1999ರಲ್ಲೇ ಎಲೆಕ್ಟ್ರಿಕ್ ವಾಹನ ನಿರ್ಮಿಸಿದ ಸಂಸ್ಥೆಯ ಎಂಜಿನಿಯರ್ ಸ್ಮರಿಸಿದ ಆನಂದ್ ಮಹೀಂದ್ರ
ಇಂದು ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು BYD ಹಾಗೂ ಟೆಲ್ಸಾದಂತಹ ಜಾಗತಿಕ ಸಂಸ್ಥೆಗಳು ಆಳುತ್ತಿವೆ. ಆದರೂ ಅಂತಾರಾಷ್ಟ್ರೀಯ ಮಟ್ಟದ ವಾಹನ ಸಂಸ್ಥೆಗಳು ತಮ್ಮ ಮೊದಲ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸುವ ಮೊದಲೇ ಮಹೀಂದ್ರ ಆಟೋ ಮೊಬೈಲ್ ಸಂಸ್ಥೆ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ನಿರ್ಮಾಣ ಮಾಡಿತ್ತು ಎಂಬ ವಿಚಾರ ನಿಮಗೆ ಗೊತ್ತಾ?
ಮುಂಬೈ: ಇಂದು ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು BYD ಹಾಗೂ ಟೆಲ್ಸಾದಂತಹ ಜಾಗತಿಕ ಸಂಸ್ಥೆಗಳು ಆಳುತ್ತಿವೆ. ಆದರೂ ಅಂತಾರಾಷ್ಟ್ರೀಯ ಮಟ್ಟದ ವಾಹನ ಸಂಸ್ಥೆಗಳು ತಮ್ಮ ಮೊದಲ ಎಲೆಕ್ಟ್ರಿಕ್ ವಾಹನವನ್ನು ನಿರ್ಮಿಸುವ ಮೊದಲೇ ಮಹೀಂದ್ರ ಆಟೋ ಮೊಬೈಲ್ ಸಂಸ್ಥೆ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ನಿರ್ಮಾಣ ಮಾಡಿತ್ತು ಎಂಬ ವಿಚಾರ ನಿಮಗೆ ಗೊತ್ತಾ? ಹೌದು 1999ರಲ್ಲೇ ಮಹೀಂದ್ರ ಆಟೋ ಮೊಬೈಲ್ ಸಂಸ್ಥೆ ಮೂರು ಚಕ್ರಗಳ ಬಿಜ್ಲಿ ಎಂಬ ಎಲೆಕ್ಟ್ರಿಕ್ ಆಟೋ ರೀಕ್ಷಾವನ್ನು ನಿರ್ಮಿಸಿತ್ತು, ಬಿಜ್ಲಿ ಎಂದರೆ ಹಿಂದಿಯಲ್ಲಿ ವಿದ್ಯುತ್ ಹಾಗೂ ಬೆಳಕು ಎಂದರ್ಥ ಈ ಹಿನ್ನೆಲೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಆಟೋಗೆ ಮಹೀಂದ್ರ ಬಿಜ್ಲಿ ಎಂದೇ ಹೆಸರಿಟ್ಟಿತ್ತು.
ಪ್ರತಿವರ್ಷ ಸೆಪ್ಟೆಂಬರ್ 9 ರಂದು ವಿಶ್ವ ಎಲೆಕ್ಟ್ರಿಕ್ ವಾಹನ ದಿನವನ್ನು ಆಚರಿಸಲಾಗುತ್ತದೆ. ಅದರಂತೆ ಮೊನ್ನೆ ಈ ದಿನ ಕಳೆದು ಹೋಗಿದ್ದು, ಉದ್ಯಮಿ ಆನಂದ್ ಮಹೀಂದ್ರ ಅವರು ಈ ದಿನ ತಮ್ಮ ಸಂಸ್ಥೆ ಅಂದು 1999ರಲ್ಲಿ ನಿರ್ಮಿಸಿದ ಎಲೆಕ್ಟ್ರಿಕ್ ಆಟೋ ಹಾಗೂ ಅದನ್ನು ನಿರ್ಮಿಸಿದ ಇಂಜಿನಿಯರ್ ಎಸ್.ವಿ. ನಗರ್ಕರ್ ಜೊತೆ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲೆಕ್ಟ್ರಿಕ್ ವಾಹನ ಖರೀದಿಗೆ ಸುಲಭವಾಗಿಸಲು ಟಾಟಾ ಮೋಟಾರ್ಸ್ ಭರ್ಜರಿ ಸ್ಕೀಮ್!
ಇಂದು ವಿಶ್ವ ಎಲೆಕ್ಟ್ರಿಕ್ ವಾಹನಗಳ ದಿನ ಇದು ನನ್ನನ್ನು ಗತಕ್ಕೆ ಕರೆದೊಯ್ಯಿತು. ಅದು 1999ನೇ ಇಸವಿ ನಿಖರವಾಗಿ ಹೇಳಬೇಕೆಂದರೆ ಅಂದು ಮಹೀಂದ್ರದ (@MahindraRise) ಸ್ಟಾಲ್ ವರ್ಟ್ ಆಗಿದ್ದ ಮಿಸ್ಟರ್ ನಗರ್ಕರ್ (Nagarkar) ಅವರು ನಮ್ಮ ಸಂಸ್ಥೆಯ ಮೊದಲ ಎಲೆಕ್ಟ್ರಿಕ್ ವಾಹನ ಮೂರು ಚಕ್ರದ ಬಿಜ್ಲಿಯನ್ನು ನಿರ್ಮಿಸಿದರು. ನಿವೃತ್ತಿಗೂ ಮೊದಲು ಅವರು ನಮ್ಮ ಸಂಸ್ಥೆಗೆ ನೀಡಿದ ಉಡುಗೊರೆಯಾಗಿತ್ತು ಅದು. ಅವರ ಮಾತನ್ನು ನಾನು ಎಂದಿಗೂ ಮರೆಯುವುದಿಲ್ಲ, ಅವರು ನಮ್ಮ ಈ ಭೂಮಿಗಾಗಿ ಏನಾದರು ಮಾಡಬೇಕೆಂದು ಬಯಸಿದ್ದರು. ಬೇಸರದ ವಿಚಾರವೆಂದರೆ ಅವರು ನಿರ್ಮಿಸಿದ ಬಿಜ್ಲಿ ಆಗಿನ ಸಮಯಕ್ಕಿಂತ ಬಹಳ ಮುಂದಿತ್ತು. ಹಾಗೂ ಕೆಲವು ವರ್ಷಗಳ ಉತ್ಪಾದನೆಯ ನಂತರ ನಾವು ಅದಕ್ಕೆ ಗುಡ್ ಬಾಯ್ ಹೇಳಿದೆವು. ಆದರೆ ಅದರ ನಿರ್ಮಾಣದ ಹಿಂದಿನ ಕನಸು ನಮ್ಮನ್ನು ಸದಾ ಪ್ರೇರೆಪಿಸುತ್ತಲೇ ಇದ್ದು, ನಾವು ಆ ಕನಸನ್ನು ನನಸಾಗಿಸುವವರೆಗೂ ವಿರಮಿಸುವುದಿಲ್ಲ ಎಂದು ಆನಂದ್ ಮಹೀಂದ್ರ (Anand Mahindra) ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಜನ ಈ ಪೋಸ್ಟನ್ನು ವೀಕ್ಷಿಸಿದ್ದು, 300ಕ್ಕೂ ಹೆಚ್ಚು ಜನ ಪೋಸ್ಟ್ ರಿಟ್ವಿಟ್ ಮಾಡಿದ್ದಾರೆ. ಇದಾಗಿ 24 ವರ್ಷಗಳು ಕಳೆದ ನಂತರ ಇಂದು ಎಲೆಕ್ಟ್ರಿಕ್ ವಾಹನಗಳಿಗೆ (electric vehicle) ಬೇಡಿಕೆ ಬಂದಿದೆ. ಜನ ಎಲೆಕ್ಟ್ರಿಕ್ ವಾಹನಗಳತ್ತ ಮನಸ್ಸು ಮಾಡುತ್ತಿದ್ದಾರೆ. ನಮ್ಮ ಪರಿಸರ ರಕ್ಷಿಸುವ ಅಗತ್ಯ ಜನರಿಗೆ ತಿಳಿದಿದೆ. ಇವತ್ತು ದೊಡ್ಡ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನಗಳು ಉತ್ಪಾದನೆಯಾಗುತ್ತಿವೆ. ಈ ಮೂಲಕ ಜಗತ್ತು ವಾಸಕ್ಕೆ ಯೋಗ್ಯವಾದ ಉತ್ತಮ ಸ್ಥಳವಾಗಿ ಉಳಿಸಿಕೊಳ್ಳುವ ಬಾಧ್ಯತೆ ಎಲ್ಲರ ಮೇಲಿದೆ ಎಂದು ಒಬ್ಬರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು 24 ವರ್ಷಗಳ ಹಿಂದೆಯೇ ಎಂಜಿನಿಯರ್ ನಗರ್ಕರ್ ಅವರಿಗಿದ್ದ ದೂರದೃಷ್ಟಿಗೆ ಶಹಭಾಷ್ ಎಂದಿದ್ದಾರೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಮೇಲುಗೈ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್
ಮತ್ತೆ ಕೆಲವರು ತಾವು ಬಿಜ್ಲಿಯಲ್ಲಿ ಸಂಚರಿಸಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. 2001ರಲ್ಲಿ ಮುಂಬೈನಲ್ಲಿ ನಾನೊಮ್ಮೆ ಬಿಜ್ಲಿಯಲ್ಲಿ ಸಂಚರಿಸಿದ್ದೆ. ಅದರ ಅನುಭವ ಅದ್ಭುತವಾಗಿತ್ತು. ಸದ್ದಿಲ್ಲದ ನಿಶ್ಯಬ್ಧ ಪ್ರಯಾಣವದು. ಜೊತೆಗೆ ಆಟೋ ಕೂಡ ಮೃದುವಾಗಿತ್ತು. ಅಂದಿನಿಂದ ಇಂದಿನಿವರೆಗೆ ಮತ್ತೆಂದು ನನಗೆ ಆ ಅನುಭವ ಆಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.