಿನಿಯರ್ ಸ್ಮರಿಸಿದ ಆನಂದ್ ಮಹೀಂದ್ರ
ಕಂಪನಿಯ ಸ್ಪಷ್ಟೀಕರಣ: ಈ ಕುರಿತಂತೆ ಮಹೀಂದ್ರಾ & ಮಹೀಂದ್ರಾ ಕಂಪನಿ ಸ್ಪಷ್ಟೀಕರಣ ನೀಡಿದೆ.ವಾಹನದಲ್ಲಿ ಏರ್‌ಬ್ಯಾಗ್ ಇರಲಿಲ್ಲ ಎಂಬ ಆರೋಪ ಇದರಲ್ಲಿ ಕೇಳಿಬಂದಿದೆ. ಈ ಬಗ್ಗೆ ನಾವು ಸ್ಪಷ್ಟವಾಗಿ ಹೇಳೋದು ಏನೆಂದರೆ, 2020 ರಲ್ಲಿ ತಯಾರಿಸಲಾದ ಸ್ಕಾರ್ಪಿಯೋ S9 ವೇರಿಯೆಂಟ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಇನ್ನು ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಅದು ಏರ್‌ಬ್ಯಾಗ್‌ಗಳ ಅಸಮರ್ಪಕ ಕಾರ್ಯವಾಗಿರಲಿಲ್ಲ. ಇದು ಕಾರ್‌ನ ರೋಲ್‌ಓವರ್ ಕೇಸ್ ಆಗಿದೆ. ಹೀಗಾದಾಗ ಮುಂಭಾಗದ ಏರ್‌ಬ್ಯಾಗ್ ನಿಯೋಜನೆಯಾಗೋದಿಲ್ಲ.ಅಕ್ಟೋಬರ್ 2022 ರಲ್ಲಿ ನಮ್ಮ ತಂಡಗಳು ವಿವರವಾದ ತಾಂತ್ರಿಕ ತನಿಖೆಯನ್ನು ಪೂರ್ಣ ಮಾಡಿವೆ ಎಂದು ತಿಳಿಸಿದೆ.